ಬೆಳಗಾವಿ, ಜುಲೈ.07: ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ಮೂರು ರಾಜ್ಯಗಳ ಮಧ್ಯೆ ಇರೋ ಮಹದಾಯಿ (Mahadayi Project) ಜಲ ವಿವಾದ ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಯಾಕೆಂದರೆ ಮತ್ತೆ ಮಹದಾಯಿ ಯೋಜನೆಗೆ ಗೋವಾ ಸರ್ಕಾರ ಕ್ಯಾತೆ ತೆಗೆದಿದೆ. ಗೋವಾ ಸರ್ಕಾರ (Goa Government) ಕೇಂದ್ರದಿಂದ ಪರಿಸರ ಇಲಾಖೆ ಅನುಮತಿ ಸಿಗದಂತೆ ನೋಡಿಕೊಳ್ಳಲು ಕುತಂತ್ರ ರೂಪಿಸಿದ್ದು, ಇದರ ಭಾಗವಾಗಿಯೇ ಮಹದಾಯಿ ಜಲನಯನ ಪ್ರದೇಶಕ್ಕೆ ಕೇಂದ್ರದ ‘ಪ್ರವಾಹ’ ತಂಡ ಕಣಕುಂಬಿಗೆ ಭೇಟಿ ಕೊಟ್ಟಿದೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯದ ಅಧಿಕಾರಿಗಳು ಒಳಗೊಂಡ ಸದಸ್ಯರ ತಂಡ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಿದೆ. ಕಳಸಾ ಮತ್ತು ಬಂಡೂರಿ ನಾಲೆ ಉಗಮ ಸ್ಥಾನಕ್ಕೆ ಭೇಟಿ ನೀಡಿದ್ದು ಎರಡೂ ನಾಲೆಯ ನೀರಿನ ಹರಿವು ಪರಿಶೀಲನೆ ನಡೆಸಲಿದೆ. ಮಹದಾಯಿ ಯೋಜನೆ ಕಾಮಗಾರಿಯನ್ನ ಪರಿಶೀಲನೆ ಮಾಡಲಿದೆ.
ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಮಹದಾಯಿ ಹೋರಾಟಗಾರ ಅಶೋಕ ಚಂದರಗಿ ಕಿಡಿಕಾರಿದ್ದಾರೆ. ಗೋವಾ ಸರ್ಕಾರದ ಒತ್ತಾಯದ ಮೇರೆಗೆ ಕೇಂದ್ರ ತಂಡ ಬರುತ್ತಿದೆ. ಸದ್ಯದ ಸ್ಥಿತಿಗತಿ ಬಗ್ಗೆ ತಿಳಿಯಲು ಕೇಂದ್ರದ ಪ್ರವಾಹ ತಂಡ ಭೇಟಿ ನೀಡಿದೆ. ಪಾಂಚಾಲ್ ಟ್ರಿಬ್ಯುನಲ್ ಈಗಾಗಲೇ ಸಮಗ್ರ ವಿಚಾರಣೆ ಮಾಡಿದೆ. ಇಷ್ಟಾದ್ರೂ ಕೇಂದ್ರ ತಂಡ ಬರ್ತಿರೋದು ಯೋಜನೆಗೆ ಅಡ್ಡಗಾಲು ಹಾಕಲು. ಗೋವಾ ಸಿಎಂ ಸಾವಂತ್ ಟ್ವೀಟ್ನಿಂದ ಅನುಮಾನ ವ್ಯಕ್ತವಾಗುತ್ತಿದೆ. ಸಮಗ್ರ ವಿಚಾರಣೆ ನಡೆದಿದೆ ನ್ಯಾಯಾಧಿಕರಣ ತೀರ್ಪು ನೀಡಿದೆ. ಹುಲಿ ಸಂರಕ್ಷಿತ ಅರಣ್ಯ ಅಂತಾ ಸುಳ್ಳು ಹೇಳುವ ಕೆಲಸ ಮಾಡ್ತಿದ್ದು ಈ ಮಾದರಿಯಲ್ಲಿ ರಿಪೋರ್ಟ್ ಕೊಡುವ ಸಾಧ್ಯತೆ ಇದೆ. ರಾಜ್ಯಕ್ಕೆ ಅನ್ಯಾಯವಾಗುವ ನಿಟ್ಟಿನಲ್ಲಿ ಏನಾದ್ರೂ ಆದ್ರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಬೆಳಗಾವಿಯಲ್ಲಿ ಮಹದಾಯಿ ಹೋರಾಟಗಾರ ಅಶೋಕ ಚಂದರಗಿ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಮಹದಾಯಿ ಯೋಜನೆಗೆ ಗೋವಾ ಸರ್ಕಾರದಿಂದ ಮತ್ತೆ ಕ್ಯಾತೆ: ನಾಳೆ ಬೆಳಗಾವಿಯ ಕಣಕುಂಬಿಗೆ ಕೇಂದ್ರ ತಂಡ ಭೇಟಿ
ಕರ್ನಾಟಕ ಸರ್ಕಾರ ಪರಿಸರ ಇಲಾಖೆಗೆ ಅನುಮತಿಗೆ ಮನವಿ ಮಾಡಿತ್ತು. ಕೇಂದ್ರ ಸರ್ಕಾರಕ್ಕೆ ಅನುಮತಿ ಕೊಡುವಂತೆ ಒತ್ತಾಯ ಮಾಡಿತ್ತು. ಪರಿಸರ ಇಲಾಖೆ ಅನುಮತಿ ನೀಡಿದ್ರೇ ಕೂಡಲೇ ಕಾಮಗಾರಿ ಆರಂಭಿಸಬಹುದು. ಇದು ಗೋವಾ ಸರ್ಕಾರದ ಗಮನಕ್ಕೆ ಬರ್ತಿದ್ದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದೆ. ಪರಿಸರ ಇಲಾಖೆ ಅನುಮತಿಗೂ ಮುನ್ನ ಕೇಂದ್ರದ ಮೇಲೆ ಗೋವಾ ಸಿಎಂ ಒತ್ತಡ ಹಾಕಿದ್ದು ಒಂದು ತಂಡ ರಚನೆ ಮಾಡಿ ಸದ್ಯದ ಸ್ಥಿತಿಗತಿ ತಿಳಿಯುವಂತೆ ಮನವಿ ಮಾಡಿದ್ರು.
ಕಳಸಾ ಬಂಡೂರಿ ನಾಲಾ ಉಗಮ ಸ್ಥಾನ ಹುಲಿ ಸಂರಕ್ಷಿತ ಅರಣ್ಯ ಅಂತಾ ಕ್ಲೈಮ್ ಮಾಡಲಾಗಿದ್ದು ಈಗಾಗಲೇ ಹುಲಿ ಸಂರಕ್ಷಿತ ಟೀಮ್ ಹುಲಿ ಸಂರಕ್ಷಿತ ಅರಣ್ಯ ಇದೆಯಾ ಇಲ್ವಾ ಅಂತಾ ಪರಿಶೀಲನೆ ಮಾಡಿ ಹೋಗಿದೆ. ಆ ವರದಿ ಆಧರಿಸಿ ಇದೀಗ ಪ್ರವಾಹ ಟೀಮ್ ರಚನೆ ಮಾಡಲಾಗಿದೆ. ಹುಲಿ ಸಂರಕ್ಷಿತ ಅರಣ್ಯ ಇದೇ ಅಂತಾ ಈ ತಂಡದ ಮೂಲಕ ಹೇಳಿಸುವ ಪ್ರಯತ್ನ ನಡೆದಿದೆ. ನೈಸರ್ಗಿಕವಾಗಿ ನೀರು ಹರಿದು ಬರುವುದನ್ನ ಕರ್ನಾಟಕ ಡೈವರ್ಟ್ ಮಾಡಿರುವ ಅನುಮಾನ ಗೋವಾ ಸರ್ಕಾರಕ್ಕೆ ಇದ್ದು ಇದರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಮಳೆಗಾಲ ಸಂದರ್ಭದಲ್ಲಿ ನೀರು ಕಾಡಂಚಿನಲ್ಲಿ ಯಾವ ರೀತಿ ಹರಿದು ಬಂದು ಎಲ್ಲಿಗೆ ಹೋಗ್ತಿದೆ ಅಂತಾ ಪರಿಶೀಲನೆ ಮಾಡಬಹುದು ಅಂತಾ ಈಗ ಮಳೆಯ ಸಮಯದಲ್ಲಿ ಕೇಂದ್ರದ ತಂಡ ಭೇಟಿ ನೀಡುತ್ತಿದೆ. ಕರ್ನಾಟಕ ಕದ್ದು ಮುಚ್ಚಿ ಕಾಮಗಾರಿ ಮಾಡಿ ನೀರು ತನ್ನತ್ತ ತಿರುಗಿಸಿಕೊಂಡಿದೆ ಅಂತಾನೂ ಗೋವಾ ಸರ್ಕಾರಕ್ಕೆ ಅನುಮಾನವಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ