ಅಧಿಕಾರಿಗಳಿಗೆ ನಾನು ಬಂಟ್ವಾಳ ಶಾಸಕ ಎಂದೇ ಗೊತ್ತಿಲ್ಲ, ರಮಾನಾಥ್ ರೈರನ್ನೇ ಸಚಿವ ಎಂದೇ ಭಾವಿಸಿದ್ದಾರೆ: ರಾಜೇಶ್ ನಾಯಕ್ ಆಕ್ರೋಶ

ವಿಧಾನಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯ ವಿಷಯ ಭಾರಿ ಚರ್ಚೆಗೆ ಕಾರಣವಾಯಿತು. ಚುನಾಯಿತ ಶಾಸಕರನ್ನು ಕಡೆಗಣಿಸಿ ಅಧಿಕಾರಿಗಳು ಪರಾಜಿತ ಅಭ್ಯರ್ಥಿಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಗಳ ಹಣ ಬಿಡುಗಡೆಗೆ ಮಾಜಿ ಶಾಸಕರ ಹೆಸರು ಬಳಸಲಾಗುತ್ತಿದ್ದು, ಇದು ಶಾಸಕರ ಹಕ್ಕುಚ್ಯುತಿ ಎಂದು ಸದನದಲ್ಲಿ ತೀವ್ರ ವಾಗ್ವಾದ ನಡೆಯಿತು. ಈ ಸಮಸ್ಯೆ ವ್ಯಾಪಕವಾಗಿದ್ದು, ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಲಾಯಿತು.

ಅಧಿಕಾರಿಗಳಿಗೆ ನಾನು ಬಂಟ್ವಾಳ ಶಾಸಕ ಎಂದೇ ಗೊತ್ತಿಲ್ಲ, ರಮಾನಾಥ್ ರೈರನ್ನೇ ಸಚಿವ ಎಂದೇ ಭಾವಿಸಿದ್ದಾರೆ: ರಾಜೇಶ್ ನಾಯಕ್ ಆಕ್ರೋಶ
ರಾಜೇಶ್​​ ನಾಯ್ಕ್​​​ ಹಾಗೂ ರಾಮನಾಥ್​​ ರೈ
Image Credit source: Tv9 kannada
Edited By:

Updated on: Mar 24, 2026 | 9:28 PM

ಬೆಂಗಳೂರು, ಮಾ.24: ವಿಧಾನಸಭೆಯ ಅಧಿವೇಶನದಲ್ಲಿ ಇಂದು ಶಿಷ್ಟಾಚಾರ ಉಲ್ಲಂಘನೆಯ ವಿಷಯ ಭಾರಿ ಚರ್ಚೆಗೆ ಕಾರಣವಾಯಿತು. ಚುನಾಯಿತ ಶಾಸಕರನ್ನು ಕಡೆಗಣಿಸಿ, ಪರಾಜಿತ ಅಭ್ಯರ್ಥಿಗಳಿಗೆ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ ಎಂಬ ಆರೋಪ ಸದನದಲ್ಲಿ ಪ್ರತಿಧ್ವನಿಸಿತು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದಾರೆ. “ನಾನು ಬಂಟ್ವಾಳದ ಶಾಸಕ ಎಂಬುದು ಅಧಿಕಾರಿಗಳಿಗೆ ಗೊತ್ತೇ ಇಲ್ಲದಂತಿದೆ. ಮಾಜಿ ಸಚಿವ ರಮಾನಾಥ್ ರೈ ಅವರನ್ನು ಅಧಿಕಾರಿಗಳು ಇನ್ನೂ ಸಚಿವ ಎಂದೇ ಭಾವಿಸಿದ್ದಾರೆ. ಕಾಮಗಾರಿಗಳ ಹಣ ಬಿಡುಗಡೆ ಮಾಡಲು ಮಾಜಿ ಶಾಸಕರ ಹೆಸರನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕಾಮಗಾರಿ ಏಜೆನ್ಸಿಗಳನ್ನು ಗುರುತಿಸುವಂತೆ ಮಾಜಿ ಶಾಸಕರಿಗೇ ಅಧಿಕಾರಿಗಳು ಪತ್ರ ಬರೆಯುತ್ತಿದ್ದಾರೆ,” ಎಂದು ರಾಜೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.

“ಸರ್ಕಾರಿ ಆದೇಶದ ಮಂಜೂರಾತಿ ನೀಡುವಾಗ ಶಿಷ್ಟಾಚಾರದ ಉಲ್ಲಂಘನೆ ಆಗುತ್ತಿಲ್ಲವೇ? ಪರಾಜಿತ ಅಭ್ಯರ್ಥಿಗಳ ಹೆಸರಿನಲ್ಲಿ ಅಧಿಕಾರಿಗಳು ಹಣ ಮಂಜೂರು ಮಾಡುತ್ತಿದ್ದಾರೆ ಎಂದರೆ ಇದರ ಅರ್ಥವೇನು? ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಪರಾಜಿತ ಅಭ್ಯರ್ಥಿಗಳ ಶಿಫಾರಸಿನ ಮೇಲೆ ಪತ್ರ ಬರೆಯುತ್ತಿವೆ. ಹೀಗಾದರೆ ಚುನಾಯಿತ ಶಾಸಕರಿಗೆ ಬೆಲೆ ಎಲ್ಲಿದೆ? ಇದು ಶಾಸಕರ ಹಕ್ಕುಚ್ಯುತಿಯಲ್ಲವೇ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ? ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

“ನನ್ನ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ ಇದೆ. ಪರಾಜಿತ ಅಭ್ಯರ್ಥಿಯ ಪತ್ರದ ಆಧಾರದ ಮೇಲೆ ಹಣ ಬಿಡುಗಡೆಯಾಗುತ್ತಿದೆ. ಶಾಸಕರು ಕೇವಲ ಹೆಸರಿಗಷ್ಟೇ ಇರಬೇಕೇ?” ಎಂದು ಪ್ರಶ್ನಿಸಿದರು.ಈ ವಿಷಯದ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ತೀವ್ರ ವಾಗ್ವಾದ ನಡೆಯಿತು. ಎಲ್ಲ ಕ್ಷೇತ್ರಗಳಲ್ಲೂ ಪರಾಜಿತ ಅಭ್ಯರ್ಥಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂಬುದು ವಿರೋಧ ಪಕ್ಷದ ಶಾಸಕರ ಒಮ್ಮತದ ಆರೋಪವಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us