
ಬೆಂಗಳೂರು, ನವೆಂಬರ್ 20: ನಗರದಲ್ಲಿ 7.11 ಕೋಟಿ ನಗದು ದರೋಡೆ ಪ್ರಕರಣ ಸಂಬಂಧ ಆರೋಪಿಗಳ ಸುಳಿವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ದರೋಡೆಕೋರರ ಗ್ಯಾಂಗ್ ತಿರುಪತಿಯಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಿರುಪತಿ ಪೊಲೀಸರೂ ಶೋಧ ಕಾರ್ಯಕ್ಕೆ ಸಾಥ್ ನೀಡಿದ್ದು, ಹೋಟೆಲ್, ಲಾಡ್ಜ್, ದೇಗುಲ ಬಳಿ ಮಫ್ತಿಯಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಹಣ ಬೇರೆ ಕಡೆ ಇರಿಸಿ ಆರೋಪಿಗಳು ತಿರುಪತಿಯಲ್ಲಿ ಇರುವ ಶಂಕೆ ತನಿಖೆ ವೇಳೆ ವ್ಯಕ್ತವಾಗಿದೆ.
ಪ್ರಕರಣ ಸಂಬಂಧ ಬಾಣಸವಾಡಿಯ ಕಲ್ಯಾಣನಗರದ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುಪಿ ನೋಂದಣಿಯ ಕಾರಿನ ನಂಬರ್ ಪ್ಲೇಟ್ ಹಾಕಿಕೊಂಡು ಗ್ಯಾಂಗ್ ಎಸ್ಕೇಪ್ ಆಗಿದ್ದು, ದರೋಡೆ ವೇಳೆ ಕಾರಿನ ನೋದಣಿ ಕರ್ನಾಟಕದ್ದು ಇತ್ತು. ಕಲ್ಯಾಣನಗರದ ಸ್ವಿಫ್ಟ್ ಕಾರ್ ನಂಬರ್ನ ಆರೋಪಿಗಳು ಬಳಸಿದ್ದರು. ದರೋಡೆಕೋರರು ಹಿಂದಿ ಮಾತನಾಡಿ ದಾರಿ ತಪ್ಪಿಸುವ ಕೆಲಸ ಮಾಡಿದ್ದು, ಸಿಸಿಟಿವಿ ಮತ್ತು ಲೊಕೇಶನ್ ಡಂಪಿಂಗ್ ಆಧಾರದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ; ವೆಬ್ ಸೀರೀಸ್ನಿಂದ ಪ್ರೇರಿತರಾಗಿದ್ರಾ ರಾಬರ್ಸ್?
ರಾಜ್ಯವನ್ನೇ ಬೆಚ್ಚಿಬೀಳಿಸಿರುವ ರಾಬರಿ ಪ್ರಕರಣ ಬೆಂಗಳೂರು ನಗರ ಪೊಲೀಸರ ತಲೆಕೆಡಿಸಿದೆ. ನಾಲ್ವರು ಜಂಟಿ ಆಯುಕ್ತರು, 18 ಡಿಸಿಪಿಗಳ ನೇತೃತ್ವದಲ್ಲಿ ಆರೋಪಿಗಳಿಗೆ ಹುಡುಕಾಟ ನಡೆದಿದೆ. L&O, CCB, ಟ್ರಾಫಿಕ್ ಪೊಲೀಸರೂ ಶೋಧಕಾರ್ಯದಲ್ಲಿ ಭಾಗಿಯಾಗಿದ್ದಾರೆ. ನಾಲ್ವರು ಜಂಟಿ ಪೊಲೀಸ್ ಆಯುಕ್ತರು ಇಡೀ ಕೇಸ್ ಮಾನಿಟರ್ ಮಾಡುತ್ತಿದ್ದು, ಈವರೆಗೆ ನಗರದಲ್ಲಿ ನೂರಕ್ಕೂ ಹೆಚ್ಚು ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಲಾಗಿದೆ. ಸಿಎಂಎಸ್ ವಾಹನದ ಮೊದಲ ಪಾಯಿಂಟ್ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ಹೆಚ್ಡಿಎಫ್ಸಿ ಬ್ಯಾಂಕ್ನಿಂದ ಹಣ ತುಂಬಿ ವಾಹನ ಹೊಡುವ ವೇಳೆ ಆರೋಪಿಗಳಿದ್ದ ಇನ್ನೋವಾ ಕಾರು ಅಲ್ಲಿ ಕಂಡಬಂದಿಲ್ಲ. ಸ್ವಲ್ಪ ದೂರದಿಂದ ಕಾರಿನಲ್ಲಿ ಆರೋಪಿಗಳು ಫಾಲೋ ಮಾಡಿದ್ದು, HDFC ಬ್ಯಾಂಕ್ ಬಳಿಯಿಂದ ಬೈಕ್ನಲ್ಲಿ ಫಾಲೋ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಆ ವೇಳೆ ಸ್ಥಳದಲ್ಲಿದ್ದ ಬೈಕ್ಗಳ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.
ವರದಿ- ವಿಕಾಸ್, ಟಿವಿ9, ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:20 pm, Thu, 20 November 25