ದಕ್ಷಿಣ ಕನ್ನಡ, ಅ.19: ಜಿಲ್ಲೆಯ ಉಪ್ಪಿನಂಗಡಿ ಅರಣ್ಯ ವಲಯದ ವ್ಯಾಪ್ತಿಯಲ್ಲಿನ ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ಮನೆ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ಅದನ್ನು ತಡೆಯಲು ಹೋದ ಆರ್.ಎಫ್.ಓ(RFO) ಜಯಪ್ರಕಾಶ್ ಕೆ.ಕೆ ಅವರಿಗೆ ಅವಾಜ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ(Harish Poonja) ವಿರುದ್ಧ ಅಧಿಕಾರಿಗಳು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಗೆ ದೂರು ನೀಡಿದ್ದಾರೆ. ಹೌದು, ತಮಗೆ ಕರ್ತವ್ಯದ ಸಂದರ್ಭದಲ್ಲಿ ರಕ್ಷಣೆ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘದಿಂದ ದೂರು ಸಲ್ಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬರ್ 309 ರ ನಿಡ್ಲೆ ವಿಸ್ತೃತ ಬ್ಲಾಕ್ 2ರಲ್ಲಿ ಅಮ್ಮಿನಡ್ಕ-ಕೆದ್ದ ನಿವಾಸಿ ಲೋಲಾಕ್ಷ ಯಾನೆ ಅನಂತು ಅವರು ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ನೂತನ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಬಗ್ಗೆ ಮಂಗಳೂರು ಅರಣ್ಯ ಇಲಾಖೆಗೆ ದೂರು ಬಂದಿತ್ತು. ಈ ಹಿನ್ನೆಲೆ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಅ.6 ರಂದು ನೂತನ ಮನೆಯ ಫೌಂಡೇಶನ್ ತೆರವುಗೊಳಿಸಿದ್ದರು. ಇನ್ನು ವಿಚಾರ ತಿಳಿದು ಶಾಸಕ ಹರೀಶ್ ಪೂಂಜ ಅಕ್ಟೋಬರ್ 7 ರಂದು ಸ್ಥಳಕ್ಕೆ ಭೇಟಿ ನೀಡಿ ಅರಣ್ಯಧಿಕಾರಿಗಳಿಗೆ ಬೈದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯಕ ಅಡ್ಡಿಪಡಿಸಿ, ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪದ ಮೇಲೆ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಕೆ.ಕೆ.ಜಯಪ್ರಕಾಶ್ ನೀಡಿದ ದೂರು ಆಧರಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಐಪಿಸಿ 1860(U/S-143, 353, 504, 149) ಅಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಮಂಗಳೂರು: ಅರಣ್ಯಾಧಿಕಾರಿಗಳ ವಿರುದ್ಧ ನಾಲಿಗೆ ಹರಿಬಿಟ್ಟ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ
ಇನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಹಿನ್ನಲೆ ಬಿಜೆಪಿ ಎಂಎಲ್ಸಿ ಕೋಟ ಶ್ರೀನಿವಾಸ್ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಬಡವನ ಮನೆ ತೆರವುಗೊಳಿಸಬೇಡಿ ಎಂದು ಹರೀಶ್ ಪೂಂಜಾ ಹೇಳಿದ್ದರು. ಸರ್ವೆ ಮಾಡಿ ಅರಣ್ಯ ಪ್ರದೇಶ ಎಂದು ಕಂಡು ಬಂದರೆ ತೆರವುಗೊಳಿಸಿ. ನಾನು ಕೂಡ ಸಹಕಾರ ನೀಡುವೆ ಎಂದು ಹರೀಶ್ ಪೂಂಜಾ ಹೇಳಿದ್ದರು. ಬಡಕುಟುಂಬವನ್ನು ಹೊರಹಾಕಬೇಡಿ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಸ್ವೇಚ್ಛಾಚಾರಿಯಾಗಿ ನಡೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ