ಬೆಂಗಳೂರು: ಕೇಂದ್ರ ಸರ್ಕಾರವು ಭೂತಾನ್ನಿಂದ 17,000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ನಿರ್ಣಯ ತೆಗೆದುಕೊಂಡಿರುವುದು ಭಾರತದ ಪ್ರಮುಖ ಅಡಿಕೆ ಬೆಳೆಯುವ ರಾಜ್ಯವಾದ ಕರ್ನಾಟಕದಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ. ‘ಸರ್ಕಾರವು ವ್ಯಾಪಾರಿಗಳು ಹಾಗೂ ಉದ್ಯಮಿಗಳ ಲಾಬಿಗೆ ಮಣಿದು ಬೆಳಗಾರರ ಹಿತಾಸಕ್ತಿಯನ್ನು ಬಲಿಕೊಟ್ಟಿದೆ’ ಎಂದು ‘ಅಡಿಕೆ ಪತ್ರಿಕೆ’ಯ ಸಂಪಾದಕ ಹಾಗೂ ಬೆಳಗಾರ ಶ್ರೀಪಡ್ರೆ ಆಕ್ಷೇಪಿಸಿದ್ದಾರೆ. ಆದರೆ ಸ್ವತಃ ಅಡಿಕೆ ಬೆಳೆಗಾರರೂ ಆಗಿರುವ ಹಾಗೂ ಅಡಿಕೆ ಬೆಳೆಯುವ ಪ್ರದೇಶವನ್ನೇ ಪ್ರತಿನಿಧಿಸುವ ಹಾಗೂ ಅಡಿಕೆ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ‘ಕೇಂದ್ರದ ನಿರ್ಧಾರದಿಂದ ದೇಶೀಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ’ ಎಂದು ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
‘ಭೂತಾನ್ನಿಂದ ಹಸಿ ಅಡಿಕೆ ಆಮದಿಗೆ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರದಿಂದ ದೇಶೀಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಭೂತಾನ್ಗೆ ಅಡಕೆ ಉತ್ಪನ್ನಗಳು ಆಮದಿಗಿಂತ ಹೆಚ್ಚು ರಫ್ತು ಆಗುತ್ತಿದೆ. ಭೂತಾನ್ನಿಂದ ಕೇವಲ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಮಾತ್ರವೇ ಅನುಮತಿ ನೀಡಲಾಗಿದೆ. ಅಡಿಕೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ’ ಎಂದು ಹೇಳಿದ್ದಾರೆ.
‘ಅಡಿಕೆ ಆಮದು ವಿಚಾರವಾಗಿ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಾಗಿದೆ. ಅಡಿಕೆ ಬೆಳೆಗಾರರಿಗೆ ಯಾವುದೇ ಗೊಂದಲ, ಆತಂಕ ಬೇಡ. ಕೇಂದ್ರಕ್ಕೆ ಮನವರಿಕೆ ಮಾಡಲು ಸಂಸದರ ನಿಯೋಗ ಕರೆದೊಯ್ಯುತ್ತೇವೆ’ ಎಂದು ಮಾಧ್ಯಮ ಪ್ರಕಟಣೆ ಮೂಲಕ ಅವರು ಬೆಳೆಗಾರರಿಗೆ ಭರವಸೆ ನೀಡಿದ್ದಾರೆ.
ಕೇಂದ್ರದ ನಿರ್ಧಾರವನ್ನು ವಿರೋಧಿಸಿರುವ ಶ್ರೀಪಡ್ರೆ, ‘ಭಾರತದಲ್ಲಿ ಅಡಿಕೆ ಉದ್ಯಮವನ್ನು ಅವಲಂಬಿಸಿದವರ ಸಂಖ್ಯೆ 6 ಕೋಟಿಗೂ ಹೆಚ್ಚು. 18 ಲಕ್ಷ ಎಕರೆ ವಿಸ್ತೀರ್ಣದಲ್ಲಿರುವ ಅಡಿಕೆ ತೋಟಗಳಿಂದ ವಾರ್ಷಿಕ 12 ಲಕ್ಷ ಟನ್ ಉತ್ಪತ್ತಿ ಬರುತ್ತಿದೆ. ಅಡಿಕೆಯು ಬೇಡಿಕೆಗಿಂತ ಪೂರೈಕೆ ಕಡಿಮೆ ಆಗುವ ಯಾವುದೇ ಸೂಚನೆ ಇಲ್ಲ. ಇಂಥ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ಅಡಿಕೆಯ ಆಮದಿನ ನಿರ್ಧಾರದ ಹಿಂದೆ ಹಲವು ಅನುಮಾನಗಳು ಏಳುತ್ತಿವೆ’ ಎಂದಿದ್ದಾರೆ.
ಕನಿಷ್ಠ ಬೆಲೆ ಷರತ್ತಿಲ್ಲದ ಆಮದು
ಭೂತಾನ್ನಿಂದ ಪ್ರತಿ ವರ್ಷ ಕನಿಷ್ಠ ಆಮದು ಬೆಲೆ (Minimum Import Price – MIP) ಷರತ್ತು ಇಲ್ಲದಂತೆ 17,000 ಟನ್ ಅಡಿಕೆ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಕಳೆದ ಬುಧವಾರ (ಸೆ 28) ಅನುಮತಿ ನೀಡಿತ್ತು. 2017ರಲ್ಲಿ ದೇಶದ ರೈತರ ಆರ್ಥಿಕ ಹಿತ ಕಾಪಾಡಲೆಂದು ಪ್ರತಿ ಹಸಿ ಅಡಿಕೆಗೆ ₹ 251 ಎಂಐಪಿ ವಿಧಿಸಲಾಗಿತ್ತು. ಆದರೆ ಈ ಬಾರಿ ಎಂಐಪಿ ನಿರ್ಬಂಧಕ್ಕೂ ವಿನಾಯ್ತಿ ನೀಡಿ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದು ಬೆಳೆಗಾರರಲ್ಲಿ ಆತಂಕ ಹುಟ್ಟುಹಾಕಿದೆ.
Published On - 1:24 pm, Fri, 30 September 22