ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು(Bengaluru) ಹೆಣ್ಮಕ್ಕಳಿಗೆ ರಾತ್ರಿ ಸಂಚಾರಕ್ಕೆ ಸೇಫ್ ಅಲ್ಲ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತಿದೆ. ಈ ರೀತಿಯ ಘಟನೆಗಳು ಆಗಬಾರದೆಂದು ಎಷ್ಟೇ ನೀತಿ-ನಿಯಮಗಳು, ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ನಗರದಲ್ಲಿ ಹೆಣ್ಮಕ್ಕಳಿಗೆ ಎಷ್ಟರ ಮಟ್ಟಿಗೆ ಸೇಫ್ಟಿ ಇದೆ ಎಂಬ ಪ್ರಶ್ನೆಗಳು ಏಳುತ್ತಿವೆ. ತಡ ರಾತ್ರಿ ರ‍್ಯಾಪಿಡೊ ಬುಕ್ ಮಾಡಿ ಹೊರಟಿದ್ದ ಯುವತಿಗೆ ರ‍್ಯಾಪಿಡೊ(Rapido) ಚಾಲಕ ಲೈಂಗಿಕ ಕಿರುಕುಳ ನೀಡಿದ್ದು ಕಿರುಕುಳಕ್ಕೆ ಬೇಸತ್ತು ಯುವತಿ ಬೈಕ್ ನಿಂದ ಜಂಪ್ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕ ಉಪನಗರ ನಾಗೇನಹಳ್ಳಿ ಸಮೀಪದ ಖಾಸಗಿ ಕಾಲೇಜು ಬಳಿ ಘಟನೆ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿರುವ 30 ವರ್ಷದ ಯುವತಿಯೊಬ್ಬಳು ಕಳೆದ ಏಪ್ರಿಲ್ 21ರಂದು ರಾತ್ರಿ ಸುಮಾರು 11.30ರ ಸಮಯದಲ್ಲಿ ಯಲಹಂಕದಿಂದ ಇಂದಿರಾನಗರಕ್ಕೆ ತೆರಳಲು ಆನ್‌ಲೈನ್ ಆ್ಯಪ್ ಮೂಲಕ ರ‍್ಯಾಪಿಡೊ ಬೈಕ್ ಅನ್ನು ಬುಕ್ ಮಾಡಿದ್ದಳು. ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಬಂದ ರ‍್ಯಾಪಿಡೊ ಬೈಕ್ ಚಾಲಕ ಯುವತಿಯನ್ನು ಹತ್ತಿಸಿಕೊಂಡಿದ್ದಾನೆ. ಬಳಿಕ ಓಟಿಪಿ ಪಡೆಯುವ ನೆಪದಲ್ಲಿ ಯುವತಿ ಮೊಬೈಲ್ ಕಸಿದುಕೊಂಡಿದ್ದಾನೆ. ನಂತರ ಯುವತಿಯ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ ಇಂದಿರಾನಗರಕ್ಕೆ ಹೋಗದೆ ರಾಜಾನುಕುಂಟೆ ಕಡೆಗೆ ಬೈಕ್ ತಿರುಗಿಸಿದ್ದಾನೆ. ಲೊಕೇಶನ್ ಚೇಂಜ್ ಆಗ್ತಿದ್ದಂತೆ ಯುವತಿಗೆ ಭಯ ಶುರುವಾಗಿದೆ. ಜೊತೆಗೆ ಲೈಂಗಿಕ ಕಿರುಕುಳ ಸಹಿಸಲಾಗದೇ ಯುವತಿ ಬೈಕ್‌ನಿಂದ ಜಿಗಿದಿದ್ದಾಳೆ.
ಇದನ್ನೂ ಓದಿ:ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಮಿಸ್ಟರ್ ಆಂಧ್ರ, ಆದ್ರೆ ಬೆಂಗಳೂರಿನಲ್ಲಿ ಖತರ್ನಾಕ್ ಸರಗಳ್ಳ
ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆಂಧ್ರ ಪ್ರದೇಶ ಮೂಲದ ದೀಪಕ್ ರಾವ್ ಬಂಧಿತ ಆರೋಪಿ. ಸದ್ಯ ಯಲಹಂಕ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಯುವತಿಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಲೈಂಗಿಕ ಕಿರುಕುಳ, ಅಪಹರಣ, ಹಲ್ಲೆ ಅಥವಾ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದೆಡೆ ಘಟನೆ ಸಂಬಂಧ ಯುವತಿ ರ‍್ಯಾಪಿಡೊ ಸಂಸ್ಥೆಗೂ ದೂರು ನೀಡಿದ್ದು ಇದುವರೆಗೂ ಯಾವುದೇ ಕರೆ ಅಥವಾ ಯುವತಿಯನ್ನು ಸಂಪರ್ಕಿಸುವ ಪ್ರಯತ್ನಗಳಾಗಿಲ್ಲ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:09 am, Wed, 26 April 23