ಮಾಜಿ ಸಚಿವ ಜನಾರ್ದನ ರೆಡ್ಡಿ (Gali Janardhana Reddy) ಕೆಆರ್ ಪಿಪಿ ಪಕ್ಷ (KRPP) ಸ್ಥಾಪನೆ ಮಾಡಿದ್ದಾಯ್ತು. ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ವಿವಿಧ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದಾಯ್ತು. ಇದೀಗ ರೆಡ್ಡಿ ಕಣ್ಣು ಪಾಲಿಕೆಯ ಕಾಂಗ್ರೆಸ್ ಸದಸ್ಯರ ಮೇಲೆ ಬಿದ್ದಿದೆ. ಕೈ ಪಡೆ ವಶದಲ್ಲಿರುವ ಬಳ್ಳಾರಿ ಮಹಾನಗರ ಪಾಲಿಕೆ (Ballari City Corporation) ವಶಪಡಿಸಿಕೊಳ್ಳಲು ರೆಡ್ಡಿ ರಣತಂತ್ರ ರೂಪಿಸುತ್ತಿದ್ದಾರೆ.. ಅಷ್ಟಕ್ಕೂ ರೆಡ್ಡಿಗ್ಯಾಕೆ ಪಾಲಿಕೆಯ ಮೇಲೆ ಕಣ್ಣು.. ಪಾಲಿಕೆಯ ಕಾಂಗ್ರೆಸ್ ಸದಸ್ಯರಿಗೆ ರೆಡ್ಡಿ ನೀಡಿದ ಆಫರ್ ಎಂತಹದ್ದೂ.. ಆ ಕುರಿತಾದ ಒಂದು ವರದಿ ಇದೆ ನೋಡಿ.. ಬಳ್ಳಾರಿ ಮಹಾನಗರ ಪಾಲಿಕೆ ಮೇಲೆ ಗಣಿ ಧಣಿ ರೆಡ್ಡಿ ಕಣ್ಣು.. ಪಾಲಿಕೆಯ ಕಾಂಗ್ರೆಸ್ ಸದಸ್ಯರನ್ನ ಪಕ್ಷದತ್ತ ಸೆಳೆಯಲು ರೆಡ್ಡಿ ರಣತಂತ್ರ.. ಕಾಂಗ್ರೆಸ್ ಸದಸ್ಯರಿಗೆ ರೆಡ್ಡಿಯಿಂದ ಕೋಟಿ ಕೋಟಿ ಆಮಿಷ.. ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ (Mayor) ಕೆಆರ್ ಪಿಪಿ ಆಗುತ್ತಾ ಕಿಂಗ್ ಮೇಕರ್..? ಯೆಸ್. ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್-ಬಿಜೆಪಿ ಸದಸ್ಯರನ್ನ ಸೆಳೆದು ಕೆಆರ್ ಪಿಪಿ ಕಿಂಗ್ ಮೇಕರ್ ಆಗಲು ಪ್ಲ್ಯಾನ್..
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 21ರಂದು ನಡೆಯಲಿರುವ ಎರಡನೇ ಅವಧಿಯ ಮೇಯರ್ ಉಪಮೇಯರ್ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಮಹಾನಗರ ಪಾಲಿಕೆಯಲ್ಲಿ 13 ಬಿಜೆಪಿ ಸದಸ್ಯರಿದ್ದರೆ ಐವರು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಒಟ್ಟು 26 ಸದಸ್ಯರ ಬಲಾಬಲ ಹೊಂದಿರುವ ಕಾಂಗ್ರೆಸ್ ಪಕ್ಷದ ಸದಸ್ಯರ ಮೇಲೆ ಕೆಆರ್ ಪಿಪಿ ಕಣ್ಣು ಬಿದ್ದಿದೆ.
ಪಕ್ಷೇತರ ಸದಸ್ಯರು, ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಸದಸ್ಯರಿಗೆ ಕೆಆರ್ ಪಿಪಿ ಸಾರಥಿ ಜನಾರ್ದನ ರೆಡ್ಡಿ ಕೋಟಿ ಕೋಟಿ ಹಣದ ಆಮಿಷವೊಡ್ಡುತ್ತಿದ್ದಾರೆ ಎನ್ನಲಾಗಿದೆ. ಪಾಲಿಕೆಯ ಸದಸ್ಯರನ್ನ ಕೆಆರ್ ಪಿಪಿಯತ್ತ ಸೆಳೆದು ಪಾಲಿಕೆಯ ಗದ್ದುಗೆ ಹಿಡಿಯಲು ರೆಡ್ಡಿ ತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ ಪಾಲಿಕೆಯ ಕೆಲ ಸದಸ್ಯರಿಗೆ ಇದೀಗ ಕೋಟಿ ಕೋಟಿ ಹಣದ ಆಮಿಷ ಬಂದಿರುವುದು ಕೈ ಪಾಳಯದಲ್ಲಿ ನಡುಕು ಹುಟ್ಟಿಸಿದೆ.
ಕಾಂಗ್ರೆಸ್ ಸದಸ್ಯರಲ್ಲೆ 2-3 ಗುಂಪುಗಳಾಗಿದ್ದು ಒಂದೆರೆಡು ಗುಂಪಿನ ಸದಸ್ಯರನ್ನ ಪಕ್ಷದತ್ತ ಸೆಳೆದು ಮೇಯರ್ ಚುನಾವಣೆಯಲ್ಲಿ ಕಮಾಲ್ ಮಾಡಲು ರೆಡ್ಡಿ ಹೊರಟಿದ್ದಾರೆ. ಆದ್ರೆ ಕಾಂಗ್ರೆಸ್ ಸದಸ್ಯರು ಮಾತ್ರ ನಾವೆಲ್ಲಾ ಒಂದಾಗಿದ್ದೇವೆ. ನಮ್ಮ ಮಧ್ಯೆ ಬಿರುಕು ಮೂಡಿಸಲು ಮುಂದಾಗಿರುವುದು ಸತ್ಯ. ಆದ್ರೆ ನಾವೆಲ್ಲಾ ಒಂದಾಗಿದ್ದೇವೆ ಅಂತಾ ರೆಡ್ಡಿ ಪ್ಲ್ಯಾನ್ಗೆ ‘ಕೈ’ ಎತ್ತಿದ್ದಾರೆ.
ಪರಿಶಿಷ್ಟ ಜಾತಿಗೆ ಸೀಮಿತವಾಗಿರುವ ಮೇಯರ್ ಸ್ಥಾನ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿರುವ ಉಪಮೇಯರ್ ಸ್ಥಾನಕ್ಕಾಗಿ ಈಗಾಗಲೇ ಕಾಂಗ್ರೆಸ್ ಸದಸ್ಯರ ಮಧ್ಯೆ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್ ಪಕ್ಷದ 26 ಸದಸ್ಯರ ಪೈಕಿ 6 ಸದಸ್ಯರು ಮೇಯರ್ ಸ್ಥಾನಕ್ಕೇರಲು ಅರ್ಹರಾಗಿದ್ದು, ಬಿಜೆಪಿಯಲ್ಲಿ ಇಬ್ಬರು ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದಾರೆ.
ಹೀಗಾಗಿ ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿನ ಮೇಯರ್ ಸ್ಥಾನದ ಆಕ್ಷಾಂಕಿಗಳನ್ನೆ ಪಕ್ಷದತ್ತ ಸೆಳೆಯಲು ರೆಡ್ಡಿ ತಂತ್ರ ಮಾಡ್ತಿದ್ದಾರೆ. ಮೇಯರ್ -ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಸದಸ್ಯರನ್ನ ಪಕ್ಷದತ್ತ ಸೆಳೆದು ಮೇಯರ್ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಲು ರೆಡ್ಡಿ ಹೊರಟಿದ್ದಾರೆ. ಅಲ್ಲದೇ ಪಾಲಿಕೆಯ ಸದಸ್ಯರು ಕೆಆರ್ ಪಿಪಿ ಪಕ್ಷಕ್ಕೆ ಬೆಂಬಲ ನೀಡಿದ್ರೆ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ತಮ್ಮ ಪತ್ನಿ ಲಕ್ಷ್ಮೀ ಅರುಣಾ ಗೆಲುವಿಗೂ ಸಹಕಾರವಾಗಲಿದೆ ಅನ್ನೋದು ರೆಡ್ಡಿ ರಣತಂತ್ರವಾಗಿದೆ. ಹೀಗಾಗಿ ಪಾಲಿಕೆಯ ಸದಸ್ಯರನ್ನ ಪಕ್ಷದತ್ತ ಸೆಳೆಯಲು ರೆಡ್ಡಿ ತಂತ್ರ ಮಾಡ್ತಿದ್ದಾರೆ. ಆದ್ರೆ ಕಾಂಗ್ರೆಸ್ ಸದಸ್ಯರು ಮಾತ್ರ ನಾವೆಲ್ಲಾ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ದವಾಗಿದ್ದೇವೆ. ಪಕ್ಷ ಅವಕಾಶ ಕಲ್ಪಿಸಿದ್ರೆ ಮೇಯರ್ ಆಗುತ್ತೇವೆ ಅಂತಿದ್ದಾರೆ.
ಮೇಯರ್, ಉಪಮೇಯರ್ ಚುನಾವಣೆಗೆ ಇನ್ನೊಂದು ವಾರ ಬಾಕಿಯುಳಿದಿದೆ. ಹೀಗಾಗಿ ಪಾಲಿಕೆಯ ಸದಸ್ಯರನ್ನ ಸೆಳೆಯಲು ರೆಡ್ಡಿ ಈಗಾಗಲೇ ಸದಸ್ಯರಿಗೆ ಆಮಿಷವೊಡ್ಡುತ್ತಿದ್ದಾರೆ. ಇದ್ರಿಂದ ಕಾಂಗ್ರೆಸ್-ಬಿಜೆಪಿ ಪಾಳೆಯದಲ್ಲಿ ನಡುಕ ಉಂಟಾಗಿದ್ದು. ಪಕ್ಷದ ಸದಸ್ಯರನ್ನ ತಮ್ಮ ತಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ. ಹೀಗಾಗಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಕೆಆರ್ ಪಿಪಿ ಪಕ್ಷ ಕಿಂಗ್ ಮೇಕರ್ ಆಗುತ್ತಾ.. ಕಾಂಗ್ರೆಸ್ -ಬಿಜೆಪಿ ಸದಸ್ಯರು ಕೆಆರ್ ಪಿಪಿ ಪಕ್ಷದ ಮೂಲಕ ಮೇಯರ್ ಸ್ಥಾನದ ಗದ್ದುಗೆ ಏರುತಾರಾ ಅನ್ನೋದನ್ನ ಕಾಯ್ದುನೋಡಬೇಕಿದೆ. ಇದಕ್ಕೆ ಅಲ್ವೇ! ರೆಡ್ಡಿ ರಾಜಕೀಯ ಅಂದ್ರೆ ಡೇಂಜರ್ ಅನ್ನೋದು…
ವರದಿ: ವೀರೇಶ್ ದಾನಿ ಟಿವಿ9 ಬಳ್ಳಾರಿ