ಗೃಹ ಸಚಿವ ಪರಮೇಶ್ವರ್‌ಗೆ ‘500 ರೂ. ಬೆಟ್ಟಿಂಗ್’ ಸಂಕಷ್ಟ: ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ!

ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಕಬಡ್ಡಿ ಪಂದ್ಯಾವಳಿಯಲ್ಲಿ ₹500 ಬೆಟ್ಟಿಂಗ್ ಕಟ್ಟಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ನ್ಯಾಯಾಲಯ ಆದೇಶಿಸಿದೆ. ಸಾರ್ವಜನಿಕವಾಗಿ ಬೆಟ್ಟಿಂಗ್ ಕಾನೂನುಬಾಹಿರವಾಗಿದ್ದರೂ, ಸಚಿವರು ಸ್ವತಃ ಇದನ್ನು ಬಹಿರಂಗಪಡಿಸಿದ್ದರು. ಇದೀಗ ತುಮಕೂರಿನ ಪೊಲೀಸರಿಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಲಾಗಿದ್ದು, ರಾಜ್ಯದ ಕಾನೂನು ಪಾಲಕರಿಗೇ ಇದು ದೊಡ್ಡ ಮುಜುಗರ ತಂದಿದೆ.

ಗೃಹ ಸಚಿವ ಪರಮೇಶ್ವರ್‌ಗೆ 500 ರೂ. ಬೆಟ್ಟಿಂಗ್ ಸಂಕಷ್ಟ: ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ!
ಗೃಹ ಸಚಿವ ಪರಮೇಶ್ವರ್
Edited By:

Updated on: Apr 21, 2026 | 7:08 PM

ಬೆಂಗಳೂರು, ಏ.21: ಗೃಹ ಇಲಾಖೆ ಎಂದರೆ ಅದೊಂದು ಶಿಸ್ತಿನ ಇಲಾಖೆ. ಬೆಟ್ಟಿಂಗ್​​​ಗಳನ್ನು ತಡೆಯಬೇಕಿದ್ದ ಇಲಾಖೆಯ ಸಚಿವರೇ ಬೆಟ್ಟಿಂಗ್ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ನಂಬಲೇಬೇಕು. ಕಬಡ್ಡಿ ಪಂದ್ಯಾವಳಿಯೊಂದರಲ್ಲಿ ಕೇವಲ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾಗಿ ಹೇಳಿಕೆ ನೀಡಿದ್ದ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ಇದೀಗ ಎಫ್‌ಐಆರ್ (FIR) ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ತಾನು ನೀಡಿದ ಹೇಳಿಕೆಯೇ ಈಗ ಅವರಿಗೆ ಸುತ್ತಿಕೊಂಡಿದೆ. ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬಾಜಿ ಕಟ್ಟಿದ್ದರು. ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು 36-26 ಅಂಕಗಳಿಂದ ವಿಜಯಪುರ ತಂಡವನ್ನು ಸೋಲಿಸಿತು. ಇದರಿಂದಾಗಿ ಬಾಜಿ ಹಣವನ್ನು ಕಳೆದುಕೊಂಡ ಸಚಿವ ಪರಮೇಶ್ವರ್, ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಈ ವಿಷಯವನ್ನು ಸ್ವತಃ ಬಹಿರಂಗಪಡಿಸಿದ್ದರು. ಇದೀಗ ಇದುವೇ ಅವರಿಗೆ ಸಮಸ್ಯೆಯಾಗಿದೆ.

ಏನಿದು ಪ್ರಕರಣ?

ಕೆಲವು ದಿನಗಳ ಹಿಂದೆ ನಡೆದ ಕಬಡ್ಡಿ ಟೂರ್ನಿಯಲ್ಲಿ ಗೃಹ ಸಚಿವರು ಕುತೂಹಲಕ್ಕಾಗಿ ಅಥವಾ ತಮಾಷೆಗಾಗಿ “ಯಾರು ಗೆಲ್ಲುತ್ತಾರೆ ಎಂದು 500 ರೂಪಾಯಿ ಬೆಟ್ಟಿಂಗ್ ಕಟ್ಟೋಣ” ಎಂದು ಹೇಳಿಕೆ ನೀಡಿದ್ದರು. ಆದರೆ, ಸಾರ್ವಜನಿಕವಾಗಿ ಬೆಟ್ಟಿಂಗ್ ಕಟ್ಟುವುದು ಅಥವಾ ಅದನ್ನು ಪ್ರೋತ್ಸಾಹಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಹೆಚ್.ಆರ್. ನಾಗಭೂಷಣ್ ಎಂಬುವವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ (ACJM) ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ಶಿವಕುಮಾರ್ ಅವರು ಕೆಲವೊಂದು ಸೂಚನೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಬೆಟ್ಟಿಂಗ್ ಆಡಿ ಸೋತ ಗೃಹ ಸಚಿವ: ವ್ಯಾಪಕ ಟೀಕೆಗೆ ಗುರಿಯಾದ ಪರಮೇಶ್ವರ್!

ಗೃಹ ಸಚಿವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು.ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ತುಮಕೂರಿನ ಕೊಡಿಗೇಹಳ್ಳಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂಬ ಅಂಶದ ಮೇಲೆ ದೂರು ದಾಖಲಾಗಿದೆ. ಬೆಟ್ಟಿಂಗ್ ಹಣ ಚಿಕ್ಕದಾಗಿದ್ದರೂ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರೇ ಇಂತಹ ಹೇಳಿಕೆ ನೀಡಿರುವುದು ವಿರೋಧ ಪಕ್ಷಗಳಿಗೂ ಆಹಾರವಾಗಿದೆ. ಈಗ ಪೊಲೀಸರು ತಮ್ಮದೇ ಇಲಾಖೆಯ ಮುಖ್ಯಸ್ಥರ ವಿರುದ್ಧ ತನಿಖೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us