ಬೆಂಗಳೂರು: ಕೆಲಸ ಕೊಡಿಸುತ್ತೇವೆ ಅಂತ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್ನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಲ್ಲು ಶಿವಶಂಕರ ರೆಡ್ಡಿ, ಗುಂಜ ಮಂಗರಾವ್, ಶೇಕ್ ಶಹಬಾಜಿ, ಮಹೇಶ್ ಬಂಧಿತ ಆರೋಪಿಗಳು. ಗ್ಯಾಂಗ್ ಸಾಮಾಜಿಕ ಜಾಲತಾಣದ ಮೂಲಕ ಕೆಲಸ ಕೊಡಿಸುತ್ತೇವೆ ಎಂದು ಜಾಹಿರಾತು ನೀಡಿದೆ. ಇದನ್ನು ನಂಬಿದ್ದ ಆಂಧ್ರಪ್ರದೇಶದ ಪ್ರದೀಪ್ ಅಸಾಮ್ವರ್ಗೆ ಆರೋಪಿ ಮಲ್ಲು ಶಿವಶಂಕರ್ ರೆಡ್ಡಿ ಫೇಸ್ ಬುಕ್ ಮುಖಾಂತರ ಪರಿಚಯವಾಗಿದ್ದನು. ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ, ಆಂದ್ರದಿಂದ ಬೆಂಗಳೂರಿಗೆ ಬರುವಂತೆ ಆರೋಪಿ ಹೇಳಿದ್ದನು.
ಇದರಂತೆ ಪ್ರದೀಪ್ ಅಸಾಮ್ವರ್ ಜನವರಿ 11 ರಂದು ಬೆಳಗ್ಗೆ 5.30 ಕ್ಕೆ ಹೆಬ್ಬಾಳ ಬಳಿ ಬಂದು ಇಳಿದಿದ್ದನು. ಹೆಬ್ಬಾಳನಲ್ಲಿ ಪ್ರದೀಪ್ ಅಸಾಮ್ವರ್ನನ್ನು ಸ್ವಿಫ್ಟ್ ಕಾರಿನಲ್ಲಿ ಬಂದು ನಾಲ್ವರು ಪಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಪ್ರದೀಪ್ ಅಸಾಮ್ವರ್ ಕಾರಿನ ಫೋಟೊ ತೆಗೆದುಕೊಂಡಿದ್ದನು. ಪ್ರದೀಪ್ನನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದ ಗ್ಯಾಂಗ್ ಮ್ಯಾನೆಜರ್ ಭೇಟಿ ಮಾಡಿಸ್ತೇವೆ ಎಂದು ಕರೆದೊಯ್ದಿದ್ದಾರೆ. ಹೀಗೆ ಕಾರಿನಲ್ಲಿ ಹೋಗುವಾಗ ಪ್ರದೀಪ್, ಶಿವಶಂಕರ್ ರೆಡ್ಡಿ ಜೊತೆಗೆ ಬಂದಿದ್ದವರ ಹೆಸರು ಕೇಳಿದ್ದಾನೆ. ಆಗ ಆರೋಪಿ ಶಿವಶಂಕರ್ ರೆಡ್ಡಿ ಹೆಸರು ಹೇಳದಿದ್ದಾಗ ಆತನಿಗೆ ಅನುಮಾನ ಬಂದಿದೆ.
ಬಳಿಕ ಗ್ಯಾಂಗ್ ಡಾಕ್ಯುಮೆಂಟ್ ಚಾರ್ಜ್ ಎಂದು 30 ಸಾವಿರ ಹಣ ಹಾಕಲು ಪ್ರದೀಪ್ಗೆ ಹೇಳಿದೆ. ಗೂಗಲ್ ಪೇ ವರ್ಕ್ ಆಗದಿದ್ದಾಗ ಮೊಬೈಲ್ ಕಸಿದು ಪರಿಶೀಲನೆ ಮಾಡಿದ್ದಾರೆ. ಆಗ ಕಾರಿನ ಫೋಟೊ ಲೈವ್ ಲೊಕೇಶನ್ ನೋಡಿ ಪ್ರದೀಪ್ಗೆ ಥಳಿಸಿದ್ದಾರೆ. ನಂತರ ನಿನಗೆ ಕೆಲಸ ಸಿಕ್ಕಿದೆ ಎಂದು ಸ್ನೇಹಿತರ ಬಳಿ ಹಣ ಹಾಕಿಸಿಕೊ ಎಂದು ಪ್ರದೀಪ್ಗೆ ಬೆದರಿಸಿದ್ದಾರೆ. ಹೀಗೆ ಆರೋಪಿಗಳು ಒಟ್ಟು 6 ಲಕ್ಷ ಹಣ ಅಕೌಂಟ್ ಮೂಲಕ ಪಾವತಿ ಮಾಡಿಸಿಕೊಂಡಿದೆ. ಅಲ್ಲದೆ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ನಲ್ಲೂ ಹಾಣ ಹಾಕಿಸಿಕೊಂಡಿದ್ದಾರೆ. ನಂತರ ಯಲಹಂಕ ಸಮೀದ ಡೆಕಾತ್ ಲ್ಯಾನ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಬಳಿಕ ಪ್ರದೀಪ್ ಘಟನೆ ಸಂಬಂಧ ಕೊಡಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಸಿದ್ದಾರೆ. ಸದ್ಯ 5 ಅಕೌಂಟ್ನಲ್ಲಿರುವ 5 ಲಕ್ಷ ಹಣ ಫ್ರೀಜ್ ಮಾಡಿಸಲಾಗಿದೆ.
ಕೊಡಿಗೆಹಳ್ಳಿ ಪೊಲೀಸರ ವಿಚಾರಣೆ ವೇಳೆ ಭಯಾನಕ ವಿಚಾರ ಹೊರಬಂದಿದೆ. ಆರೋಪಿ ಮಲ್ಲು ಅಲಿಯಾಸ್ ಗೋಪಿಚಂದ್ ಕೂಡ ಟೆಕ್ಕಿಯಾಗಿದ್ದಾನೆ. ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಕೆಲಸ ಮಾಡಿಕೊಂಡಿದ್ದನು. ಆಸಾಮಿ ಡೂಪ್ಲಿಕೇಟ್ ದಾಖಲಾತಿ ನೀಡಿ ಕೆಲಸಕ್ಕೆ ಸೇರಿಕೊಂಡಿದ್ದನು. ವಿಷಯ ಗೊತ್ತಾದ ಬಳಿಕ ಆತನನ್ನ ಕೆಲಸದಿಂದ ತೆಗೆದುಹಾಕಲಾಗಿತ್ತು. ಆಗಿನಿಂದ ಕೆಲಸ ಇಲ್ಲದೆ ಖಾಲಿ ಇದ್ದನು.
ಹೀಗಾಗಿ ಫೇಸ್ ಬುಕ್ ನಲ್ಲಿ ಶಿವಶಂಕರ್ ಎನ್ನುವ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದನು. ನಂತರ ನಮ್ಮಲ್ಲಿ ಕನ್ಸಲ್ಟೆನ್ಸಿ ಕೆಲಸ ಕೊಡಿಸುತ್ತೇವೆ ಎಂದು ಜಾಹಿರಾತು ನೀಡಿದ್ದರು. ಆಸಕ್ತಿ ಇರುವವರು ಸಂಪರ್ಕಿಸಿದಾಗ ಬಲೆ ಹಾಕುತ್ತಿದ್ದನು. ಆರೋಪಿ ಕೇವಲ ಮೆಸೆಂಜರ್ನಲ್ಲಿ ಮಾತ್ರ ಸಂಪರ್ಕ ಮಾಡುತ್ತಿದ್ದನು. ಕೆಲಸ ಕೊಡಿಸಲು 4-5 ಲಕ್ಷಕ್ಕೆ ಡಿಮ್ಯಾಂಡ್ ಮಾಡುತ್ತಿದ್ದನು. ದುಡ್ಡು ಇದ್ಯೋ ಇಲ್ವೋ ಅನ್ನೋದನ್ನ ತಿಳಿಯಲು ಅಕೌಂಟ್ ಬ್ಯಾಲೆನ್ಸ್ ಸ್ಕ್ರೀನ್ ಶಾಟ್ ಕಳುಹಿಸಿಕೊಳ್ಳುತ್ತಿದ್ದನು.