ಮಾ.9ರಂದು ರೈತ ಸೌರ ಶಕ್ತಿ ಮೇಳ: ಹೆಚ್ಚುವರಿ ವಿದ್ಯುತ್ ಬೇಡಿಕೆ ಪೂರೈಸಲು ಇಂಧನ ಇಲಾಖೆ ವಿನೂತನ ಯೋಜನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 06, 2024 | 8:32 PM

ರೈತರ ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರ ಶಕ್ತಿ ಬಳಕೆ ಮೂಲಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೈಗಾರಿಕೀಕರಣ ಹಿನ್ನಲೆ ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿರೋ‌ ಹಿನ್ನಲೆ ಇಂಧನ ಇಲಾಖೆ ಹೊಸ ಪ್ಲ್ಯಾನ್ ಮಾಡಿದೆ. ಅಷ್ಟಕ್ಕೂ ಇಂಧನ ಇಲಾಖೆ ಮಾಡಿರೋ ಪ್ಲ್ಯಾನ್ ಏನು ಅಂತೀರಾ ? ಈ ಸ್ಟೋರಿ ಓದಿ.

ಮಾ.9ರಂದು ರೈತ ಸೌರ ಶಕ್ತಿ ಮೇಳ: ಹೆಚ್ಚುವರಿ ವಿದ್ಯುತ್ ಬೇಡಿಕೆ ಪೂರೈಸಲು ಇಂಧನ ಇಲಾಖೆ ವಿನೂತನ ಯೋಜನೆ
ಇಂಧನ ಸಚಿವ ಕೆ,ಜೆ ಜಾರ್ಜ್​
Follow us on

ಬೆಂಗಳೂರು, (ಮಾರ್ಚ್ 06): ರಾಜ್ಯದಲ್ಲಿ ರೈತರ ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ ಸೌರ ಶಕ್ತಿ ಬಳಕೆ ಮೂಲಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್‌ಸೆಟ್ ಬಳಕೆಯೇ ಪರಿಹಾರವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕುಸುಮ ಬಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಿದೆ. ಇದೇ ಮಾರ್ಚ್ 9 ರಂದು ಬೆಂಗಳೂರಿನ ಜಿಕೆವಿಕೆಯಲ್ಲಿ ರೈತ ಸೌರ ಶಕ್ತಿ ಮೇಳ(Raitha Solar Shakti Mela) ಆಯೋಜನೆ ಮಾಡಲಾಗಿದ್ದು, ಸಿಎಂ ಸಿದ್ಧರಾಮಯ್ಯ ಮೇಳವನ್ನು ಉದ್ಘಾಟನೆ ಮಾಡಲಿದ್ದಾರೆ.

ಇನ್ನು ನವೀನ ಮಾದರಿಯ ಸೌರ ಪಂಪ್‌ಸೆಟ್‌ಗಳ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಗೊಂದಲ ಪರಿಹರಿಸಿಕೊಳ್ಳಲು ಈ ಮೇಳ ಅತ್ಯುತ್ತಮ ವೇದಿಕೆಯಾಗಿದೆ. ಸೌರ ಪಂಪ್‌ಸೆಟ್ ಸಂಪೂರ್ಣ ಮಾಹಿತಿ ಪಡೆದ ರೈತರು, ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಬಹುದು ಮತ್ತು ರೈತರು ಸೌರ ಪಂಪ್‌ಸೆಟ್ ಅಳವಡಿಕೆ ಉತ್ತೇಜಿಸಲು ಈವರೆಗೆ ನೀಡಲಾಗುತ್ತಿದ್ದ ಶೇ 30 ರಷ್ಟು ಸಹಾಯಧನವನ್ನ ಶೇ 50ಕ್ಕೆ ಹೆಚ್ಚಳ ಮಾಡಲಾಗಿದೆ. ಕುಸುಮ್ ಬಿ ಯೋಜನೆಯಡಿ ಪಂಪ್, ಮೀಟರ್, ಪೈಪ್​ಗಳನ್ನ ಸರ್ಕಾರವೇ ಒದಗಿಸಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.

ಇದನ್ನೂ ಓದಿ:ಸೌರ ಮೇಲ್ಛಾವಣಿಗಳನ್ನು ಉತ್ತೇಜಿಸಲು ‘ಪಿಎಂ ಸೂರ್ಯ ಘರ್’ ಯೋಜನೆ ಘೋಷಿಸಿದ ಮೋದಿ

ಮೇಳದಲ್ಲಿ ಏನಿರುತ್ತೆ?

  • ರಾಜ್ಯದ ನಾನಾ ಭಾಗಗಳಿಂದ ಬರುವ ರೈತರಿಗೆ ಸೌರ ಪಂಪ್‌ಸೆಟ್‌ಗಳ ಬಗ್ಗೆ ಮಾಹಿತಿ ನೀಡಲು ಮೇಳದಲ್ಲಿ ವ್ಯವಸ್ಥೆ, ವಿವಿಧ ಸೌರ ವಿದ್ಯುತ್ ಉತ್ಪನ್ನಗಳ ಮಳಿಗೆಗಳು ಇರಲಿವೆ.
  • ಸೌರ ಪಂಪ್‌ಸೆಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ರೈತರು ನೇರವಾಗಿ ನೋಡುವ ಅವಕಾಶ ಸಿಗಲಿದೆ.
  • ಸೋಲಾ‌ರ್ ಪಂಪ್‌ಸೆಟ್ ಅಳವಡಿಕೊಳ್ಳುವ ರೈತರಿಗಾಗಿಯೇ ಆನ್‌ಲೈನ್ ಪೋರ್ಟಲ್ ವಿನ್ಯಾಸ
  • ಮೇಳದಲ್ಲಿ ‘ಸೌರ ಮಿತ್ರ’ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ಆ್ಯಪ್ ಮೂಲಕವೂ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
  • ರೈತರಿಗಾಗಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
  • ಸೌರ ಪಂಪ್ ಸೆಟ್‌ಗಳ ಉತ್ಪಾದಕರು, ಮಾರಾಟಗಾರರು, ಬ್ಯಾಂಕ್ ಅಧಿಕಾರಿಗಳು, ಕೃಷಿ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ಸಂವಾದದಲ್ಲಿ ಪಾಲ್ಗೊಂಡು ರೈತರಿಗೆ ಮಾಹಿತಿ ಒದಗಿಸಲಿದ್ದಾರೆ.

ಗ್ಯಾಸ್ ಇನ್ಸುಲೇಟೆಡ್ ಸಬ್‌ ಸ್ಟೇಷನ್‌ಗಳ ಪ್ರಯೋಜನಗಳು

* 70% ಕಡಿಮೆ ಮಾಡಿ ಭೂಮಿಯ ಬಳಕೆ

* ಕಡಿಮೆ ನಿರ್ವಹಣಾ ವೆಚ್ಚ

* ನಿರ್ಮಾಣದ ಸಮಯ ಕಡಿತ

* ಹೆಚ್ಚಿನ ವಿಶ್ವಾಸಾರ್ಹತೆ,

ಸರ್ಕಾರಿ ಖಾಸಗಿ ಸಹಭಾಗಿತ್ವ ಯೋಜನೆಯ ಪ್ರಮುಖ ಪ್ರಯೋಜನಗಳು

* ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಖಾಸಗಿ ಡೆವಲಪರ್ ಗಳ ಆಯ್ಕೆ

* ಡೆವಲಪರ್ ಗಳಿಂದ GIS ಸಬ್‌ಸ್ಟೇಷನ್‌ಗೆ ಬಂಡವಾಳ ಹೂಡಿಕೆ

* KPTCL ನಿಂದ ಉಪಕೇಂದ್ರದ ನಿರ್ಮಾಣ ಮತ್ತು ನಿರ್ವಹಣೆ

* ಸಬ್‌ಸ್ಟೇಷನ್‌ ಆವರಣದೊಳಗಿನ ಗುತ್ತಿಗೆ/ಬಾಡಿಗೆ ಮೂಲಕ ಭೂಮಿಯಲ್ಲಿ ಡೆವಲಪರ್ ತಮ್ಮ ಹೂಡಿಕೆಯ ಮರುಪಡೆಯಲು ಅವಕಾಶ

* ಡೆವಲಪರ್ ಗಳಿಂದ ಬಂಡವಾಳ, ನಿರ್ಮಾಣ ಮತ್ತು ನಿರ್ವಹಣೆ

* ಡೆವಲಪರ್ ಗಳಿಗೆ ಕೆಪಿಟಿಸಿಎಲ್‌ನಿಂದ ಭೂಮಿ ಗುತ್ತಿಗೆ

* ಗುತ್ತಿಗೆ ಅವಧಿ ನಂತರ KPTCL ಗೆ ಭೂಮಿ ಮತ್ತು ರಿಯಲ್ ಎಸ್ಟೇಟ್ ವರ್ಗಾವಣೆ

ಇನ್ನು ಕೈಗಾರಿಕೀಕರಣ, ಮೆಟ್ರೋಪಾಲೊಟಿನ್ ನಗರವಾಗಿ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವುದರಿಂದ ವಿದ್ಯುತ್ ಬೇಡಿಕೆ ಅತೀ ವೇಗವಾಗಿ ಹೆಚ್ಚಾಗುತ್ತಿದೆ . ಈ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಪಿಪಿಪಿ ಮಾದರಿಯಲ್ಲಿ ಜಿಐಎಸ್ ಸಬ್ ಸ್ಟೇಷನ್ ಸ್ಥಾಪನೆ ಮಾಡಲು ಇಂಧನ ಇಲಾಖೆ ಮುಂದಾಗಿದೆ. ಹೆಚ್ಚುವರಿ ವಿದ್ಯುತ್ ಬೇಡಿಕೆ ಪೂರೈಸಲು ಇಂಧನ ಇಲಾಖೆಯಿಂದ ಸ್ಥಾಪಿತವಾಗಲಿರುವ ಗ್ರೀನ್ ಹೈಡ್ರೋಜನ್ ಘಟಕ, ಪ್ರಸ್ತಾವಿತ ಹೆಚ್ಚಿನ ಸಾಮರ್ಥ್ಯದ ಸೌರ ಮತ್ತು ಪವನ ಘಟಕ, ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತು ಚಾರ್ಜಿಂಗ್ ಮೂಲ ಸೌಕರ್ಯ ಹಾಗೂ ವಿವಿಧ ಕೈಗಾರಿಕೆಗಳಲ್ಲಿ ತ್ವರಿತ ಬೆಳವಣಿಗೆಯ ಮೂಲಗಳನ್ನ ಅವಲಂಬಿಸಿದೆ. ಹೀಗಾಗಿ ಬೃಹತ್ ಬೇಡಿಕೆ ಪೂರೈಸಲು ಕೆಪಿಟಿಸಿಎಲ್ ಮೂಲ ಸೌಕರ್ಯವನ್ನು ಬಲಪಡಿಸುವ ವಿನೂತನ ಯೋಜನೆಯನ್ನು ಹೊಂದಿದೆ.

ಇದನ್ನೂ ಓದಿ: ಸೌರ ಶಕ್ತಿ ಉತ್ಪಾದನೆಯಲ್ಲಿ ಹೊಸ ದಾಖಲೆ ನಿರ್ಮಿಸಿಲಿದೆ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ

ಯೋಜನೆ ಅನುಷ್ಠಾನದಲ್ಲಿ ಕೆಪಿಟಿಸಿಎಲ್ ಎದುರಿಸುತ್ತಿರುವ ಸವಾಲುಗಳು

  1. ಯೋಜನೆಗೆ ಅಗತ್ಯವಿರುವ ಬಂಡವಾಳ
  2. ಬೆಂಗಳೂರು ನಗರದೊಳಗೆ ಭೂಮಿಯ ಲಭ್ಯತೆ
  3. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಕೆಪಿಟಿಸಿಎಲ್ ತನ್ನದೆ ಬಂಡವಾಳ ಬಳಸಿದ್ದಲ್ಲಿ, ಇದರ ಹೊರೆ ವಿದ್ಯುತ್ ಬೆಲೆ ಏರಿಕೆಯ ಮುಖಾಂತರ ಗ್ರಾಹಕರ ಮೇಲೆ ಬೀಳಲಿದೆ.

ಈ ಸವಾಲನ್ನ ಯಶಸ್ವಿಯಾಗಿ ನಿರ್ವಹಿಸಲು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವ ಮೂಲಕ ಕೆಪಿಟಿಸಿಎಲ್ ವಿನೂತನ ರಚನೆಗೆ ಮುಂದಾಗಿದೆ. ಇನ್ನು ನಮ್ಮ ರಾಜ್ಯದಲ್ಲಿ 34 ಲಕ್ಷ ಕೃಷಿ ಪಂಪ್ ಸೆಟ್​ಗಳಿವೆ. ಈ ವರ್ಷ 40ಸಾವಿರ ಪಂಪ್‌ಸೆಟ್ ಗುರಿ ಇಟ್ಟುಕೊಂಡಿದ್ದು, ಪ್ರತಿ ವರ್ಷ ಸೋಲಾರ್ ಪಂಪ್ ಸೆಟ್​ಗಳ ಸಂಖ್ಯೆ ಹೆಚ್ಚಿಸಿ ವಿದ್ಯುತ್ ಹೊರೆ ತಪ್ಪಿಸೋದು ನಮ್ಮ ಗುರಿ ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.

ಒಟ್ಟಿನಲ್ಲಿ ನೀರಾವರಿಯಲ್ಲಿ‌ ರೈತರು ಸಂಪ್ರದಾಯಿಕ ಪದ್ಧತಿ ಹೋಗಲಾಡಿಸಲು ರೈತ ಮೇಳ ಮೂಲಕ ನವೀನ್ ಮಾದರಿಯ ಸೌರ ಪಂಪ್‌ಸೆಟ್‌ಗಳನ್ನ ಪರಿಚಯಿಸಲು ಮುಂದಾದರೆ, ಅತ್ತ ಬೆಂಗಳೂರಿನಲ್ಲಿ ಕೈಗಾರೀಕಿಕರಣದಿಂದಾಗಿ ವಿದ್ಯುತ್ ಬೇಡಿಕೆಗೆ ತಕ್ಕಂತೆ ನಗರದಲ್ಲಿ ಪಿಪಿಪಿ ಮಾದರಿಯಲ್ಲಿ ಜಿಐಎಸ್ ಸಬ್ ಸ್ಟೇಷನ್ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಮುಂದಿನ ಎಷ್ಟರ ಮಟ್ಟಿಗೆ ಅನುಷ್ಠಾನಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ