ಬೆಳಗಾವಿ: ಜೀವದ ಹಂಗು ತೊರೆದು ಕೊರೊನಾ ಸೋಂಕಿತರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಗೊತ್ತಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಕೊರೊನಾದಿಂದ ಬಳಲುತ್ತಿರುವವರ ಪಾಲಿಗೆ ದೇವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಜೀವ ಅಷ್ಟೇ ಅಲ್ಲ, ತಮ್ಮ ಕುಟುಂಬಸ್ಥರ ಜೀವವನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ವೈದ್ಯರು ಹೋರಾಟ ನಡೆಸುತ್ತಿದ್ದಾರೆ. ಹೀಗೆ ಬೆಳಗಾವಿ ಚಿಲ್ಡ್ರನ್ಸ್ ಪ್ರೈವೆಟ್ ಲಿಮಿಟೆಡ್ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಜೊತೆಗೆ ಅವರ ತಾಯಿಯು ಮೃತಪಟ್ಟಿದ್ದಾರೆ.
ನಾಲ್ಕೇ ದಿನದ ಅಂತರದಲ್ಲಿ ತಾಯಿ ಮತ್ತು ಮಗ ಕೊರೊನಾಗೆ ಬಲಿಯಾಗಿದ್ದಾರೆ. ಡಾ.ಮಹೇಶ್ ಪಾಟೀಲ್ ಬೆಳಗಾವಿಯ ಚಿಲ್ಡ್ರನ್ಸ್ ಪ್ರೈವೆಟ್ ಲಿಮಿಟೆಡ್ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅವರೇ ಕೊರೊನಾ ಸೋಂಕಿಗೆ ತುತ್ತಾಗಿ ಒಂದೂವರೆ ವರ್ಷದ ಹೆಣ್ಣು ಮಗು ಮತ್ತು ಪತ್ನಿಯನ್ನು ಬಿಟ್ಟು ಅಗಲಿದ್ದಾರೆ.
ಬೆಳಗಾವಿಯ ವೈಭವ ನಗರ ನಿವಾಸಿ ಡಾ.ಮಹೇಶ್ ಪಾಟೀಲ್, ತಾಯಿ ಸುಮಿತ್ರಾ ಪಾಟೀಲ್ ಮೃತಪಟ್ಟಿದ್ದಾರೆ. ಇದೀಗ ಅನಾರೋಗ್ಯದಿಂದ ತಂದೆ ಕಲಗೌಡ ಪಾಟೀಲ್ ಹಾಸಿಗೆ ಹಿಡಿದಿದ್ದಾರೆ. ಕೊವಿಡ್ ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ್ದ ಡಾ.ಮಹೇಶ್ ಪಾಟೀಲ್ಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಹೋಮ್ ಐಸೋಲೇಷನ್ನಲ್ಲಿದ್ದರು. ಇದೇ ವೇಳೆ ಡಾ.ಮಹೇಶ್ ಪಾಟೀಲ್ ತಂದೆ, ತಾಯಿಗೂ ಕೊವಿಡ್ ದೃಢವಾಗಿತ್ತು. ಉಸಿರಾಟದ ತೊಂದರೆಯಿಂದ ಮೊದಲು ಮಹೇಶ್ ಆಸ್ಪತ್ರೆಗೆ ದಾಖಲಾಗಿದ್ದರು. ಮಗ ದಾಖಲಾದ ಎರಡೇ ದಿನಕ್ಕೆ ಮತ್ತೊಂದು ಆಸ್ಪತ್ರೆಗೆ ತಾಯಿ ಸುಮಿತ್ರಾ ಪಾಟೀಲ್ ದಾಖಲಾಗಿದ್ದರು.
ಚಿಕಿತ್ಸೆ ಫಲಿಸದೇ ಮೊದಲು ತಾಯಿ ಸುಮಿತ್ರಾ ಕೊನೆಯುಸಿರೆಳೆದಿದ್ದಾರೆ. ತಾಯಿ ಸಾವನ್ನಪ್ಪಿದ ನಾಲ್ಕೇ ದಿನಕ್ಕೆ ಮಗ ಡಾ.ಮಹೇಶ್ ಪಾಟೀಲ್ (37) ಮರಣ ಹೊಂದಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಕೊರೊನಾಗೆ ಬಲಿಯಾದರೂ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಕುಟುಂಬದ ನೆರವಿಗೆ ಬರಲಿಲ್ಲ.
ವೈದ್ಯರ ನಿರ್ಲಕ್ಷ್ಯದಿಂದ ಹಸುಗೂಸು ಸಾವು
ವಿಜಯನಗರ: ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಹಸುಗೂಸು ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಹಲಬೂರಿನ ಜ್ಯೋತಿ ಎಂಬುವವರಿಗೆ ನಿನ್ನೆ (ಮೇ 23) ರಾತ್ರಿ ನಾರ್ಮಲ್ ಡೆಲಿವರಿಯಾಗಿತ್ತು. ಇದಾದ ಬಳಿಕ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ವೈದ್ಯರು ಸೂಚಿಸಿದ ಹಿನ್ನೆಲೆ ಹಲವು ಆಸ್ಪತ್ರೆ ಸುತ್ತಿದ್ದರು. ಎಲ್ಲಿಯೂ ಆಸ್ಪತ್ರೆಗಳು ಓಪನ್ ಇಲ್ಲದ ಹಿನ್ನೆಲೆ ಮತ್ತೆ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ವಾಪಾಸ್ ಬಂದರು.
ಆಸ್ಪತ್ರೆಗೆ ವಾಪಸಾದ ಬಳಿಕ ಬೆಳಗ್ಗೆಯವರೆಗೆ ತಪಾಸಣೆಯೇ ಮಾಡಿಲ್ಲ ಎಂಬ ಆರೋಪಿಸಿದ ಮಗುವಿನ ತಾತ, ನಾವು ಮಗುವನ್ನು ನೋಡಿದ್ದಾಗ ಮಗು ಕಣ್ಣು ಬಿಟ್ಟಿರಲಿಲ್ಲ. ಈ ವಿಷಯವನ್ನು ಸಿಸ್ಟರ್ಗರ ಹೇಳಿದ್ರೆ ಬೆಳಗ್ಗೆ ಬಂದ ವೈದ್ಯ ಮಗು ಮೃತಪಟ್ಟಿದೆ ಎಂದು ಹೇಳಿದರು. ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಹಿನ್ನೆಲೆ ಮಗು ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ
ಕೊರೊನಾ ವ್ಯಾಕ್ಸಿನ್ ಟೋಕನ್ಗಾಗಿ ಕಿಲೋಮೀಟರ್ ಕ್ಯೂ – ನಾಗರಬಾವಿಯ ಕಣ್ವ ಲ್ಯಾಬ್ ಮುಂದೆ ಜನವೋ ಜನ