ಕೆಇಎ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರ ತೆಗೆಸಿದ ವಿಚಾರ: ಕಾಂಗ್ರೆಸ್​ ವಿರುದ್ಧ ಭಾರತಿ ಶೆಟ್ಟಿ ವಾಗ್ದಾಳಿ

| Updated By: ವಿವೇಕ ಬಿರಾದಾರ

Updated on: Nov 08, 2023 | 1:53 PM

ಮಹಿಳೆಯರಿಗೆ ಅವಮಾನ ಮಾಡಲು ಲೈಸೆನ್ಸ್ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಹೆಣ್ಣುಮಕ್ಕಳ ಸೌಮಂಗಲ್ಯತನವನ್ನು ಇಳಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.

ಕೆಇಎ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರ ತೆಗೆಸಿದ ವಿಚಾರ: ಕಾಂಗ್ರೆಸ್​ ವಿರುದ್ಧ ಭಾರತಿ ಶೆಟ್ಟಿ ವಾಗ್ದಾಳಿ
ಬಿಜೆಪಿ ಎಂಎಲ್​ಸಿ ಭಾರತಿ ಶೆಟ್ಟಿ
Follow us on

ಬೆಂಗಳೂರು ನ.08: ಕಲಬುರಗಿಯಲ್ಲಿ (Kalaburgi) ಕೆಇಎ (KEA) ಪರೀಕ್ಷೆಯಲ್ಲಿ ಮಹಿಳೆಯರ ತಾಳಿ, ಸರ, ಕಾಲುಂಗುರ ತೆಗೆಸಿದ್ದಾರೆ. ಹಿಜಾಬ್ (Hijab) ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ. ತಾಳಿ, ಕಾಲುಂಗುರದಿಂದ ಪರೀಕ್ಷೆಯಲ್ಲಿ ಮೋಸ ಮಾಡಲು ಸಾಧ್ಯವಿದೆಯಾ? ಇದಕ್ಕೆ ಬೇಸರ, ಅಸಹ್ಯ ಪಡಬೇಕು ಅಂತ ಅನ್ನಿಸುತ್ತಿದೆ. ಕಲಬುರಗಿಯ ಕಾಂಗ್ರೆಸ್ (Congress) ಮಹಾನಾಯಕ ಪ್ರಿಯಾಂಕ್ ಖರ್ಗೆ ಮಹಿಳೆಯರ ಬಗ್ಗೆ ಎಷ್ಟು ಗೌರವ ಇಟ್ಟುಕೊಂಡಿದ್ದಾರೆ ಅಂತ ಗೊತ್ತಿದೆ. ಮಹಿಳೆಯರು ಸರ್ಕಾರಿ ನೌಕರಿ ಪಡೆಯಲು ಮಂಚ ಹತ್ತಬೇಕು ಎಂದು ಹಿಂದೆ ಪ್ರಿಯಾಂಕ್ ಖರ್ಗೆ ಹೇಳಿದ್ದರು ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ (Bharathi Shetty) ವಾಗ್ದಾಳಿ ಮಾಡಿದರು. ​

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಹಿಳೆಯರಿಗೆ ಅವಮಾನ ಮಾಡಲು ಲೈಸೆನ್ಸ್ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ವೈಧವ್ಯ ಪ್ರಾಪ್ತಿಯಾದಾಗ, ಅನಾರೋಗ್ಯದ ವೇಳೆ ವೈದ್ಯರು ಸ್ಕ್ಯಾನ್​ ಮಾಡುವ ಸಮಯ ಹೊರತುಪಡಿಸಿ, ಬೇರೆ ಯಾವ ಸಮಯದಲ್ಲೂ ತಾಳಿ, ಸರ ತೆಗೆಯುವ ಸಂಪ್ರದಾಯ ಇಲ್ಲ. ಹೆಣ್ಣುಮಕ್ಕಳ ಸೌಮಂಗಲ್ಯತನವನ್ನು ಇಳಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಬೇಲಿಯೇ ಎದ್ದು ಹೊಲಮೇಯ್ದಂತಹ ಪರಿಸ್ಥಿತಿ ಕರ್ನಾಟಕದ ಮಹಿಳೆಯರದ್ದಾಗಿದೆ ಎಂದರು.

ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿಜಾಬ್​ಗೆ ಅವಕಾಶ; ಆದ್ರೆ ತಾಳಿ, ಕಾಲುಂಗರಕ್ಕೆ ನಿಷೇಧ; ಇದ್ಯಾವ ನ್ಯಾಯ ಎಂದ ಅಭ್ಯರ್ಥಿಗಳು

ಬಿಜೆಪಿ ಮೇಲೆ ಆಪರೇಷನ್ ಮಾಡುವ ಆರೋಪ ಮಾಡುತ್ತಾರೆ. ಕಾಂಗ್ರೆಸ್​ನವರಿಗೆ ಯಾವ ಆಪರೇಷನ್ ಕೂಡಾ ಮಾಡಬೇಕಾಗಿಲ್ಲ. ಜನರೇ ಅವರಿಗೆ ಆಪರೇಷನ್ ಮಾಡುತ್ತಾರೆ. ತಾಳಿ ಸರ ತೆಗೆಸುವುದನ್ನು ನಿಲ್ಲಿಸದಿದ್ದರೇ ಪಕ್ಷದ ಹೋರಾಟ ಇದ್ದೇ ಇದೆ. ಕಾನೂನಾತ್ಮಕ ಹೋರಾಟದ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಹೆಸರು ಕೇಳಿ ಬಂದ ವಿಚಾರವಾಗಿ ಮಾತನಾಡಿದ ಅವರು ಮಹಿಳಾ ನಾಯಕತ್ವ ಯಾವಾಗ ಬೇಡ ಅನ್ನಿಸುತ್ತದೆ? ಬಿಜೆಪಿ ಮಹಿಳೆಯರಿಗೆ ಅತೀ ಹೆಚ್ಚು ಸ್ಥಾನ ಕೊಟ್ಟಿದೆ. ಮಹಿಳೆಯರಿಗೆ ರಾಜ್ಯಾಧ್ಯಕ್ಷ ಸ್ಥಾನ, ಎಲ್ಲಾ ಉನ್ನತ ಸ್ಥಾನ ಕೊಡಿ ಎಂದು ನಾವು ಒತ್ತಾಯ ಮಾಡುತ್ತೇವೆ ಎಂದರು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ