ಐಪಿಎಲ್ ಸಂಭ್ರಮದ ನಡುವೆ ಕಳ್ಳರ ಕೈಚಳಕ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಫೋನ್ ಕಳವು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB vs SRH ಐಪಿಎಲ್ ಪಂದ್ಯದ ವೇಳೆ 50ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಕಳವಾಗಿ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ. ಸಂಘಟಿತ ಕಳ್ಳರ ಜಾಲವೇ ಈ ಕೃತ್ಯ ಎಸಗಿದೆ. ಸಂತ್ರಸ್ತರು ಪೊಲೀಸರು ಸರಿಯಾದ ಸ್ಪಂದನೆ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಘಟನೆ ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ. ಬೆಂಗಳೂರು ಪೊಲೀಸರ ತನಿಖೆ ಮುಂದುವರಿದಿದೆ.

ಐಪಿಎಲ್ ಸಂಭ್ರಮದ ನಡುವೆ ಕಳ್ಳರ ಕೈಚಳಕ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಫೋನ್ ಕಳವು
ವಿಡಿಯೋ

Updated on: Mar 30, 2026 | 10:08 AM

ಬೆಂಗಳೂರು, ಮಾ,30: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಗಳಿಗೆ ಭಾರಿ ಶಾಕ್ ಎದುರಾಗಿದೆ. ಪಂದ್ಯದ ಸಂಭ್ರಮದಲ್ಲಿದ್ದ ಪ್ರೇಕ್ಷಕರ ಮೊಬೈಲ್ ಫೋನ್‌ಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ಕಳ್ಳರ ತಂಡವೊಂದು ದೊಡ್ಡ ಮಟ್ಟದ ಕಳ್ಳತನ ಎಸಗಿದೆ. ಈ ಬಗ್ಗೆ ಮಹಿಳೆಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಅಂದರೆ ಎಕ್ಸ್​​​ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕ್ರೀಡಾಂಗಣದ P3 ಸ್ಟ್ಯಾಂಡ್ ಒಂದರಲ್ಲೇ ಸುಮಾರು 50 ರಿಂದ 60 ಮೊಬೈಲ್ ಫೋನ್‌ಗಳು ಕಳ್ಳತನವಾಗಿವೆ ಎಂದು ವರದಿಯಾಗಿದೆ. ಸಂತ್ರಸ್ತ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದು, “ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ನನ್ನ ಪತಿ ನೀರು ತರಲು ಹೋದಾಗ ಅವರ ಫೋನ್ ಕಳುವಾಗಿದೆ. ನಮ್ಮಂತೆ ಹತ್ತಾರು ಜನರು ಅದೇ ಸಮಯದಲ್ಲಿ ತಮ್ಮ ಫೋನ್ ಕಳೆದುಕೊಂಡು ಕಂಗಾಲಾಗಿದ್ದರು” ಎಂದು ತಿಳಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಈ ಬಗ್ಗೆ ಕ್ರೀಡಾಂಗಣದಲ್ಲಿದ್ದ ಪೊಲೀಸರಿಗೆ ದೂರು ನೀಡಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ತೆರಳಿದಾಗ ಅಲ್ಲಿ ನೂರಾರು ಜನರು ಇದೇ ರೀತಿಯ ದೂರು ನೀಡಲು ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 10 ರಿಂದ 12 ಅಪ್ರಾಪ್ತ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮಕ್ಕಳು ತಂಡದ ಜರ್ಸಿ ಧರಿಸಿ, ಕಾಂಪ್ಲಿಮೆಂಟರಿ ಟಿಕೆಟ್ ಹಿಡಿದು ಓಡಾಡುತ್ತಿದ್ದರು, ಇದು ದೊಡ್ಡ ಮಟ್ಟದ ಸಂಘಟಿತ ಜಾಲವಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೊದಲ ಗೆಲುವನ್ನು 11 ಮಂದಿಗೆ ಅರ್ಪಿಸಿದ RCB

ಎರಡನೇ ಇನ್ನಿಂಗ್ಸ್ ಆರಂಭವಾದಾಗ ಪ್ರೇಕ್ಷಕರು ಆಹಾರ ಮತ್ತು ಪಾನೀಯಕ್ಕಾಗಿ ಸೀಟು ಬಿಟ್ಟು ಎದ್ದ ಸಂದರ್ಭವನ್ನು ಕಳ್ಳರು ಸರಿಯಾಗಿ ಬಳಸಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ಭದ್ರತೆ ಇರುವ ಸ್ಟೇಡಿಯಂನಲ್ಲಿ ಇಂತಹ ಘಟನೆ ನಡೆದಿರುವುದು ಬೆಂಗಳೂರು ಪೊಲೀಸರ ಮತ್ತು ಕ್ರೀಡಾಂಗಣದ ಭದ್ರತಾ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 10:00 am, Mon, 30 March 26

Follow Us