ಬೆಂಗಳೂರು ನ.22: ವಿಧಾನಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಎರಡನೇ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ನವೆಂಬರ್ 25ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬರಲಿದ್ದು, ಹೆಚ್ಎಎಲ್ (HAL) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರು ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ. ನ.30ರಂದು ತೆಲಂಗಾಣದ 119 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ವಿಧಾನಸಭೆ ಚುನಾವಣೆಯಾದ ಬಳಿಕ ಅಗಸ್ಟ್ 26 ರಂದು ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದರು. ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದರು.
ಈ ವೇಳೆ ಚಂದ್ರಯಾನ-3 ಯೋಜನೆ, ಪ್ರಜ್ಞಾನ್ ರೋವರ್ ಕಾರ್ಯನಿರ್ವಹಣೆ, ಅನ್ವೇಷಣೆ ಬಗ್ಗೆ ಇಸ್ರೋ ವಿಜ್ಞಾನಿಗಳು ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದರು. ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅನ್ವೇಷಣೆ ಬಗ್ಗೆ ವಿವರಿಸಿದ್ದರು. ಐತಿಹಾಸಿಕ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದು ಇಸ್ರೋ ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ವಿಜ್ಞಾನಿಗಳ ಜೊತೆ 45 ನಿಮಿಷಗಳ ಕಾಲ ಸಂವಾದ ನಡೆಸಿದ್ದರು. ಈ ವೇಳೆ ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಮಕರಣ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Wed, 22 November 23