ಜಾನಪದ ಕಲಾವಿದ ದಕ್ಕಲ ಮುನಿಸ್ವಾಮಿ ಸೇರಿ ಐವರಿಗೆ ಬಾಬು ಜಗಜೀವನ್ ರಾಂ ಪ್ರಶಸ್ತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 05, 2022 | 8:54 AM

ಕೊರೊನಾ ಹಿನ್ನೆಲೆಯಲ್ಲಿ 2018ರಿಂದಲೂ ಈ ಪ್ರಶಸ್ತಿಗಳನ್ನು ನೀಡಿರಲಿಲ್ಲ. ಡಾ.ಚಂದ್ರಶೇಖರ್ ನೇತೃತ್ವದ ಐವರ ಸಮಿತಿ ಈ ಸಾಧಕರನ್ನು ಆಯ್ಕೆ ಮಾಡಿದೆ.

ಜಾನಪದ ಕಲಾವಿದ ದಕ್ಕಲ ಮುನಿಸ್ವಾಮಿ ಸೇರಿ ಐವರಿಗೆ ಬಾಬು ಜಗಜೀವನ್ ರಾಂ ಪ್ರಶಸ್ತಿ
ಬಾಬು ಜಗಜೀವನ್ ರಾಂ ಪ್ರಶಸ್ತಿ ಪುರಸ್ಕೃತರಾದ ಎನ್​.ಡಿ.ವೆಂಕಮ್ಮ, ದಾನಪ್ಪ, ವೀರಪ್ಪ, ಕಾಂತರಾಜು ಹಾಗೂ ದಕ್ಕಲ ಮುನಿಸ್ವಾಮಿ
Follow us on

ಬೆಂಗಳೂರು: ಬಾಬು ಜಗಜೀವನ್​ ರಾಂ ಜನ್ಮದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರವು ಐವರು ಸಾಧಕರಿಗೆ ವಿಶೇಷ ಪ್ರಶಸ್ತಿ ಘೋಷಿಸಿದೆ. ಪ್ರತಿ ಸಾಧಕರಿಗೆ ಪ್ರಶಸ್ತಿ ಫಲಕದೊಂದಿಗೆ 20 ಚಿನ್ನದ ಚಿನ್ನದ ಪದಕ ಹಾಗೂ ₹ 5 ಲಕ್ಷ ನಗದು ಪುರಸ್ಕಾರ ನೀಡಲಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡವರನ್ನು ಸಾರ್ವಜನಿಕ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ 2018ರಿಂದಲೂ ಈ ಪ್ರಶಸ್ತಿಗಳನ್ನು ನೀಡಿರಲಿಲ್ಲ. ಡಾ.ಚಂದ್ರಶೇಖರ್ ನೇತೃತ್ವದ ಐವರ ಸಮಿತಿ ಈ ಸಾಧಕರನ್ನು ಆಯ್ಕೆ ಮಾಡಿದೆ. ದಾನಪ್ಪ ಸಿ ನಿಲೋಗಲ್ (ಸಾಮಾಜಿಕ), ಆರ್.ಎಂ.ಕಾಂತರಾಜು (ಸಾಮಾಜಿಕ), ದಕ್ಕಲ ಮುನಿಸ್ವಾಮಿ (ಜಾನಪದ ಕಲಾವಿದ), ವೀರಪ್ಪ ಬಿ.ಸವಣೂರು (ಶಿಕ್ಷಣ ಮತ್ತು ಸಾಹಿತ್ಯ), ಎನ್​.ಡಿ.ವೆಂಕಮ್ಮ (ಸಾಹಿತ್ಯ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮವು ಇಂದು (ಏಪ್ರಿಲ್ 5) ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆಯಲಿದೆ.

ದಲಿತ ಸಾಹಿತಿ ದಾನಪ್ಪ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ಶ್ರಮಿಸಿದ್ದರು. ದಲಿತರ ಹೊಟೆಲ್ ಪ್ರವೇಶ, ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಹೋರಾಡಿದ್ದರು. ಅಂಬೇಡ್ಕರ್ ಸಾಹಿತ್ಯ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕಲಾವಿದ ದಕ್ಕಲ ಮುನಿಸ್ವಾಮಿ ಅವರು ಕಿನ್ನರಿ ನುಡಿಸುವುದರೊಂದಿಗೆ ಕನ್ನಡ ಜಾನಪದ ಮಹಾಕಾವ್ಯ ದಕ್ಕಲ ಜಾಂಬವ ಪುರಾಣವನ್ನು ಹಾಡುತ್ತಾರೆ. ತ್ರಿಮೂರ್ತಿಗಳು ಸೃಷ್ಟಿಯಾಗಿದ್ದೇ ಆದಿ ಜಾಂಬವ ಮುನಿಯಿಂತ ಎನ್ನುವುದು ಇವರು ಪ್ರತಿಪಾದಿಸುವ ತತ್ವ. ಹಳ್ಳಿಗಳಲ್ಲಿ ವಾರಗಟ್ಟಲೆ ನೆಲೆನಿಂತು ಕಾವ್ಯಪ್ರಚಾರ ಮಾಡುತ್ತಾರೆ.

ಸಾಮಾಜಿಕ ಹೋರಾಟಗಾರರಾದ ಆರ್.ಎಂ.ಕಾಂತರಾಜು ಅವರು ಚಾಮರಾಜನಗರ ಜಿಲ್ಲೆಯಲ್ಲಿ ದಲಿತರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. 1990-95ರಲ್ಲಿ ಚಾಮರಾಜನಗರ ಪುರಸಭೆ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಈ ಅವಧಿಯಲ್ಲಿಯೂ ದಲಿತ ಪರ ಕಾಳಜಿಯಿಂದ ಹೆಸರು ಮಾಡಿದರು.

ಸಾಹಿತಿ ವೀರಪ್ಪ ಬಿ ಸವಣೂರು ಅವರು ತಳಸಮುದಾಯಗಳಲ್ಲಿ ಜಾಗೃತಿ ಮೂಡಿಸಲು 1980ರಲ್ಲಿ ಗಜೇಂದ್ರಗಡದಲ್ಲಿ ಸಿದ್ದಾರೂಢ ಮಠವನ್ನು ನಿರ್ಮಿಸಿದರು. ತಮ್ಮ ಪಿತ್ರಾರ್ಜಿತ ಜಮೀನನ್ನು ಮಠಕ್ಕೆ ದಾನ ಮಾಡಿದ್ದರು. ಸಿದ್ದಾರೂಢ ಸೇವಾ ಸಮಿತಿ ಶಿಕ್ಷಣ ಸಂಸ್ಥೆ ಮೂಲಕ 7ನೇ ತರಗತಿಯವರೆಗೂ ವಿದ್ಯಾದಾನ ಮಾಡುತ್ತಿದ್ದಾರೆ. ತಮ್ಮ ನಿವೃತ್ತ ವೇತನವನ್ನು ಇದಕ್ಕಾಗಿ ವನಿಯೋಗಿಸುತ್ತಿದ್ದಾರೆ. ಸಾಮೂಹಿಕ ಅಂತರ್ಜಾತಿ ವಿವಾಹಗಳನ್ನು ಆಯೋಜಿಸುವ ಮೂಲಕ ಜಾತಿಪದ್ಧತಿ ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ.

ಕವಯತ್ರಿ ಎನ್.ಡಿ.ವೆಂಕಮ್ಮ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದವರು. ಮೊದಲ ತಲೆಮಾರಿನ ದಲಿತ ಮಹಿಳಾ ಸಾಹಿತಿ, ಕವಯತ್ರಿ ಎಂದು ಹೆಸರು ಪಡೆದಿದ್ದಾರೆ. ಭೀಮ ಸಂದೇಶ, ಬಯಲೇ ಸಂಗಾತಿ ಇವರ ಕವನ ಸಂಕಲನಗಳು.

ಇದನ್ನೂ ಓದಿ: 2020-21 ನೇ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನ ಘೋಷಣೆ ಮಾಡಿದ ಸಚಿವ ನಾರಾಯಣ ಗೌಡ; ಯಾರಿಗೆ ಯಾವ ಪ್ರಶಸ್ತಿ?

ಇದನ್ನೂ ಓದಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2021 ಪ್ರಕಟ: ಐವರು ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ, 10 ಸಾಹಿತಿಗಳಿಗೆ ಸಾಹಿತ್ಯ ಶ್ರೀ ಪ್ರಶಸ್ತಿ