ಬೆಂಗಳೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಪ್ರಮುಖ ಗ್ಯಾರಂಟಿಗಳಲ್ಲಿ(Congress Guarantee) ಒಂದಾದ ಶಕ್ತಿ ಯೋಜನೆಯನ್ನು ಜೂನ್ 11 ರಂದು ಸಿಎಂ ಸಿದ್ದರಾಮಯ್ಯ(Siddaramaiah) ಲೋಕಾರ್ಪಣೆ ಮಾಡುತ್ತಿದ್ದಾರೆ. ಯೋಜನೆಯ ಫಲವನ್ನು ಪಡೆಯಲು ತುದಿಗಾಲಿನಲ್ಲಿ ನಿಂತಿರುವ ಮಹಿಳಾ ಸಮೂಹ ಈ ಸುವರ್ಣ ಕ್ಷಣಗಳಿಗಾಗಿ ಕಾಯುತ್ತಿದ್ದಾರೆ. ಇನ್ನು ಈ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಭಾಗವಹಿಸುವುದಿಲ್ಲ ಎಂದು ನಿನ್ನೆ ತಿಳಿದುಬಂದಿತ್ತು. ಡಿಕೆ ಶಿವಕುಮಾರ್ ಅವರು ಶನಿವಾರ ಮಧ್ಯಪ್ರದೇಶಕ್ಕೆ ತೆರಳಲಿದ್ದು ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ ಸಿಎಂ ಸಿದ್ದರಾಮಯ್ಯನವರ ಕೋರಿಕೆಯ ಮೇರೆಗೆ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ.
ಡಿಕೆ ಶಿವಕುಮಾರ್ ಅವರು ಶನಿವಾರ ಬೆಳಗ್ಗೆ 11.30ಕ್ಕೆ ಹೆಚ್ಎಎಲ್ನಿಂದ ವಿಶೇಷ ವಿಮಾನದ ಮಧ್ಯಪ್ರದೇಶದ ಗ್ವಾಲಿಯರ್ಗೆ ತೆರಳ ನಂತರ ಭಗಲಾಮುಖಿ ದೇವಾಲಯದಲ್ಲಿ ವಿಶೇಷ ಪೂಜೆ, ಉಜ್ಜೈನಿ ಮಹಾಕಾಲ ಮಂದಿರದಲ್ಲಿ ಭಸ್ಮ ಆರತಿ ನೆರವೇರಿಸಲಿದ್ದರು. ಹೀಗಾಗಿ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದ್ದ ಶಕ್ತಿ ಯೋಜನೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಆದ್ರೆ ಈಗ ಅವರ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಉಜ್ಜೈನಿ ಪ್ರವಾಸದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ 11.30ಕ್ಕೆ ಉಜ್ಜೈನಿಯಿಂದ ಬೆಂಗಳೂರಿಗೆ ವಾಪಸ್ಸಾಗಿ ಸಿಎಂ ಸಿದ್ದರಾಮಯ್ಯ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಶಕ್ತಿ ಯೋಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣದ ಉದ್ಘಾಟನೆ ಕಾರ್ಯಕ್ರಮಕ್ಕೆ ಹಾಜರಾಗಲು ಉಜ್ಜೈನಿ ಪ್ರವಾಸದಲ್ಲಿ ಬದಲಾವಣೆ ಮಾಡಿಕೊಂಡ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಉದ್ಘಾಟನೆ ಕಾರ್ಯಕ್ರಮಕ್ಕೆ ನೀನೇ ಮುಹೂರ್ತ ಇಟ್ಟಿದ್ದೀಯಾ. ಕಾರ್ಯಕ್ರಮಕ್ಕೆ ನೀನೇ ಇರದಿದ್ದರೆ ಹೇಗಪ್ಪ ಅಂತಾ ಸಿಎಂ ಹೇಳಿದ್ರು. ಹೀಗಾಗಿ ಸಮಯ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ತಿಳಿಸಿದ್ದೇನೆ ಎಂದರು. ಸಿಎಂ ಕೋರಿಕೆ ಮೇರೆಗೆ ತಮ್ಮ ಪ್ರವಾಸದಲ್ಲಿ ಬದಲಾವಣೆ ಮಾಡಿಕೊಂಡು ಶಕ್ತಿ ಯೋಜನೆ ಕಾರ್ಯಕ್ರಮದಲ್ಲಿ ಹಾಜರಾಗುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇನ್ನು ಗ್ವಾಲಿಯರ್ನಲ್ಲಿರುವ ಪೀಠಕ್ಕೆ ನಾನು ಹೋಗುತ್ತಿದ್ದೇನೆ. ಒಂದಷ್ಟು ಫಲಗಳು ಲಭಿಸಿದ ಮೇಲೆ ಬರುವುದಾಗಿ ನಾನು ದೇವರಲ್ಲಿ ಹೇಳಿಕೊಂಡಿದ್ದೆ. ಹೀಗಾಗಿ ಗ್ವಾಲಿಯರ್ಗೆ ತೆರಳುತ್ತಿದ್ದೇನೆ ಎಂದು ಡಿಕೆಶಿ ತಿಳಿಸಿದರು.
ರಾಜ್ಯ ರಾಜಕೀಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:31 pm, Sat, 10 June 23