
ಬೆಂಗಳೂರು, ಜೂ,2: ದಶಕಗಳ ಕಾಲ ಬದುಕಿದ ಮನೆಯನ್ನು ಬಿಟ್ಟು ಹೊಸ ನಗರಕ್ಕೆ, ಹೊಸ ವಾತಾವರಣಕ್ಕೆ ಸ್ಥಳಾಂತರಗೊಳ್ಳುವುದು ಯಾರಿಗಾದರೂ ಭಾವುಕ ಕ್ಷಣವೇ ಸರಿ. ಇಂತಹದ್ದೇ ಒಂದು ಸನ್ನಿವೇಶವನ್ನು ಎದುರಿಸಿದ ಕರಿಷ್ಮಾ ಕೌಲ್ (Karishma Koul) ಎಂಬ ಮಹಿಳೆ, ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ತಮ್ಮ ಅನುಭವ ಮತ್ತು ಹೊಸ ಬಾಡಿಗೆ ಮನೆಯ ಝಲಕ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಗಮನ ಸೆಳೆದಿದೆ. ಕರಿಷ್ಮಾ ಕೌಲ್ ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ಪ್ರೀತಿಯಿಂದ ನೆಟ್ಟಿಗರನ್ನು ಸ್ವಾಗತಿಸಿದ್ದಾರೆ. “ಹಾಯ್, ಬೆಂಗಳೂರಿನಲ್ಲಿರುವ ನಮ್ಮ ಬಾಡಿಗೆ ಮನೆಗೆ ನಿಮಗೆ ಸ್ವಾಗತ. ಗುರಗಾಂವ್‌ನಲ್ಲಿ ಬರೋಬ್ಬರಿ 13 ವರ್ಷಗಳ ಕಾಲ ವಾಸವಿದ್ದ ನಂತರ, ನಾವು ನಮ್ಮ ಮೊದಲ ಸ್ವಂತ ಮನೆಯನ್ನು ತೊರೆದು ಬೆಂಗಳೂರಿಗೆ ಬರಲು ನಿರ್ಧರಿಸಿದೆವು” ಎಂದು ಹೇಳಿದ್ದಾರೆ.
ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಬಂದಿದ್ದಕ್ಕಿಂತ, ದೊಡ್ಡ ಜಾಗದಿಂದ ಸಣ್ಣ ಜಾಗಕ್ಕೆ ಹೊಂದಿಕೊಳ್ಳುವುದೇ ತಮಗೆ ಎದುರಾದ ದೊಡ್ಡ ಸವಾಲು ಎಂದು ಅವರು ಬಿಚ್ಚಿಟ್ಟಿದ್ದಾರೆ. “ಸಮಸ್ಯೆ ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಬಂದಿದ್ದಲ್ಲ, ಬದಲಿಗೆ ಪ್ರತಿ ಮಲಗುವ ಕೋಣೆಯಲ್ಲೂ ವಾರ್ಡ್‌ರೋಬ್‌ಗಳಿದ್ದ ನಮ್ಮ 4 BHK ಮನೆಯಲ್ಲಿದ್ದ ವಸ್ತುಗಳನ್ನು, ಕೇವಲ ಎರಡು ಬೆಡ್‌ರೂಮ್‌ಗಳಲ್ಲಿ ಮಾತ್ರ ವಾರ್ಡ್‌ರೋಬ್‌ಗಳಿರುವ ಈ 3 BHK ಮನೆಗೆ ಹೊಂದಿಸುವುದು ನಮಗೆ ದೊಡ್ಡ ತಲೆನೋವಾಗಿತ್ತು” ಎಂದಿದ್ದಾರೆ.
ಜಾಗದ ಅಭಾವದಿಂದಾಗಿ ಬೆಂಗಳೂರಿಗೆ ಬರುವ ಮುನ್ನ ತಮ್ಮ ಅನೇಕ ವಸ್ತುಗಳನ್ನು ಅಲ್ಲಿ ಬಿಟ್ಟ ಬರಬೇಕಾಗಿತ್ತು ಎಂದು ಕರಿಷ್ಮಾ ಹೇಳಿದ್ದಾರೆ. “ಹೀಗಾಗಿಯೇ ನಮ್ಮಲ್ಲಿದ್ದ ಹೆಚ್ಚಿನ ವಸ್ತುಗಳನ್ನು ಗುರಗಾಂವ್‌ನಲ್ಲಿದ್ದ ನಮ್ಮ ಮನೆಗೆಲಸದವರಿಗೆ ಮತ್ತು ಸೆಕ್ಯೂರಿಟಿ ವಾಚ್‌ಮ್ಯಾನ್‌ಗೆ ನೀಡಿ ಬಂದೆವು” ಎಂದು ಅವರು ತಿಳಿಸಿದ್ದಾರೆ. ಸ್ಥಳ ಬದಲಾವಣೆಯಾಗಿದ್ದರೂ, ಈ ಹೊಸ ಬಾಡಿಗೆ ಮನೆಯನ್ನು ತಮ್ಮದೇ ಸ್ವಂತ ಮನೆಯಂತೆ ಆತ್ಮೀಯವಾಗಿ ಅಲಂಕರಿಸಲು ಕರಿಷ್ಮಾ ನಿರ್ಧರಿಸಿದ್ದಾರೆ. “ಮನೆ ಸ್ವಂತದ್ದಾಗಿರಲಿ ಅಥವಾ ಬಾಡಿಗೆಯದ್ದಾಗಿರಲಿ, ಅದು ಮನಸ್ಸಿಗೆ ಶಾಂತಿ ನೀಡಬೇಕು ಮತ್ತು ಅದು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕು ಎಂದು ನಾನು ನಂಬುತ್ತೇನೆ. ಸದ್ಯಕ್ಕೆ ನಮ್ಮ ಡ್ರಾಯಿಂಗ್ ರೂಮ್ (ವರಾಂಡ) ಮಾತ್ರ ಸಿದ್ಧವಾಗಿದೆ, ಉಳಿದ ಕೋಣೆಗಳಲ್ಲಿ ಇನ್ನೂ ಬಾಕ್ಸ್‌ಗಳು ಹಾಗೇ ಇವೆ. ಆದರೂ ಈ ಮನೆ ಇರುವ ರೀತಿ ನನಗೆ ತುಂಬಾ ಸಂತೋಷ ತಂದಿದೆ” ಎಂದು ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಹೈಡ್ರಾಮಾ: ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸತ್ಯ!
ತಮ್ಮ ಪೋಸ್ಟ್ನಲ್ಲಿ ಬೆಂಗಳೂರಿನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿರುವ ಕರಿಷ್ಮಾ, “ನಮ್ಮ ಬೆಂಗಳೂರು, ನಮ್ಮ ಜೀವನದ ಮುಂದಿನ ತಾಣ. ಭವಿಷ್ಯದಲ್ಲಿ ಏನೆಲ್ಲಾ ಕಾದಿದೆ ಎಂದು ನೋಡಲು, ಇಲ್ಲಿನ ಹೊಸ ಕೆಫೆಗಳಿಗೆ ಭೇಟಿ ನೀಡಲು, ಅದ್ಭುತ ಹವಾಮಾನವನ್ನು ಆನಂದಿಸಲು, ಹೊಸ ಜನರನ್ನು ಭೇಟಿಯಾಗಲು ಮತ್ತು ಹೊಸ ನೆನಪುಗಳನ್ನು ಸೃಷ್ಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Tue, 2 June 26