ಬೆಂಗಳೂರು: ಈಗಾಗಲೇ ವೇತನ ಆಯೋಗವನ್ನು ರಚಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು. ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ (7th Pay Commission) ಜಾರಿ ವಿಚಾರವಾಗಿ ಮಾತನಾಡಿ, ವೇತನ ಆಯೋಗದ ವರದಿ ಬಂದ ಬಳಿಕ ಕ್ರಮ ಕೈಗೊಳ್ತೇವೆ. ಮಾರ್ಚ್ ಒಳಗೆ ಮಧ್ಯಂತರ ವರದಿ ಕೊಡಲು ಸೂಚಿಸುತ್ತೇನೆ. ವರದಿ ಬಂದ ಬಳಿಕ ಮಾರ್ಚ್ ಒಳಗೆ ಸೂಕ್ತ ಕ್ರಮಗೊಳ್ಳಲಾಗುತ್ತದೆ. ಮಧ್ಯಂತರ ವರದಿಯ ಶಿಫಾರಸು ಜಾರಿಗೆ ಸರ್ಕಾರ ಬದ್ಧವಾಗಿದೆ. ಈ ಕುರಿತು ನೌಕರರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಎಂದರು.
ಇನ್ನು ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುರ್ತು ಕಾರ್ಯಕಾರಿಣಿ ಸಭೆ ನಡೆದಿದ್ದು, 7ನೇ ವೇತನ ಆಯೋಗದಲ್ಲಿ ಹಳೇ ಪಿಂಚಣಿ ನೀತಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರಕ್ಕೆ ಫೆಬ್ರವರಿ 22ರಿಂದ 7 ದಿನಗಳ ಗಡುವು ನೀಡಲಾಗಿದೆ. ಒಂದು ವೇಳೆ ಗಡುವಿಗೆ ಸರ್ಕಾರ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮಾರ್ಚ್ 1ರಿಂದಲೇ ಕರ್ತವ್ಯಕ್ಕೆ ಗೈರಾಗಲು ನೌಕರರು ಸಭೆಯಲ್ಲಿ ನಿರ್ಧಾರಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರು ಸರ್ಕಾರದ ಭಾಗ, 7ನೇ ವೇತನಾ ಆಯೋಗದ ಶಿಫಾರಸ್ಸುಗಳನ್ನು ಅವರೊಂದಿಗೆ ಚರ್ಚಿಸುತ್ತೇವೆ: ಬಸವರಾಜ ಬೊಮ್ಮಾಯಿ
ತುರ್ತು ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ತಿಳಿವಳಿಕೆ ಮತ್ತು ಮನವಿ ಪತ್ರ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಇದೇ ವೇಳೆ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಮಾರ್ಚ್ 1ರಿಂದ ಬೆಂಗಳೂರಿನಲ್ಲಿ ಕಸ ಎತ್ತದಿರಲು ತೀರ್ಮಾನಿಸಲಾಗಿದೆ. ಅಲ್ಲದೆ, ಹಳೇ ಪಿಂಚಣಿ ನೀತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ಬಜೆಟ್‌ನಲ್ಲಿ 7ನೇ ವೇತನ ಆಯೋಗ ಜಾರಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದರಿಂದ ರಾಜ್ಯ ಸರ್ಕಾರಿ ನೌಕರರಿಗೆ ತೀವ್ರ ನಿರಾಸೆಯಾಗಿದೆ. ಬಜೆಟ್ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದ ಬಜೆಟ್ ಮಂಡನೆಯ ವೇಳೆ ಎಲ್ಲವನ್ನೂ ಹೇಳಲು ಆಗುವುದಿಲ್ಲ.
ಹೀಗಾಗಿ, ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಬಜೆಟ್‌ನಲ್ಲಿ ಹೇಳಿಲ್ಲ. ಆದರೆ, ಈಗಾಗಲೇ 7ನೇ ವೇತನ ಆಯೋಗ ರಚನೆ ಮಾಡಲಾಗಿದ್ದು, ಇದೇ ವರ್ಷದಿಂದ ಅನುಷ್ಠಾನಕ್ಕೆ ಬರುತ್ತದೆ ಎಂದಿದ್ದರು. 7ನೇ ವೇತನ ಆಯೋಗದ ವರದಿ ಶೀಘ್ರವೇ ಬರಲಿದೆ. ವರದಿ ಜಾರಿಗಾಗಿ ಬಜೆಟ್‌ನಲ್ಲಿ 6 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 pm, Thu, 23 February 23