ಲಾಕ್​ಡೌನ್​ ನಂತರ ಬೆಂಗಳೂರು ಸೇರಿದಂತೆ 12 ನಗರಗಳ ವಾತಾವರಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಭಾರೀ ಹೆಚ್ಚಳ: ವರದಿ

|

Updated on: Jul 07, 2021 | 9:18 PM

ಮೊದಲ ಲಾಕ್​ಡೌನ್ ಮುಗಿದ ನಂತರ ಗ್ರೀನ್​ ಪೀಸ್ ಇಂಡಿಯಾ ಒಂದು ಸಮೀಕ್ಷೆಯನ್ನು ನಡೆಸಿದ್ದು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 12 ನಗರಗಳ ವಾತಾವರಣಗಳಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ.

ಲಾಕ್​ಡೌನ್​ ನಂತರ ಬೆಂಗಳೂರು ಸೇರಿದಂತೆ 12 ನಗರಗಳ ವಾತಾವರಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಭಾರೀ ಹೆಚ್ಚಳ: ವರದಿ
ಬೆಂಗಳೂರಿನಲ್ಲಿ ಲಾಕ್​ಡೌನ್
Follow us on

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗ ದೇಶವನ್ನು ಅಪ್ಪಳಿಸಿದ ನಂತರ ಎರಡೆರಡು ಬಾರಿ ಲಾಕ್​​ಡೌನ್ ಘೋಷಿಸಲಾಯಿತು. ಎರಡನೇಯದ್ದು ಮೊನ್ನೆಯಷ್ಟೇ ತೆರವುಗೊಂಡಿದೆ. ಈ ಅವಧಿಯಲ್ಲಿ, ರಸ್ತೆಗಳ ಮೇಲೆ ವಾಹನ ಸಂಚಾರ ಬಹಳ ಕಡಿಮೆ ಪ್ರಮಾಣದಲ್ಲಿತ್ತು ಮತ್ತು ಉದ್ದಿಮೆ ಮತ್ತು ಕಾರ್ಖನೆಗಳು ಕಡಿಮೆ ಅವಧಿಯಲ್ಲಿ ಕೆಲಸ ಮಾಡಿದವು. ವಾಹನ ಮತ್ತ್ತು ಕೈಗಾರಿಕೆಗಳು ಪ್ರತಿನಿತ್ಯ ಹೊರಹಾಕುವ ಹೊಗೆಯಿಂದ ಪರಿಸರ ಮಾಲಿನ್ಯ ಹೆಚ್ಚುವುದು ಗೊತ್ತಿರುವ ಸಂಗತಿಯೇ. ಲಾಕ್​ಡೌನ್ ಅವಧಿಯಲ್ಲಿ ವಾಯುಮಾಲಿನ್ಯ ಕಡಿಮೆಯಾಗಿತ್ತು ಅನ್ನೋದು ನಿಜ, ಅದರೆ ಅದು ತೆರವುಗೊಂಡ ನಂತರದ ಸ್ಥಿತಿಯ ಬಗ್ಗೆ ಗ್ರೀನ್ ಪೀಸ್ ಇಂಡಿಯಾ ಒಂದು ವರದಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ನಮ್ಮನ್ನು ಬೆಚ್ಚಿ ಬೀಳಿಸುವ ಅಂಶಗಳಿವೆ.

ಮೊದಲ ಲಾಕ್​ಡೌನ್ ಮುಗಿದ ನಂತರ ಗ್ರೀನ್​ ಪೀಸ್ ಇಂಡಿಯಾ ಒಂದು ಸಮೀಕ್ಷೆಯನ್ನು ನಡೆಸಿದ್ದು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 12 ನಗರಗಳ ವಾತಾವರಣಗಳಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಅದು ಶೇಕಡಾ 90ರಷ್ಟು ಏರಿಕೆಯಾಗಿದ್ದರೆ, ದೆಹಲಿಯಲ್ಲಿ ಉಳಿದೆಲ್ಲ ನಗರಗಳಿಗಿಂತ ಜಾಸ್ತಿಯಾಗಿದೆ. ಮುಂಬೈ, ಹೈದರಾಬಾದ್, ಚೆನೈ, ಕೊಲ್ಕತ್ತಾ, ಜೈಪುರ ಮತ್ತು ಲಖನೌ ಮೊದಲಾದವು ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣದಲ್ಲಿ ಹೆಚ್ಚಳ ಕಂಡಿರುವ ಇತರ ನಗರಳಾಗಿವೆ. ಏಪ್ರಿಲ್ 2020 ಮತ್ತು ಏಪ್ರಿಲ್ 2021 ರ ಮಧ್ಯಭಾಗದ ದತ್ತಾಂಶವನ್ನು ಸಮೀಕ್ಷೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.

ಏಪ್ರಿಲ್ 2020 ಮತ್ತು ಏಪ್ರಿಲ್ 2021 ನಡುವಿನ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಹೇಗೆ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಶೇಕಡಾ 90ರಷ್ಟು ಏರಿಕೆಯಾಯಿತು ಎನ್ನವುದನ್ನು ಸ್ಯಾಟಲೈಟ್ ಪರಿವೀಕ್ಷಣೆಯ ದತ್ತಾಂಶವನ್ನುಪರಿಶೀಲಿಸಲಾಯಿತು. ದೆಹಲಿಯಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಶೇಕಡಾ 125, ಮುಂಬೈಯಲ್ಲಿ ಶೇಕಡಾ 52, ಹೈದರಾಬಾದ್​ ಶೇಕಡಾ 69, ಚೆನೈ ಶೇಕಡಾ 94, ಕೊಲ್ಕತ್ತಾ ಶೇಕಡಾ 11, ಜೈಪುರ ಶೇಕಡಾ 47 ಮತ್ತು ಲಖನೌನಲ್ಲಿ ಶೇಕಡಾ 32 ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸುತ್ತದೆ.

ವರದಿಯ ಮತ್ತೊಂದು ಮುಖ್ಯಾಂಶವೆಂದರೆ, ಹೆಚ್ಚು ಪರಿಸರ ಮಾಲಿನ್ಯಕ್ಕೆ ಒಳಗಾದ ನಗರಗಳಲ್ಲೇ ಜಾಸ್ತಿ ಕೊರೋನಾ ವೈರಸ್​ನ ಪ್ರಕರಣಗಳು ಕಂಡುಬಂದಿವೆ.

ಈ ನಗರಗಳಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿಯಾಗಿದೆ. ಈ ನಗರಗಳಲ್ಲಿ ಈಗಾಗಲೇ ವಾಯು ಮಾಲಿನ್ಯ ಅಧಿಕ ಪ್ರಮಾಣದಲ್ಲಿದೆ. ಈ ಸ್ಥಿತಿಯನ್ನು ಬಹಳ ದಿನ ಮುಂದುವರೆಸಲಾಗದು. ದೇಶದಾದ್ಯಂತ ಲಾಕ್​ಡೌನ್​ ಘೋಷಣೆಯಾದಾಗ ಜನ ಶುಭ್ರ ಆಕಾಶವನ್ನು ಕಂಡರು ಮತ್ತು ಶುದ್ಧ ಗಾಳಿಯನ್ನು ಸೇವಿಸಿದರು. ಕೊವಿಡ್-19 ಪಿಡುಗುನಿಂದ ಉಂಟಾದ ಸ್ಥಿತಿಯು ಸ್ವಚ್ಛ, ಸಮಾನವಾದ ಸುಸ್ಥಿರ ಇಂಧನ ಮೂಲವಾಗಿರುವ ರೂಫ್ ಟಾಪ್ ಸೋಲಾರ್ ಶಕ್ತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಈ ಎಲ್ಲ ನಗರಗಳಲ್ಲಿ ಪ್ರೇರಣೆಯಾಗಬೇಕು,’ ಎಂದು ಎಂದು ಗ್ರೀನ್‌ಪೀಸ್ ಇಂಡಿಯಾದ ಹಿರಿಯ ಹವಾಮಾನ ತಜ್ಞ ಅವಿನಾಶ್ ಚಂಚಲ್ ಹೇಳಿದ್ದಾರೆ.

‘ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ವಾತಾವರಣದಲ್ಲಿ ಹೆಚ್ಚಿ ನಗರಗಳಲ್ಲಿ ವಾಯು ಮಾಲಿನ್ಯ ಉಂಟಾಗುವುದಕ್ಕೆ ಪೆಟ್ರೋಲಿಯಂ ತೈಲಗಳನ್ನೇ ಬಳಸಿ ಓಡಾಡುವ ಮೋಟಾರು ವಾಹನಗಳೇ ಕಾರಣ. ಸರ್ಕಾರಗಳು, ಸ್ಥಳೀಯ ಆಡಳಿತಗಳು ಮತ್ತು ನಗರಗಳ ವಿನ್ಯಾಸಕಾರರರು ವಾಹನಗಳಿಗೆ ಸಂಬಂಧಿಸಿದಂತೆ ಬದಲಾವಣೆಗೆ ನಾಂದಿ ಹಾಡಬೇಕು. ಸ್ಚಚ್ಛ ಮತ್ತು ಸುರಕ್ಷಿತ ಇಂಧನದ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಏರ್ಪಾಟುಗೊಳ್ಳುವಂಥ ಕ್ರಮಗಳನ್ನು ಸೂಚಿಸಬೇಕು ಮತ್ತು ಕೊವಿಡ್​-19 ವಿರುದ್ಧದ ಸುರಕ್ಷತಾ ಕ್ರಮಗಳನ್ನು ಸಹ ಒದಗಿಸಬೇಕು.’ ಎಂದು ಚಂಚಲ್ ಹೇಳಿದ್ದಾರೆ.

ಇದನ್ನೂ ಓದಿ: ಪರಿಸರ ಮಾಲಿನ್ಯ ತಡೆಗಟ್ಟಲು ಪರಿಸರ ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರ ಮತ್ತು ತಜ್ಞರ ಸಮಿತಿಗೆ ಹೆಚ್ಚಿನ ಅಧಿಕಾರ; ಸಚಿವ ಸಿ.ಪಿ.ಯೋಗೇಶ್ವರ