ಬೆಳಗಾವಿ ಜು.21: ಕರ್ನಾಟಕ (Karnataka), ನರೆಯ ರಾಜ್ಯ ಮಹರಾಷ್ಟ್ರದ (Maharashtara) ಪಶ್ಚಿಮ ಘಟ್ಟ (Western Ghats) ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ (Rain) ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಕೃಷ್ಣಾ ನದಿಯ (Krishna River) ಉಪನದಿಗಳಲ್ಲೂ ನೀರಿನ ಪ್ರಮಾಣ ಏರಿಕೆಯಾಗಿದೆ. ಗಡಿ ಅಂಚಿನಲ್ಲಿರುವ ಖಾನಾಪುರ ತಾಲೂಕಿನ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬಂಡೂರಿ ನಾಲಾಗೆ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಇದರಿಂದ ಬಂಡೂರಿ ನಾಲೆ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ಕಾಡಂಚಿನ ಕೊಂಗಳಾ, ಗೌಳಿವಾಡ, ಪಾಸ್ತೊಳಿ, ಗವಾಳಿ ನಾಲ್ಕು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.
ಈ ಹಿನ್ನೆಲೆ ಜನರು ಗ್ರಾಮಸ್ಥರು ಕೂಡಿಕೊಂಡು ಕಟ್ಟಿಗೆಯಿಂದ ತೂಗು ಸೇತುವೆ ನಿರ್ಮಾಣ ಮಾಡಿದ್ದಾರೆ. ಇದರ ಮೇಲೆಯೇ ಸಂಚರಿಸುತ್ತಿದ್ದಾರೆ. ಶಾಲಾ ಮಕ್ಕಳು, ತುರ್ತು ಚಿಕಿತ್ಸೆಗೆ ಹೋಗಲು ಜನರು ಹರಸಾಹಸ ಪಡುತ್ತಿದ್ದಾರೆ. ಮಳೆಗಾಲ ಮುಗಿಯುವವರೆಗೂ ಜನರು ಇದರ ಮೇಲೆಯೇ ಸಂಚರಿಸುವ ಅನಿವಾರ್ಯತೆ ಉಂಟಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಉಪಯೋಗವಾಗಿಲ್ಲ.
ಮಹಾರಾಷ್ಟ್ರದ ಕೊಂಕಣ ಭಾಗದ ಕೊಯ್ನಾದಲ್ಲಿ 253 ಮಿ.ಮೀ, ನವಜಾದಲ್ಲಿ 274 ಮಿ.ಮೀ, ಮಹಾಬಳೇಶ್ವರದಲ್ಲಿ 334 ಮಿ.ಮೀ ಮಳೆಯಾಗಿದೆ. ಇದರಿಂದ ರಾಜಾಪೂರ ಬ್ಯಾರೇಜ್‌ನಿಂದ 49,500 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದುಬಂದಿದೆ. ದೂದಗಂಗಾ ನದಿಯಿಂದ 14,400 ಕ್ಯೂಸೆಕ್ ನೀರು ಹರಿದು ಬಂದಿದೆ. ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 65 ಸಾವಿರ ಕ್ಯೂಸೆಕ್ ನೀರು ಸೇರುತ್ತಿದೆ. ಕೃಷ್ಣಾ ನದಿಯಲ್ಲಿ ನೀರು ಹೆಚ್ಚಿದ್ದರಿಂದ ಉಪನದಿಗಳಲ್ಲೂ ನೀರಿನ ಪ್ರಮಾಣ ಏರಿಕೆಯಾಗಿದೆ.
ಇದನ್ನೂ ಓದಿ: ಕಲಬುರಗಿ, ಬೀದರ ಜಿಲ್ಲೆಯಲ್ಲಿ ಇಂದು ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಇನ್ನು ಚಿಕ್ಕೋಡಿ, ನಿಪ್ಪಾಣಿಯಲ್ಲಿ ವೇದಗಂಗಾ, ದೂಧ್‌ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ 7 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕೋಡಿ ತಾಲೂಕಿನ ಮಲಿಕವಾಡ – ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾ – ಬೋಜ್, ಬೋಜವಾಡಿ – ಕುನ್ನೂರ, ಸಿದ್ನಾಳ – ಅಕ್ಕೋಳ, ಜತ್ರಾಟ – ಭೀವಶಿ, ಮಮದಾಪುರ – ಹುನ್ನರಗಿ, ಕುನ್ನುರ – ಬಾರವಾಡ ಸೇತುವೆ ಮುಳುಗಡೆಯಾಗಿದೆ. ಮುಳುಗಡೆಯಾದ ಸೇತುವೆಗಳ ಎರಡು ಬದಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಿದ ಹಿನ್ನೆಲೆ ಗೋಕಾಕ್ – ಶಿಂಗಳಾಪೂರ ನಡುವಿನ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ ಪ್ರಯಾಣಿಸದಂತೆ ಪೋಲಿಸರು ಕೈ ಮುಗಿದು ಮನವಿ ಮಾಡಿದ್ದಾರೆ.
ಬಾಗಲಕೊಟೆ: ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನೆಲೆ ಕೃಷ್ಣಾ ನದಿಗೆ ನೀರಿನ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ಕೃಷ್ಣಾ ನದಿ ಪಾತ್ರಕ್ಕೆ ಜನರು ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರದಿಂದ 80 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬಂದಿದೆ. 15 ದಿನಗಳ ಹಿಂದೆಯಷ್ಟೇ ಬತ್ತಿದ ಕೃಷ್ಣೆಗೆ ಈಗ ಜೀವಕಳೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 am, Fri, 21 July 23