ಬೆಳಗಾವಿ, ನ.13: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳಲು ಕಾಂಗ್ರೆಸ್ ಕಸರತ್ತು ಆರಂಭಿಸಿದೆ. ಇದರ ಭಾಗವಾಗಿ ಬೆಳಗಾವಿಯಲ್ಲಿ (Belagavi) ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದು, ಚಿಕ್ಕೋಡಿ (Chikodi) ಕ್ಷೇತ್ರದಕ್ಕೆ ಕುರುಬ ಸಮುದಾಯದ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸುಳಿವು ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಸಚಿವರು ಸ್ಪರ್ಧಿಸುವ ಬಗ್ಗೆ ಸೂಚನೆ ಬಂದಿಲ್ಲ. ಸಚಿವರು ಚುನಾವಣೆಗೆ ಸ್ಪರ್ಧಿಸಬೇಕೆಂದು ವರಿಷ್ಠರು ಸೂಚನೆ ನೀಡಿಲ್ಲ. ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಆಕಾಂಕ್ಷಿಗಳ ಹೆಸರು ಚರ್ಚೆ ಆಗಲಿದೆ. ಜನವರಿಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಾದರೆ ಒಳ್ಳೆಯದು ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳಿಂದ 2 ಲಕ್ಷ ರೂಪಾಯಿಗಳನ್ನು ಕೆಪಿಸಿಸಿ ಪಡೆದುಕೊಂಡಿತ್ತು. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿ ಹಣ ಪಡೆಯುತ್ತಾರಾ ಎಂಬ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಉಚಿತವಾಗಿ ಲೋಕಸಭೆ ಅಭ್ಯರ್ಥಿಗಳ ಅರ್ಜಿಯನ್ನು ಸ್ವೀಕರಿಸುತ್ತೇವೆ ಎಂದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ: ಸತೀಶ್ ಜಾರಕಿಹೊಳಿ
ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಲಿಂಗಾಯತ ಸಮುದಾಯದ ಅಭ್ಯರ್ಥಿ, ಚಿಕ್ಕೋಡಿ ಕ್ಷೇತ್ರಕ್ಕೆ ಕುರುಬ ಸಮುದಾಯಕ್ಕೆ ಕೊಡಲು ಚಿಂತನೆ ನಡೆಸಲಾಗಿದೆ. ರಾಹುಲ್ ಜಾರಕಿಹೊಳಿ, ಮೃಣಾಲ್ ಹೆಬ್ಬಾಳ್ಕರ್ ಟಿಕೆಟ್ ಕೇಳಿಲ್ಲ. ಯಾರು ಆಕಾಂಕ್ಷಿಗಳು ಅನ್ನೋದು ಡಿಸೆಂಬರ್ನಲ್ಲಿ ಚರ್ಚೆ ಆಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತವರೂ ಸ್ಪರ್ಧೆ ಮಾಡಬಹುದು ಎಂದರು.
ಕಾರ್ಯಕರ್ತರ ಹಂತದಲ್ಲಿ ಲೋಕಸಭೆ ಚುನಾವಣೆಗೆ ತಯಾರಿ ಆಗುತ್ತಿದೆ. ಅಧಿವೇಶನದ ಬಳಿಕ ಅಭ್ಯರ್ಥಿಗಳ ಬಗ್ಗೆ ತೀರ್ಮಾನ ಮಾಡುತ್ತೇವೆ. ಅಭ್ಯರ್ಥಿ ಆಯ್ಕೆಗೆ ಮಾನದಂಡ ಅಂದರೆ ಗೆಲ್ಲುವವನು ಆಗಿರಬೇಕು. ಜಾತಿ ಜೊತೆಗೆ ಜನಪ್ರಿಯತೆಯನ್ನು ಸಹ ಅಭ್ಯರ್ಥಿ ಹೊಂದಿರಬೇಕು. ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುವ ಟಾರ್ಗೆಟ್ ಇದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಪಂಚ ರಾಜ್ಯಗಳ ಚುನಾವಣೆ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ಆಗಲಿದೆ ಎಂದರು.
ಸಿದ್ದರಾಮಯ್ಯ ಡೂಪ್ಲಿಕೇಟ್ ಸಿಎಂ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ವಿರೋಧ ಪಕ್ಷದಲ್ಲಿ ಇದ್ದಾರೆ, ಅವರಿಗೆ ಎಲ್ಲಾ ಮಾತನಾಡಲು ಹಕ್ಕಿದೆ ಮಾತಾಡುತ್ತಾರೆ. ನಾವು ಮಾತಾಡಬೇಡಿ ಅಂತಾ ಹೇಳಲು ಆಗುವುದಿಲ್ಲ ಎಂದರು. ಮುಖ್ಯಮಂತ್ರಿ ಬೆಲೆ ಬಾಳುವ ಸೋಫಾ ಊಡುಗರೆ ಪಡೆದಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಮಾತನಾಡಿದ ಸಚಿವರು, ಇದಕ್ಕೆ ಮುಖ್ಯಮಂತ್ರಿ ಕಚೇರಿ ಅವರೇ ಉತ್ತರ ಕೊಡಬೇಕು ಎಂದರು.
ಸಚಿವರಿಗೆ ಹಣ ಸಂಗ್ರಹಿಸಲು ಹೈಕಮಾಂಡ್ ಸೂಚಿಸಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಮ್ಮ ಪಕ್ಷದಲ್ಲಿ, ನಮ್ಮ ಮಂತ್ರಿ ಮಂಡಲದಲ್ಲಿ ಈ ರೀತಿ ನಡೆದಿಲ್ಲ. ವಿರೋಧ ಪಕ್ಷದಲ್ಲಿ ಇದ್ದುಕೊಂಡು ಹೇಳುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆ ಜನರಿಗೆ ಕೊಟ್ಟಿದ್ದೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ