ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ; ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ

| Updated By: Rakesh Nayak Manchi

Updated on: Oct 21, 2022 | 1:01 PM

Belagavi news: ಕಬ್ಬು ಬೆಳೆಯ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿದ ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದು, ಮೂವತ್ತಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ; ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ
Follow us on

ಬೆಳಗಾವಿ: ಕಬ್ಬಿನ ಬೆಲೆಯನ್ನು ಹೆಚ್ಚಳ ಮಾಡುವಂತೆ ಅಗ್ರಹಿಸುತ್ತಿರುವ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹುಕ್ಕೇರಿ ತಾಲೂಕಿನ ಹತ್ತರಗಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು ಬಳಿಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಾಮಕಿ ನಡೆಯಿತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ರೈತರನ್ನು ವಶಕ್ಕೆ ಪಡೆದರು.

ಅರೆಬೆತ್ತಲೆಯಾಗಿ ರೈತರ ಪ್ರತಿಭಟನೆ

ಪ್ರತಿ ಟನ್ ಕಬ್ಬಿಗೆ 5500 ರೂಪಾಯಿ ದರ ನಿಗದಿ ಮಾಡುವಂತೆ ಒತ್ತಾಯಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ರೈತರನ್ನು ಹತ್ತರಗಿ ಟೋಲ್‌ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಈ ವೇಳೆ ಅರೆಬೆತ್ತಲೆಯಾಗಿ ರೈತರು ಪ್ರತಿಭಟನೆ ನಡೆಸಿದ್ದಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಧರಣಿ ಕುಳಿತ ಮೂವತ್ತಕ್ಕೂ ಅಧಿಕ ರೈತರನ್ನ ಪೊಲೀಸರು ವಶಕ್ಕೆ ಪಡೆದರು. ಅದರಂತೆ ರೈತರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟವೂ ನಡೆದಿದ್ದು, ಪೊಲೀಸರನ್ನು ಬಳಸಿ ಪ್ರತಿಭಟನೆ ಹತ್ತಿಕ್ಕುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ರೈತರ ಪ್ರತಿಭಟನೆ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರತಿಭಟನಾ ಸ್ಥಳದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Fri, 21 October 22