ಬೆಳಗಾವಿ, ಮಾರ್ಚ್ 25: ಎಂಇಎಸ್ (MES) ಪುಂಡ ಶುಭಂ ಶಳಕೆ ಬಂಧನ ಬೆನ್ನಲ್ಲೇ ಪೊಲೀಸರಿಗೆ (Police) ನಾಯಿಗಳು ಎಂದು ಎಂಇಎಸ್ ಸಂಘಟನೆಯ ಯುವ ಸಮಿತಿ ಸೀಮಾಭಾಗ್ ಪೇಜ್ನಲ್ಲಿ ವಿವಾದಾತ್ಮಕವಾಗಿ ಪೋಸ್ಟ್ ಹಾಕಿದೆ. ಪುಂಡ ಶಳಕೆ ಹಿಡಿದುಕೊಂಡು ನಿಂತಿದ್ದ ಪೊಲೀಸರ ಫೋಟೊ ಹಾಕಿ, “ಸಮಿತಿಯ ಸಿಂಹ ಒಬ್ಬನೇ ಫೈಟ್ ಮಾಡುತ್ತಿದ್ದಾನೆ. ಸಾವಿರಾರು ನಾಯಿಗಳು ಅವನ ಬೆನ್ನು ಬಿದ್ದಿವೆ. ಆದರೂ ನಾಯಿಗಳಿಗೆ ಸಿಂಹವನ್ನು ಮುಗಿಸಲು ಅಗುತ್ತಿಲ್ಲ” ಎಂದು ಪೋಸ್ಟ್ ಹಾಕಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲಿನ ಹಲ್ಲೆ ಸಮರ್ಥಿಸಿಕೊಂಡು, ಕನ್ನಡಪರ ಹೋರಾಟಗಾರರಿಗೆ ನಾಲಾಯಕ್ ಅಂತ ಶುಭಂ ಶಳಕೆ ಕರೆದಿದ್ದನು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾಗುವಂತೆ ಶುಭಂ ಶಳಕೆ ಪರಾರಿಯಾಗಿದ್ದನು. ಇದೀಗ, ಮಾಳಮಾರುತಿ ಠಾಣೆ ಪೊಲೀಸರು ಸೋಮವಾರ ಎಂಇಎಸ್ ಪುಂಡ ಶುಭಂ ಶಳಕೆ ಬಂಧಿಸಿದ್ದಾರೆ.
ಕಳೆದ ತಿಂಗಳು, ಬೆಳಗಾವಿಯಿಂದ ಬಾಳೇಕುಂದ್ರಿಗೆ ಚಲಿಸುತ್ತಿದ್ದ ಬಸ್ಸಿನ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಮರಾಠಿ ಪರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆ ನಡೆಸಿದ್ದರು. ಈ ಘಟನೆಯ ನಂತರ, ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಅಂತರರಾಜ್ಯ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಕಂಡಕ್ಟರ್ ಮೇಲಿನ ದಾಳಿಯು ಎರಡು ರಾಜ್ಯಗಳ ನಡುವಿನ ಭಾಷಾ ವಿವಾದಗಳ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಪ್ರದೇಶದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಕೋಮು ಸಾಮರಸ್ಯವನ್ನು ಕದಡುವ ಮರಾಠಿ ಪರ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಪ್ರತಿಭಟನೆ ನಡೆಸಿತ್ತು.
ಇದನ್ನೂ ಓದಿ: ಮರಾಠಿ ಯುವಕನಿಂದ ಗೂಂಡಾಗಿರಿ, ಪಿಡಿಒ ಮೇಲೆ ಹಲ್ಲೆ ನಡೆಸುವ ಬೆದರಿಕೆ ಮತ್ತು ನಿಂದನೆ
ಈ ವೇಳೆ ಎಂಇಎಸ್ ಪುಂಡ ಶುಭಂ ಶಳಕೆ ಕನ್ನಡಪರ ಹೋರಾಟಗಾರರಿಗೆ ನಾಲಾಯಕ್ ಎಂದಿದ್ದನು. ಈ ಹಿನ್ನೆಲೆಯಲ್ಲಿ ಶುಭಂ ಶಳಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೂ ಬೆಳಗಾವಿ ಪೊಲೀಸರು ಸೋಮವಾರ ಆರೋಪ ಶುಭಂ ಶಳಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published On - 2:38 pm, Tue, 25 March 25