ಬೆಂಗಳೂರು ಅ.11: ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ಮಧ್ಯರಾತ್ರಿ ಬೆಂಗಳೂರಿನ ಆರ್. ಟಿ.ನಗರದ ಮಾಜಿ ಕಾರ್ಪೊರೇಟರ್ (Former Corporator) ಅಶ್ವತ್ಥಮ್ಮ, ಪತಿ ಆರ್.ಅಂಬಿಕಾಪತಿ ಮತ್ತು ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ್ ಫ್ಯ್ಲಾಟ್ ಮೇಲೆ ದಾಳಿ ಮಾಡಿದ್ದರು. ಪರಿಶೀಲನೆ ವೇಳೆ ಬೆಡ್ ರೂಮ್ನ ಮಂಚದ ಕೆಳಗೆ 23 ಬಾಕ್ಸ್ನಲ್ಲಿ 500 ರೂ. ಮುಖಬೆಲೆಯ 40 ಕೋಟಿ ರೂ.ಗೂ ಅಧಿಕ ಕಂತೆ ಕಂತೆ ಹಣ ಪತ್ತೆಯಾಗಿದೆ. ಹಾಗಿದ್ದರೆ ಈ ಹಣ ಯಾರಿಗೆ ಸೇರಿದ್ದು, ಯಾಕೆ ಸಂಗ್ರಹಿಸಲಾಗಿತ್ತು, ಎಲ್ಲಿಗೆ ಕಳುಹಿಸಲು ಪ್ಲಾನ್ ಮಾಡಿಕೊಂಡಿದ್ದರು ಎಂಬ ಇನ್ ಸೈಡ್ ಮಾಹಿತಿ ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ಬಿಲ್ಡರ್ಸ್, ಚಿನ್ನದ ವ್ಯಾಪಾರಿಗಳು ಹಾಗೂ ಗುತ್ತಿಗೆದಾರರಿಂದ ಈ ಹಣ ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಲಾದ ಹಣವನ್ನು ಬೆಂಗಳೂರಿನಿಂದ-ಚೆನ್ನೈಗೆ, ಚೆನ್ನೈಯಿಂದ-ಹೈದ್ರಬಾದ್ಗೆ ವಾರ್ಗವಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ತೆಲೆಂಗಾಣ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಇಲ್ಲಿ ಹಣ ಸಂಗ್ರಹಿಸಿ ಅಲ್ಲಿಗೆ ಕಳುಹಿಸಲು ಮುಂದಾಗಿದ್ದರು ಎಂಬ ಮಾಹಿತಿ ದೊರೆತಿದೆ. ಚುನಾವಣೆ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದು ಕಳೆದ ಮೂರು ದಿನಗಳಿಂದ ರೇಡ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಫ್ಲಾಟ್ ಒಂದರ ಮೇಲೆ ಐಟಿ ದಾಳಿ, ಮಂಚದಡಿ ಕಂತೆ ಕಂತೆ ನೋಟುಗಳು ಪತ್ತೆ
ಆರ್.ಟಿ ನಗರದ ಆನಂದ ಕೊಲೋನಿ ನಿವಾಸಿಯಾಗಿರುವ ಅಶ್ವತಮ್ಮ ಕಾಂಗ್ರೆಸ್ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಕ್ಕ. 2001ರಲ್ಲಿ ಕಾವಲ್ ಬೈರಸಂದ್ರ (ವಾರ್ಡ್ ನಂ 95)ರ ಕಾರ್ಪೊರೇಟರ್ ಆಗಿದ್ದರು. ಇವರ ಪತಿ ಆರ್.ಅಂಬಿಕಾಪತಿ ಕಾಂಟ್ರಾಕ್ಟರ್ ಆಗಿದ್ದಾರೆ. ಕೆಂಪಣ್ಣ ಅವರ ಕಾಂಟ್ರಾಕ್ಟರ್ ಸಂಘದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ಶೇ.40 ನೀಡಬೇಕು, ಬಿಬಿಎಂಪಿಯಲ್ಲಿ 50 ಪರ್ಸೆಂಟ್ ನೀಡಬೇಕು ಎಂದು ಆರೋಪ ಮಾಡಿದ್ದರು. ಕೆಲವು ರಾಜಕೀಯ ವ್ಯಕ್ತಿಗಳ ವಿರುದ್ಧ ಆರೋಪ ಮಾಡಿದ್ದರು.
ತನ್ನ ವಿರುದ್ಧ ಕಮಿಷನ್ ಆರೋಪ ಮಾಡಿದ ಬಿಜೆಪಿ ಶಾಸಕ ಮುನಿರತ್ನ ಅವರು ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು. ಈ ಪ್ರಕರಣದಲ್ಲಿ ಅಂಬಿಕಾಪತಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.
ಆರ್ಟಿ ನಗರದ ವೈಟ್ ಗೌಸ್ನಲ್ಲಿರುವ ಅಂಬಿಕಾಪತಿ ಮಗಳ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಒಂದು ಮನೆ ಮತ್ತು ಆರ್ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎರಡು ಕಡೆ ದಾಳಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ