ಬೆಳಗಾವಿ ಅ.19: ಈ ವರ್ಷ ರಾಜ್ಯದಲ್ಲಿ ಮಳೆ (Karnataka Rain) ಅಭಾವ ಆಗಿದೆ. 60 ರಿಂದ 70 ದಿನ ಮಾತ್ರ ಮಳೆಯಾಗಿದೆ. ಮಳೆಗಾಲದಲ್ಲಿ ಒಂದು ದಿನ ಮಳೆ ಆಗದಿದ್ದರೇ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ವಿದ್ಯುತ್ (Electricity) ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಮುತುವರ್ಜಿ ವಹಿಸಿದೆ. ಮೊದಲು ರೈತರಿಗೆ 6 ಗಂಟೆ ವಿದ್ಯುತ್ ವಿತರಣೆ ಮಾಡಲಾಗುತ್ತಿತ್ತು. ಇದೀಗ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಮ್ಮ ಸರ್ಕಾರ ಏಳು ಗಂಟೆ ವಿದ್ಯುತ್ ನೀಡಲು ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ನಮ್ಮ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿದೆ. ನೀರಿಲ್ಲದೆ ರೈತರಿಗೆ ಕಷ್ಟವಾಗುತ್ತಿದೆ. ರೈತರು ನೀರು ಬಳಕೆ ಬಗ್ಗೆ ಜಾಗೃತಿ ವಹಿಸಬೇಕು. ನೀರು ಕಳ್ಳತನ ಆಗುತ್ತಿರುವುದಕ್ಕೆ ಸರ್ಕಾರಕ್ಕೆ ದೊಡ್ಡ ಭಾರ ಆಗುತ್ತಿದೆ. ನೀರು ಬಳಕೆದಾರರ ಸಂಘಗಳನ್ನು ಕ್ರಿಯಾಶೀಲ ಮಾಡುವ ಪ್ರಯತ್ನ ನಡೆದಿದೆ. ನೀರು ಸಂರಕ್ಷಣೆಗೆ ಕಾನೂನು ತರಲು ನಮ್ಮ ಸರ್ಕಾರ ತೀರ್ಮಾನ ಮಾಡಿದೆ. ಬೆಳಗಾವಿ ಭಾಗದ ಕೆರೆ, ನದಿ ತುಂಬಿವೆ ಮಲಪ್ರಭಾ ಡ್ಯಾಂ ಮಾತ್ರ ಅರ್ಧ ಇದೆ. ಮೈಸೂರು ಭಾಗದ ಜನರಿಗೆ ದೇವರೇ ಕಾಪಾಡಬೇಕು ಎಂದರು.
ಇದನ್ನೂ ಓದಿ: ಭೀಕರ ಬರಗಾಲದಿಂದ ರಾಜ್ಯದ ರೈತರಿಗೆ 30 ಸಾವಿರ ಕೋಟಿ ರೂ. ನಷ್ಟ: ಸಿಎಂ ಸಿದ್ದರಾಮಯ್ಯ
ತಮ್ಮ ಮತ್ತು ಸತೀಶ್ ಜಾರಕಿಹೊಳಿ ನಡುವೆ ಆಂತರಿಕ ಭಿನ್ನಾಭಿಪ್ರಾಯ ಇದೆ ಎಂಬ ವಿಚಾರವಾಗಿ ಮಾತನಾಡಿದ ಅವರು ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ. ಆಂತರಿಕವಾಗಿಯೂ ಇಲ್ಲ, ಬಹಿರಂಗವಾಗಿಯೂ ಭಿನ್ನಾಭಿಪ್ರಾಯವಿಲ್ಲ. ನನಗೆ ಯಾಕೆ ಭಿನ್ನಾಭಿಪ್ರಾಯ ಬೇಕು ಎಂದು ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ನೊನವಿಕೆರೆ ಸ್ವಾಮೀಜಿಯ ಆಶೀರ್ವಾದ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಪಕ್ಷದವರು ಯಾವಾಗ, ಏನು ತೀರ್ಮಾನ ಮಾಡುತ್ತಾರೆ ಮಾಡಲಿ. ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳಲು ಹೋಗಲ್ಲ. ಜನರ ಬಯಕೆ, ವಿಚಾರ ಅಭಿಲಾಷೆ ಬಹಳಷ್ಟಿವೆ. ರಾಜ್ಯದ ಜನರಿಗೆ ಒಳ್ಳೆಯ ಆಡಳಿತ ನೀಡಬೇಕು ಎಂಬುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:41 am, Thu, 19 October 23