ಬೆಂಗಳೂರು: ನಾಳೆ (ಫೆ.13) ರಿಂದ 5 ದಿನಗಳ ಕಾಲ (ಫೆ.17)ರವರೆಗೆ ಬೆಂಗಳೂರಿನ ಯಲಹಂಕ ಏರ್ಬೇಸ್ನಲ್ಲಿ 2023ರ 14ನೇ ಆವೃತ್ತಿಯ ವೈಮಾನಿಕ ಪ್ರದರ್ಶನ (Air Show) ನಡೆಯಲಿದೆ. ಏರೋ ಇಂಡಿಯಾದ (Aero India) ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಉದ್ಘಾಟಿಸಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಇಂದು (ಫೆ.12) ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಲ್ಲಿ 1996ರಿಂದ ಪ್ರಾರಂಭವಾದ ಈ ವೈಮಾನಿಕ ಪ್ರದರ್ಶನ 2 ವರ್ಷಕ್ಕೊಮ್ಮೆ ನಡೆಯುತ್ತದೆ. ಈ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ದೇಶ-ವಿದೇಶದ ನಾಯಕರು ಮತ್ತು ಜನರು ಆಗಮಿಸುತ್ತಾರೆ. ವೈಮಾನಿಕ ಪ್ರದರ್ಶನ ಬೆಂಗಳೂರಲ್ಲಿ 13 ಬಾರಿ ನಡೆದಿದ್ದು, ಈ ಬಾರಿಯ ವೈಮಾನಿಕ ಪ್ರದರ್ಶನ 14ನೇ ಆವೃತ್ತಿಯದ್ದಾಗಿದೆ. ಹಾಗಿದ್ದರೆ ಈ ಬಾರಿಯ ವೈಮಾನಿಕ ಪ್ರದರ್ಶನ ವೈಶಿಷ್ಟ್ಯ ಇಲ್ಲಿದೆ.
ಯಲಹಂಕ ಏರ್ಬೇಸ್ನಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದೆ. 35 ಸಾವಿರ ಚದರ ಅಡಿ ಪ್ರದೇಶದಲ್ಲಿ ಎಕ್ಸಿಬಿಷನ್ ಆಯೋಜನೆ ಮಾಡಲಾಗಿದೆ. 67 ಫ್ಲೈಯಿಂಗ್ ಡಿಸ್ಪ್ಲೇ, 36 ಸ್ಟ್ಯಾಂಡಿಂಗ್ ಡಿಸ್ಪ್ಲೇ, 809 ಪ್ರದರ್ಶಕರು ಇಲ್ಲಿಯವರೆಗೆ ನೋಂದಾಯಿಸಿಕೊಂಡಿದ್ದಾರೆ. 809 ಪ್ರದರ್ಶಕರಲ್ಲಿ 699 ಭಾರತೀಯ ಪ್ರದರ್ಶಕರು, 110 ವಿದೇಶಿ ಪ್ರದರ್ಶಕರಿದ್ದಾರೆ. 2021 ರಲ್ಲಿ, 55 ದೇಶಗಳ ಪ್ರತಿನಿಧಿಗಳು ಮತ್ತು 540 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು. ಈ ಬಾರಿ 251 ಎಂಒಯು, 98 ವಿದೇಶಿ ಕಂಪನಿಗಳು ಏರ್ಶೋನಲ್ಲಿ ಭಾಗಿಯಾಗಲಿದ್ದಾರೆ. ಇಂಡಿಯನ್ ಪೆವಿಲಿಯನ್ನಲ್ಲಿ 115 ಕಂಪನಿ, 227 ಪ್ರಾಡಕ್ಟ್ಸ್ ಪ್ರದರ್ಶನ ಮಾಡಲಾಗುತ್ತದೆ.
ಏರ್ಶೋ-2023ನಲ್ಲಿ 3 ದಿನಗಳಲ್ಲಿ 9 ಸೆಮಿನಾರ್ ಆಯೋಜನೆ ಮಾಡಲಾಗಿದೆ. ಏರ್ಶೋ ಮೊದಲ ದಿನ ಸಿಇಒಗಳ ರೌಂಡ್ ಟೇಬಲ್ ಮೀಟ್ ಇರುತ್ತದೆ. ಈ ಸಮಿನಾರ್ನಲ್ಲಿ ಮಾಜಿ ಸೈನಿಕರನ್ನು ಹೇಗೆ ಬಳಸಿಕೊಳ್ಳಬಹುದರ ಎಂಬ ಬಗ್ಗೆ ಚರ್ಚೆಯಾಗುತ್ತದೆ. 27 ಭಾರತೀಯ ಕಂಪನಿಗಳು ಸೇರಿದಂತೆ 73 ಕಂಪನಿಗಳು ಭಾಗಿಯಾಗುತ್ತವೆ. ಫೆ.14ರಂದು ಏರ್ಶೋನಲ್ಲಿ 32 ದೇಶಗಳ ರಕ್ಷಣಾ ಸಚಿವರು ಭಾಗಿಯಾಗುತ್ತಾರೆ. 251ಕ್ಕೂ ಹೆಚ್ಚು ಬಂಧನ್ಗಳ ನಿರೀಕ್ಷೆ ಇದೆ. ಬಂಧನ್ನಿಂದ 75 ಸಾವಿರ ಕೋಟಿ ವ್ಯಾಪಾರ ವಹಿವಾಟುವಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ಜತೆ 32 ಎಂಒಯು ಒಪ್ಪಂದವಾಗಲಿದೆ.
ಇದನ್ನೂ ಓದಿ: ದೇಶೀಯ ಉತ್ಪಾದನೆ, ಕೌಶಲ್ಯಗಳ ಪ್ರದರ್ಶನಕ್ಕೆ ಏರೋ ಇಂಡಿಯಾ ಉತ್ತಮ ವೇದಿಕೆ- ರಾಜನಾಥ್ ಸಿಂಗ್
ಭಾರತೀಯ ರಕ್ಷಣಾ ಪಡೆಯ ತೇಜಸ್, ಸೂರ್ಯಕಿರಣ್, ಸಾರಂಗ, ರಫೇಲ್, ಎಲ್ಸಿಎ, ಸುಕೋಯ್-30, ಎಂಕೆ-1, ಲಘು ಯುದ್ಧ ವಿಮಾನ (LCA)-ತೇಜಸ್, HTT-40, ಡೋರ್ನಿಯರ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (LUH), ಲಘು ಯುದ್ಧ ಹೆಲಿಕಾಪ್ಟರ್ (LCH) ಮತ್ತು ಸುಧಾರಿತ ಲಘು ಹೆಲಿಕಾಪ್ಟರ್ (ALH) ಸೇರಿದಂತೆ 40ಕ್ಕೂ ಅಧಿಕ ಯುದ್ಧ ವಿಮಾನಗಳು ಪ್ರದರ್ಶನವಾಗಲಿವೆ.
ಡಿಆರ್ಡಿಒ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತದೆ. ಇಂಡಿಯಾ ಪೆವಿಲಿಯನ್ನಲ್ಲಿ ಡಿಆರ್ಡಿಒ ಪ್ರಮುಖ ಉತ್ಪನ್ನಗಳನ್ನು ಪ್ರದರ್ಶಿಸುವುದರ ಜೊತೆಗೆ ಏರೋನಾಟಿಕಲ್ ಸಿಸ್ಟಮ್ಸ್, ಕ್ಷಿಪಣಿಗಳು, ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ಸ್, ಮೈಕ್ರೋ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಕಂಪ್ಯೂಟೇಶನಲ್ ಸಿಸ್ಟಮ್ಸ್, ಸೋಲ್ಜರ್ ಸಪೋರ್ಟ್ ಟೆಕ್ನಾಲಜೀಸ್, ಲೈಫ್-ಸೈನ್ಸ್, ನೌಕಾ ಮತ್ತು ಮೆಟೀರಿಯಲ್ ಸೈನ್ಸ್ ಇತರ ಉತ್ಪನ್ನಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ.
ವೈಮಾನಿಕ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ಜಿಕೆವಿಕೆ, ಜಕ್ಕೂರಿನಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ಅವಾಕಾಶ ನೀಡಲಾಗಿದೆ. ಅಲ್ಲಿಂದ ಯಲಹಂಕ ವಾಯುನೆಲೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಏರ್ಶೋ ಉದ್ಘಾಟನೆ ಕಾರ್ಯಕ್ರಮದಲ್ಲಿ 4000 ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಫೆಬ್ರವರಿ 16 ರಂದು ಮಾತ್ರ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರು ವೈಮಾನಿಕ ಪ್ರದರ್ಶನ ವೀಕ್ಷಿಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ