ಬೆಂಗಳೂರು: ಐತಿಹಾಸಿನ ಕರಗ ಮಹೋತ್ಸವ ಆರಂಭಕ್ಕೂ ಮನ್ನ ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಾಲಯದ (Thigalarapet Dharmaraya Swamy Temple) ಬಳಿಯ ಒಟಿಸಿ ಮುಖ್ಯ ರಸ್ತೆಯಲ್ಲಿ ಗುರುವಾರ ರಾತ್ರಿ ವಿದ್ಯುತ್ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಸ್‌ಪಿ ರಸ್ತೆಯಿಂದ ಎನ್ಆರ್ ಜಂಕ್ಷನ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮವಾಗಿ ಸಂಭಾವ್ಯ ದುರಂತ ತಪ್ಪಿದೆ.
ಗುರುವಾರ ಮಧ್ಯಾಹ್ನದ ವೇಳೆಗೆ ಧರ್ಮರಾಯ ಸ್ವಾಮಿ ದೇವಾಲಯದ ಬಳಿ ಅಗ್ನಿ ಅವಘಡ ಸಂಭವಿಸಿ 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮವಾಗಿದ್ದವು. ಕರ್ಪೂರ ಹಚ್ಚಲಿರುವ ಹಿನ್ನೆಲೆಯಲ್ಲಿ ಬೈಕ್ಗಳನ್ನು ತೆರವುಗೊಳಿಸುವಂತೆ ಮೈಕ್ನಲ್ಲಿ ಹೇಳಿದರೂ ಮಾಲೀಕರು ತೆರವು ಮಾಡಿರಲಿಲ್ಲ. ಅದಾಗ್ಯೂ, ಬೈಕ್ ನಿಲ್ಲಿಸಿದ್ದ ಸ್ಥಳ ಬಳಿ ದೊಡ್ಡ ಕರ್ಪೂರ ಹಚ್ಚಿದ ಕಾರಣ ಅದರಿಂದ ಹಾರಿದ ಬೆಂಕಿಯ ಕಿಡಿ ದ್ವಿಚಕ್ರ ವಾಹನಗಳಿಗೆ ತಗುಲಿತ್ತು. ಪರಿಣಾಮವಾಗಿ ಪಾರ್ಕ್ ಮಾಡಿದ್ದ ಬೈಕ್ಗಳು ಹೊತ್ತಿ ಉರಿದಿದ್ದವು.
ಇದನ್ನೂ ಓದಿ: Bengaluru Karaga Mahotsava: ಬೆಂಗಳೂರಿನ ಐತಿಹಾತಿಕ ಕರಗ ಮಹೋತ್ಸವದ ವೇಳೆ ಅಗ್ನಿ ಅವಘಡ, ಬೈಕ್ಗಳು ಭಸ್ಮ
ಈ ಮಧ್ಯೆ ಕರಗ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಬೆಳಗ್ಗೆ 10.30ಕ್ಕೆ ಕಬ್ಬನ್ ಪಾರ್ಕ್‌ನ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಅರಿಶಿನ ಬಣ್ಣದ ಸೀರೆ ಉಟ್ಟು ಬಳೆಗಳನ್ನು ತೊಟ್ಟ ಕರಗ ಹೊತ್ತ ಅರ್ಚಕರು ಗಂಗಾಪೂಜೆ ಸಲ್ಲಿಸಿದ್ದರು. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಲಾಗಿದೆ. ಮಧ್ಯರಾತ್ರಿ 12.30ಕ್ಕೆ ಕರಗ ಮೆರವಣಿಗೆ ದೇವಸ್ಥಾನದಿಂದ ಹೊರ ಬರಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ