ಶೈಕ್ಷಣಿಕ, ಉದ್ಯೋಗ ಸ್ಥಿತಿಗತಿ ಗಮನಿಸಿ ಮೀಸಲಾತಿ ನೀಡಬೇಕು: ಒಬಿಸಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ

|

Updated on: Mar 15, 2023 | 3:51 PM

ರಾಜ್ಯದಲ್ಲಿ ಚಿಕ್ಕಪುಟ್ಟ 46 ಸಮುದಾಯ ಇವೆ. ಈ ಪೈಕಿ ಮೂನ್ನೂರಕ್ಕೂ ಕಡಿಮೆ ಜನಸಂಖ್ಯೆ ಇರುವವರನ್ನು ಗುರುತಿಸಿ ವರದಿ ನೀಡಲಾಗಿದೆ. ಇಂತಹ ಸಮುದಾಯಕ್ಕೆ ಮೀಸಲಾತಿ ನೀಡಬೇಕಿದೆ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಶೈಕ್ಷಣಿಕ, ಉದ್ಯೋಗ ಸ್ಥಿತಿಗತಿ ಗಮನಿಸಿ ಮೀಸಲಾತಿ ನೀಡಬೇಕು: ಒಬಿಸಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ
Follow us on

ಬೆಂಗಳೂರು: ವಿವಿಧ ಜಾತಿಗಳಿಗೆ ಮೀಸಲಾತಿ ನೀಡುವ ವಿಚಾರವಾಗಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ (Backward Classes Commission), ವರದಿಯನ್ನು ಸಿದ್ದಪಡಿಸಿ ರಾಜ್ಯಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದೆ. ಈ ಬಗ್ಗೆ ನಗರದ ದೇವರಾಜು‌ ಅರಸು‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಸಣ್ಣ ಅಥವಾ ದೊಡ್ಡ ಸಮುದಾಯ ಆಗಿರಲಿ ಶೈಕ್ಷಣಿಕ ಹಾಗೂ ಉದ್ಯೋಗ ಸ್ಥಿತಿ ಗತಿ ಗಮನಿಸಿ ಮೀಸಲಾತಿ ನೀಡಬೇಕು. ರಾಜ್ಯದಲ್ಲಿ ಚಿಕ್ಕಪುಟ್ಟ 46 ಸಮುದಾಯ ಇವೆ. ಈ ಪೈಕಿ ಮೂನ್ನೂರಕ್ಕೂ ಕಡಿಮೆ ಜನಸಂಖ್ಯೆ ಇರುವವರನ್ನು ಗುರುತಿಸಿ ವರದಿ ನೀಡಲಾಗಿದೆ. ಸರ್ಕಾರದ ಸೌಲಭ್ಯಗಳು ಈ ಸಮುದಾಯಕ್ಕೆ ಇನ್ನೂ ತಲುಪಲಿಲ್ಲ. ಯಾವ ವರ್ಗದಲ್ಲಿ ಮೀಸಲಾತಿ ಇವೆ ಎಂಬುವುದು ಈ ಸಮುದಾಯದಕ್ಕೆ ಮಾಹಿತಿ ಇಲ್ಲ. ಇಂತಹ ಸಮುದಾಯಕ್ಕೆ ಮೀಸಲಾತಿ ಕೊಡಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಕಾಂತರಾಜು ವರದಿ ಜಾರಿ ವಿಚಾರವಾಗಿ ಮಾತನಾಡಿದ ಆಯೋಗದ ಅಧ್ಯಕ್ಷರು, ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿರಲಿಲ್ಲ. ಹಾಗಾಗಿ ಸರ್ಕಾರ ಅದನ್ನು ಸ್ವೀಕಾರ ಮಾಡಲಿಲ್ಲ, ಈವಗ ಆಯೋಗದಿಂದ ಪತ್ರ ಬರೆದು ಹೊಸದಾಗಿ ವರದಿ ಸಿದ್ಧಪಡಿಸಬೇಕೇ ಎಂದು ಕೇಳಲಾಗಿದೆ. ಎಲ್ಲವೂ ಸರ್ಕಾರದ ಮೇಲೆ ಅವಲಂಬಿತವಾಗಿದೆ. ರಾಜ್ಯದಲ್ಲಿ ಸರಿಸುಮಾರು 900 ಜಾತಿಗಳ ಉಲ್ಲೇಖ ಇದೆ. ಮೀಸಲಾತಿಗಾಗಿ ಸೇರ್ಪಡೆ ಅಥವಾ ರದ್ದತಿ ಪ್ರಕ್ರಿಯೆಯಲ್ಲಿ ಕೆಲವೊಂದು ಜಾತಿಗಳು ವರ್ಗಾವಣೆಗೊಂಡಿವೆ. ಈ ಹಿನ್ನಲೆಯಲ್ಲಿ ಜಾತಿಗಳ ಮರುವಿಂಗಡನೆ ಆಗಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಮರುವಿಂಗಡನೆ ಆದ ಪಟ್ಟಿಯನ್ನು ಪ್ರತಿ ಗ್ರಾಮ ಪಂಚಾಯತಿಗೆ ನೀಡುತ್ತೇವೆ. ಇದರಿಂದ ಯಾವ ಜಾತಿ ಯಾವ ವರ್ಗದಲ್ಲಿ ಇದೆ ಎಂದು ತಿಳಿಯುತ್ತದೆ. ಇದು ಆಯೋಗದ ಆಶಯವಾಗಿದೆ ಎಂದರು.

ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಕೊಟ್ಟಿದೆ

ವೀರಶೈವ ಲಿಂಗಾಯತದಲ್ಲಿ 3 ಬಿಯಲ್ಲಿ ಎ ಮತ್ತು ಬಿ ಎನ್ನುವ ವರ್ಗ ಇದೆ, ಎ ವರ್ಗದಲ್ಲಿ ವೀರಶೈವ ಲಿಂಗಾಯತ ಒಂದು ಜಾತಿ, ಬಿ ಅಡಿ 23 ಜಾತಿ ಇತ್ತು. ನಂತರ 19 ಉಪ ಜಾತಿ ಸೇರಿಸಿ ಅದರಲ್ಲಿ ಪಂಚಮಸಾಲಿ ಬಿಟ್ಟು ಉಳಿದವನ್ನು ವಾಪಸ್ ಪಡೆಯಲಾಗಿದೆ. ಈಗ ವೀರಶೈವ ಲಿಂಗಾಯತ ಎ ವರ್ಗದಲ್ಲಿ ಉಪಜಾತಿಗಳು ಯಾವುದು ಇರಲಿಲ್ಲ. ಅದಕ್ಕೂ ಒಂದು ವರದಿ ಕೊಟ್ಟಿದ್ದೇವೆ. ಹಳೆಯದರ ಜೊತೆ 22 ಜಾತಿ ಸೇರಿಸಿದ್ದು 45 ಜಾತಿ ಆಗಲಿದೆ. ಇದರಿಂದ ಉಪ ಜಾತಿಯವರಿಗೆ ಜಾತಿ ಪ್ರಮಾಣ ಪತ್ರದಲ್ಲಿ ಪಡೆಯಲು ಸಹಾಯಕ ಆಗಲಿದೆ. ನಮ್ಮ ಆಯೋಗ ಮಧ್ಯಂತರ ವರಿದ ಸರ್ಕಾರಕ್ಕೆ ನೀಡಿದೆ. ಮುಚ್ಚಿದ ಲಕೋಟೆಯಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಕೊಟ್ಟಿದೆ. ವಿಚಾರಣೆಗೆ ಬಂದಾಗ ಮಾಹಿತಿ ಸಿಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಕೈ ಸೇರಿದ ಹಿಂದುಳಿದ ವರ್ಗಗಳ ಆಯೋಗದ ಮೀಸಲಾತಿ ವರದಿ, ಆಯೋಗ ಏನೆಲ್ಲ ಶಿಫಾರಸು ಮಾಡಿದೆ? ಇಲ್ಲಿದೆ ವಿವರ

ವೀರಶೈವ ಸಮುದಾಯದಲ್ಲಿ ಈ ಮೊದಲು 23 ಜಾತಿಗಳು ಇದ್ದವು. 2009ರಲ್ಲಿ 19 ಇತರೆ ಜಾತಿಗಳು ವೀರಶೈವ ಸಮುದಾಯಕ್ಕೆ ಸೇರ್ಪಡೆಯಾಗಿವೆ. ಇದರಲ್ಲಿ ಪಂಚಮಸಾಲಿ ಸಮುದಾಯ ಸಹ ಸೇರಿತ್ತು. ಪುನಃ 1 ತಿಂಗಳಲ್ಲಿ ಪಂಚಮಸಾಲಿ ಹೊರತುಪಡಿಸಿ ಉಳಿದ 18 ಜಾತಿ ರದ್ದು ಮಾಡಲಾಯಿತು. ಈಗ ಮತ್ತೆ ಮರುಸೇರ್ಪಡೆ ಮಾಡಲು ಮನವಿ ಬಂದಿದೆ. ಹೀಗಾಗಿ 18 ಜಾತಿಗಳನ್ನು ಸೇರಿಸಲು ಶಿಫಾರಸು ಮಾಡಿ ವರದಿ ಕೊಡಲಾಗಿದೆ ಎಂದು ಹೇಳಿದರು.

ಸರ್ಕಾರಿ‌ ಕಾಲೇಜು ಮತ್ತು ವಿವಿಗಳಿಂದಲೂ ಮಾಹಿತಿ ಕಲೆ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಹಲವು ಜಿಲ್ಲೆಗಳಲ್ಲಿ ಸಾಮಾಜಿಕ‌, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ‌ನಡೆಯುತ್ತಿದೆ. ಸರ್ಕಾರಿ‌ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಂಪ್ಯೂಟರ್ ಮೂಲಕ ಸರ್ಕಾರಿ ನೌಕರರ ದಾಖಲಾತಿ ಸಂಗ್ರಹ ಆಗುತ್ತಿದೆ. ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಬಗ್ಗೆಯೂ ಮನವಿ ಬಂದಿದ್ದು, ಇದು ಪರಿಶೀಲನಾ ಹಂತದಲ್ಲಿದೆ ಎಂದರು.

ವಿವಿಧ ಜಾತಿಗಳಿಗೆ ಮೀಸಲಾತಿ ನೀಡುವ ವಿಚಾರವಾಗಿ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚಿಸಲಾಗಿತ್ತು. ಅದರಂತೆ ಅಧ್ಯಯನ ನಡೆಸಿದ ಆಯೋಗವು, ವಿವಿಧ ವಿಷಯಗಳಿಗೆ ಸಂಬಂಧಿಸಿದ ಒಟ್ಟು 32 ವರದಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದೆ. ಸಣ್ಣ ಪುಟ್ಟ ಜಾತಿಗಳು ಮೀಸಲಾತಿ ವಂಚಿತವಾಗಿರುವ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ವಿವಿಧ ಸಣ್ಣ ಪುಟ್ಟ ಪಂಗಡಗಳ ಬಗ್ಗೆ ವರದಿಯಲ್ಲಿ ವಿವರಣೆ ನೀಡಲಾಗಿದೆ. ಹಾಗೆ ಹಿಂದುಳಿದ ಜಾತಿಗೆ ಸೇರುವ ಸಣ್ಣ ಸಣ್ಣ ಸಮುದಾಯಗಳಿಗೆ ಮೀಸಲಾತಿ ನೀಡಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Wed, 15 March 23