ಬೆಂಗಳೂರು, ಜುಲೈ 28: ಐಎಂಎ (IMA) ಬಹುಕೋಟಿ ಹಗರಣ ಸಂಬಂಧ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿರುದ್ಧ ದಾಖಲಾಗಿದ್ದ ಸಿಬಿಐ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಗೊಳಿಸಿದೆ. ಈಗಾಗಲೇ ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತಗೊಳಿಸಿದ್ದ ಹಿನ್ನೆಲೆ ಸುಪ್ರೀಂಕೋರ್ಟ್ (Supreme Court) ತೀರ್ಪು ಆಧರಿಸಿ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರು ಐಎಂಎ ವಂಚನೆ ಪ್ರಕರಣದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಅಕ್ರಮಗಳನ್ನು ಮುಚ್ಚಿಡಲು 2017 ರ ಜನವರಿ 1 ರಿಂದ 2018 ರ ಅಕ್ಟೋಬರ್ 16ರ ನಡುವೆ ವಿವಿಧ ಹಂತಗಳಲ್ಲಿ ಐಎಂಎ ಕಂಪನಿಯ ನಿರ್ದೇಶಕ ನಿಜಾಮುದ್ದೀನ್ ಮತ್ತು ಇತರರಿಂದ ಲಂಚ ಪಡೆದಿದ್ದಲ್ಲದೆ, ತಮ್ಮ ಮನೆಯ ಒಳಾಂಗಣ ವಿನ್ಯಾಸ ಸಾಮಗ್ರಿಗಳನ್ನು ಐಎಂಎ ಮೂಲಕ ಪಡೆದಿದ್ದರು. ಆ ಮೂಲಕ ಐಎಂಎ ಅಕ್ರಮ ಮುಂದುವರೆಯಲು ಅಜಯ್ ಹಿಲೋರಿ ನೆರವಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಬೆಂಗಳೂರು ಮೂಲದ ಐಎಂಎ ಮತ್ತು ಅದರ ಗುಂಪು ಸಂಸ್ಥೆಗಳು ಇಸ್ಲಾಂ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಜನರಿಗೆ ಹೆಚ್ಚಿನ ಆದಾಯದ ಆಸೆ ಹುಟ್ಟಿಸಿ ಸಾವಿರಾರು ಜನರಿಂದ ಹೂಡಿಕೆ ಮಾಡಿಸಿಕೊಂಡು 4000 ಕೋಟಿ ರೂಪಾಯಿ ವಂಚಿಸಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ನ ರೋಷನ್ ಬೇಗ್, ಜಮೀರ್ ಅಹ್ಮದ್ ಖಾನ್ ಸಿಲುಕಿದ್ದರು. ಹಿರಿಯ ಐಪಿಎಸ್ ಅಧಿಕಾರಿಗಳೂ ವಿಚಾರಣೆಯನ್ನು ಎದುರಿಸಿದ್ದರು.
ಇದನ್ನೂ ಓದಿ: Siddaramaiah: ಚುನಾವಣಾ ತಕರಾರು ಅರ್ಜಿ; ಸಿದ್ದರಾಮಯ್ಯಗೆ ಹೈಕೋರ್ಟ್ ನೋಟಿಸ್
ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್ ಸೇರಿದಂತೆ 7 ಆರೋಪಿಗಳ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಹಿರಿಯ ಐಎಎಸ್ ಆಫೀಸರ್ ವಿಜಯ್ ಶಂಕರ್ ಕಿಕ್ಬ್ಯಾಕ್ ಆರೋಪದಡಿ ಜೈಲು ಸೇರಿದ್ದರು. ವಿಚಾರಣೆ ಹಂತದಲ್ಲಿರುವಾಗಲೇ ವಿಜಯ್ ಶಂಕರ್ ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆದರೆ ಸಿಬಿಐ ಚಾರ್ಜ್‌ಶೀಟ್ ರದ್ದಾಗಿತ್ತು. ರೋಷನ್ ಬೇಗ್ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಅವರ ಆಸ್ತಿ ಜಪ್ತಿಯೂ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ