
ಬೆಂಗಳೂರು, ಜೂ.22: ದೇಶದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಕೇವಲ ಸಂಶೋಧನೆ ಮತ್ತು ಶಿಕ್ಷಣಕ್ಕೆ ಮಾತ್ರವಲ್ಲದೆ, ತನ್ನ ನಿಸರ್ಗ ರಮಣೀಯ ಕ್ಯಾಂಪಸ್‌ಗೂ ಹೆಸರುವಾಸಿಯಾಗಿದೆ. ಐಐಎಸ್‌ಸಿ ವಿದ್ಯಾರ್ಥಿಯೊಬ್ಬರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕ್ಯಾಂಪಸ್‌ನ ಹಸಿರು ಹೊದಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ವ್ಯವಸ್ಥಿತವಾಗಿ ನಿರ್ಮಿಸಲಾದ ಈ ‘ನಗರ ಅರಣ್ಯ’ (Urban Forest) ನೋಡಿ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.
ಐಐಎಸ್‌ಸಿ ವಿದ್ಯಾರ್ಥಿ ದಿವ್ಯಾಂಶ್ ತಿವಾರಿ ಕ್ಯಾಂಪಸ್‌ನ ಅತ್ಯಂತ ಹೊಸ ಮತ್ತು ಸುಂದರ ಕಟ್ಟಡಗಳಲ್ಲಿ ಒಂದಾದ ಐಡಿಆರ್ (IDR Building) ಬಿಲ್ಡಿಂಗ್‌ನ 7ನೇ ಮಹಡಿಯಿಂದ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಆ ವಿಡಿಯೋದಲ್ಲಿ ಈ ಬಗ್ಗೆ ವಿವರಿಸಿದ್ದಾರೆ. “ನೀವು ಇಲ್ಲಿಂದ ನೋಡಿದರೆ ಇದೊಂದು ದಟ್ಟ ಅಡವಿ ಎಂದು ಭಾವಿಸಬಹುದು. ಆದರೆ ಇದು ಕಾಡಲ್ಲ, ಇದರ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಕಾಣಿಸುತ್ತದೆ. ಇದನ್ನು ಐಐಎಸ್‌ಸಿ ಆಡಳಿತ ಮಂಡಳಿಯು ಅತ್ಯಂತ ಜಾಗರೂಕತೆಯಿಂದ ಮತ್ತು ಯೋಜನಾಬದ್ಧವಾಗಿ ಬೆಳೆಸಿರುವ ‘ಅರ್ಬನ್ ಫಾರೆಸ್ಟ್’” ಎಂದು ಪರಿಚಯಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ ಪೋಸ್ಟ್:
“ಇಲ್ಲಿರುವ ಪ್ರತಿಯೊಂದು ಗಿಡ ಮರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಿತ್ತಳೆ, ಗುಲಾಬಿ, ಹಸಿರು ಮತ್ತು ನೇರಳೆ ಸೇರಿದಂತೆ ವಿವಿಧ ಬಣ್ಣಗಳ ಛಾಯೆಗಳು ನಮಗೆ ಕಾಣಿಸುತ್ತವೆ. ಇವೆಲ್ಲವನ್ನೂ ಯೋಜನಾಬದ್ಧವಾಗಿ ನೆಡಲಾಗಿದೆ. ಇದರ ಮಧ್ಯೆ ಐಐಎಸ್‌ಸಿಯ ಪಾರಂಪರಿಕ ರಾಜಮನೆತನದ ಶೈಲಿಯ ಮುಖ್ಯ ಕಟ್ಟಡವೂ ಗೋಚರಿಸುತ್ತದೆ. ಲ್ಯಾಬ್‌ನಲ್ಲಿ ದಿನವಿಡೀ ಕೆಲಸ ಮಾಡಿ ದಣಿದು ಬರುವ ನಮಗೆ, ಸಂಜೆ ವೇಳೆ ಈ ಸುಂದರ ಹಸಿರಿನ ಮೇಲಾವರಣವನ್ನು (Canopy) ವೀಕ್ಷಿಸುವುದೇ ಒಂದು ಪರಮಾನಂದ” ಎಂದು ದಿವ್ಯಾಂಶ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಎಳಿಯುವ ಮುನ್ನ ಎಚ್ಚರ: ಚಿಕ್ಕಜಾಲದಲ್ಲಿ ಧೂಮಪಾನಿಗಳ ಬೆವರಿಳಿಸಿದ ರಾಣಿ ಚೆನ್ನಮ್ಮ ಪಡೆ
‘ಪ್ರತಿಷ್ಠಿತ ಐಐಎಸ್‌ಸಿ ಆಡಳಿತ ಮಂಡಳಿಯ ದೂರದೃಷ್ಟಿಯಿಂದಾಗಿ ಇಂದು ಭಾರತದಲ್ಲೇ ಅತ್ಯುತ್ತಮ ಹಾಗೂ ಹಸಿರುಮಯ ಕ್ಯಾಂಪಸ್ ನಮ್ಮದಾಗಿದೆ’ ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೋಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. “ಇದು ಕಾಲೇಜು ಕ್ಯಾಂಪಸ್ ತರಹ ಕಾಣಿಸುತ್ತಿಲ್ಲ, ಯಾವುದೋ ಪ್ರಶಾಂತವಾದ ಅರಣ್ಯ ರೆಸಾರ್ಟ್‌ನಂತಿದೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ಪ್ರತಿದಿನ ಇಂತಹ ಸುಂದರ ಪರಿಸರವನ್ನು ನೋಡುತ್ತಾ ಓದುವ ಭಾಗ್ಯ ಸಿಗುವುದನ್ನು ಕಲ್ಪಿಸಿಕೊಳ್ಳಿ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. “ವ್ಯವಸ್ಥಿತ ನಗರ ಮತ್ತು ಕ್ಯಾಂಪಸ್ ಯೋಜನೆ ಎಂದರೆ ಹೀಗಿರಬೇಕು” ಎಂದು ಇಂಜಿನಿಯರಿಂಗ್ ವಿನ್ಯಾಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ