ನೆಲಮಂಗಲ: ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಸೋಮೇಗೌಡ(25), ಜಯಕುಮಾರ್(32), ಭವಾನಿ(25) ಬಂಧಿತ ಆರೋಪಿಗಳು.
ಕೆಲಸ ಕೊಡಿಸುವುದಾಗಿ ಸುಳ್ಳು ಹೇಳಿ ಬೆಂಗಳೂರಿನ ಕೆ.ಆರ್.ಪುರಂ ನಿಂದ 24ವರ್ಷದ ಯುವತಿಯನ್ನ ಕರೆತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಸದ್ಯ ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿ ಯುವತಿಯನ್ನು ರಕ್ಷಿಸಿದ್ದಾರೆ. ಬಾಡಿಗೆ ಮನೆ ಪಡೆದು ಫೋನ್ ಕಾಲ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ದಂಧೆ ನಡೆಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಬಳಿಕ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ 3 ಮೊಬೈಲ್, 4 ಕಾಂಡಮ್ ಬಾಕ್ಸ್ ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.
ಎಫ್ಐಆರ್ ವಿವರಗಳು
ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಆದ ರವಿಕುಮಾರ್ ಆರ್.ಜಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ 13-30ಗಂಟೆಯ ಸಮಯದಲ್ಲಿ ಪಿರ್ಯಾದಿಯು ಠಾಣೆಯಲ್ಲಿರುವಾಗ ಮಾಹಿತಿದಾರರೊಬ್ಬರು ಠಾಣೆಗೆ ಹಾಜರಾಗಿ, ಠಾಣಾ ಸರಹದ್ದಿನ ಅಂದ್ರಹಳ್ಳಿ ಮುಖ್ಯರಸ್ತೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಹತ್ತಿರ, ಹೇರೋಹಳ್ಳಿ, ನೆಲಮಹಡಿಯಲ್ಲಿ ಹುಡುಗಿಯರನ್ನು ಇಟ್ಟುಕೊಂಡು ಮೊಬೈಲ್ ಕರೆಗಳ ಮೂಲಕ ಗಿರಾಕಿಗಳನ್ನು ಬರಮಾಡಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ. ಆರೋಪಿಗಳ ವಿಚಾರಣೆಯಿಂದ ಸೋಮೇಗೌಡನು ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಗಿರಾಕಿಗಳನ್ನು ಕರೆಸುತ್ತಿದ್ದು, ಜಯಕುಮಾರ್ ಮತ್ತು ಭವಾನಿರವರು ಬಡಕುಟುಂಬದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಂಬಳ ಬರುವ ಕೆಲಸ ಕೊಡಿಸುವುದಾಗಿ ನಂಬಿಸಿ ಮಾನವಸಾಗಣೆ ಮಾಡಿಕೊಂಡು ಬಂದು, ವೇಶ್ಯಾವಾಟಿಕೆಯಲ್ಲಿ ತೊಡಗಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದೆಂದು ಆಮಿಷ ತೋರಿಸಿ, ಗಿರಾಕಿಗಳೊಂದಿಗೆ ವೇಶ್ಯಾವಾಟಿಕೆಯಲ್ಲಿ ತೊಡಗಿಸಿ, ಹೆಚ್ಚಿನ ಹಣ ಸಂಪಾದಿಸಿ ಜೀವನ ಮಾಡುತ್ತಿರುವುದು ತಿಳಿದುಬಂದಿರುತ್ತದೆ, ದಾಳಿಯ ಸಮಯದಲ್ಲಿ ಆರೋಪಿತರಿಂದ ನಗದು 5000/-ರ, 3 ಮೊಬೈಲ್ ಫೋನ್ ನಾಲ್ಕು ಕಾಂಡೂಮ್ಮ ಬಾಕ್ಸ್ ಅಮಾನತ್ತುಪಡಿಸಿಕೊಂಡಿರುತ್ತದೆ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ ನೊಂದ ಹುಡುಗಿಯನ್ನು ವೇಶ್ಯಾವಾಟಿಕೆಯಿಂದ ರಕ್ಷಿಸಿದ್ದೇವೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಖಂಡಿಸಿ ಪಿಎಫ್‌ಐ ಕಚೇರಿಯಿಂದ ಎಸ್ಪಿ ಕಚೇರಿಗೆ ಮೆರವಣಿಗೆ
Published On - 1:17 pm, Fri, 17 December 21