ಬೀದರ್​: ಗ್ರಾಮ ಪಂಚಾಯ್ತಿ ಅಧಿಕಾರಿಗೆ ಲಂಚ ನೀಡಲು ಹಣವಿಲ್ಲದೆ, ಎತ್ತುಗಳನ್ನೇ ನೀಡಲು ಮುಂದಾದ ರೈತ

|

Updated on: Mar 28, 2023 | 3:32 PM

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾದ ಅನುದಾನವನ್ನು ನೀಡಲು ಗ್ರಾಮ ಪಂಚಾಯತ್ ಅಧಿಕಾರಿ ಲಂಚ ಕೇಳಿದ್ದು, ಹಣ ನೀಡಲು ಸಾಧ್ಯವಾಗದೆ ರೈತ ಎತ್ತುಗಳನ್ನೇ ನೀಡಲು ಮುಂದಾಗಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದೂರಿ ಗ್ರಾಮದಲ್ಲಿ ನಡೆದಿದೆ.

ಬೀದರ್​: ಗ್ರಾಮ ಪಂಚಾಯ್ತಿ ಅಧಿಕಾರಿಗೆ ಲಂಚ ನೀಡಲು ಹಣವಿಲ್ಲದೆ, ಎತ್ತುಗಳನ್ನೇ ನೀಡಲು ಮುಂದಾದ ರೈತ
ರೈತ ಪ್ರಶಾಂತ್​ ಬಿರಾದಾರ
Follow us on

ಬೀದರ್​: ಕೆಲ ದಿನಗಳ ಹಿಂದೆ ಹಾವೇರಿಯಲ್ಲಿ (Haveri) ಲಂಚ ಕೇಳಿದ್ದ ಪುರಸಭೆ ಅಧಿಕಾರಿಗೆ ರೈತರೊಬ್ಬರು ಎತ್ತು ಮತ್ತು ಚಕ್ಕಡಿಗಳನ್ನು ನೀಡಲು ಮುಂದಾಗಿದ್ದ ಘಟನೆಗೆ ಹೋಲುವಂತೆ ಮೊತ್ತೊಂದು ಘಟನೆ ಕಲ್ಯಾಣ ಕರ್ನಾಟಕದ ಬೀದರ್​ನಲ್ಲಿ ನಡೆದಿದೆ. ​ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (MNREGA Yojana) ಮಂಜೂರಾದ ಅನುದಾನವನ್ನು ನೀಡಲು ಗ್ರಾಮ ಪಂಚಾಯತ್ (Gram Panchayat) ಅಧಿಕಾರಿ ಲಂಚ ಕೇಳಿದ್ದು, ಹಣ ನೀಡಲು ಸಾಧ್ಯವಾಗದೆ ರೈತ (Farmer) ಎತ್ತುಗಳನ್ನೇ ನೀಡಲು ಮುಂದಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyan) ತಾಲೂಕಿನ ಬಗದೂರಿ ಗ್ರಾಮದಲ್ಲಿ ನಡೆದಿದೆ.

ಬಗದೂರಿ ಗ್ರಾಮದ ನಿವಾಸಿ ರೈತ ಪ್ರಶಾಂತ ಬಿರಾದಾರ ಉದ್ಯೋಗ ಖಾತ್ರಿಯೊಜನೆಯಡಿ ಕಳೆದ ವರ್ಷ ತಮ್ಮ ಜಮೀನಿನಲ್ಲಿರುವ ಹಳ್ಳಕ್ಕೆ ತಡೆಗೊಡೆ ನಿರ್ಮಾಣ ಮಾಡಿಸಿದ್ದರು. ಈ ಕಾಮಗಾರಿಗೆ 1 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಕಾಮಗಾರಿಗೆ ಸಂಬಂಧಿಸಿದಂತೆ ರೈತನಿಗೆ 55 ಸಾವಿರ ರೂ. ಕೂಲಿ ಹಣ ಪಾವತಿ ಮಾಡಲಾಗಿದೆ. ಉಳಿದ 45 ಸಾವಿರ ರೂ. ಮಟಿರಿಯಲ್ ಹಣ ಪಾವತಿಯಾಗಿಲ್ಲ. ಹೀಗಾಗಿ ಮಟಿರಿಯಲ್ ಹಣ ಪಾವತಿಗೆ ಮನವಿ ಮಾಡಿದಾಗ ಯೋಜನೆಯಡಿ ಕೆಲಸ ಮಾಡುವ ಜೆಇ ಅವರು 5 ಸಾವಿರ ರೂ. ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: ಲಂಚ ಕೇಳಿದ ಪುರಸಭೆ ಅಧಿಕಾರಿಗೆ ಎತ್ತು, ಚಕ್ಕಡಿ ನೀಡಿದ ರೈತ

ಆದರೆ ಲಂಚದ ಹಣ ನೀಡಲು ತಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದು ರೈತ ಹೇಳಿದ ಹಿನ್ನೆಲೆ ಬಿಲ್ ಪಾವತಿಗೆ ತಡೆ ಹಿಡಿಯಲಾಗಿದೆ. ಇದರಿಂದ ಬೆಸರಗೊಂಡ ರೈತ ಪ್ರಶಾಂತ ಬಿರಾದಾರ ಅವರು, ತಮ್ಮ 2 ಎತ್ತುಗಳು ಸಹಿತ ನಗರದ ತಾಲೂಕು ಪಂಚಾಯ್ತಗೆ ಆಗಮಿಸಿ ಎತ್ತುಗಳನ್ನೇ ಲಂಚದ ರೂಪದಲ್ಲಿ ಪಡೆದು, ತನಗೆ ಬರಬೇಕಾದ 45 ಸಾವಿರ ರೂ. ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಘಟನೆಯಿಂದ ತಾಲೂಕು ಪಂಚಾಯಿತಿ ಕಚೇರಿಯ ಅಧಿಕಾರಿ ವರ್ಗದವರಿಗೆ ಮುಜುಗರವಾಗಿದೆ. ಸುದ್ದಿ ತಿಳಿದ ತಾಲೂಕು ಪಂಚಾಯಿತಿ ಎಡಿ ಸಂತೋಷ ಚವ್ಹಾಣ್ ಸ್ಥಳಕ್ಕೆ ಬಂದು ರೈತನನ್ನು ಭೇಟಿಮಾಡಿ ವಿಷಯದ ಕುರಿತು ಚರ್ಚಿಸಿ ಬಿಲ್ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತ ತಮ್ಮ ಎತ್ತುಗಳ ಸಹಿತ ಮನೆಗೆ ವಾಪಾಸ್ ಆಗಿದ್ದಾರೆ.

ಗ್ರಾಮ ಪಂಚಾಯತ್‌ಗಳ ಮೂಲಕ ಅನುಷ್ಠಾಗೊಳಿಸಲಾಗುತ್ತಿರುವ ಉದ್ಯೋಗ ಖಾತ್ರಿ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಲಂಚ ನೀಡದೆ ಯಾವುದೇ ಬಿಲ್‌ಗಳು ಪಾವತಿಯಾಗುತ್ತಿಲ್ಲ ಎನ್ನುವ ಆರೋಪಗಳಿಗೆ ಇಂದಿನ ಈ ಘಟನೆ ಪುಷ್ಟಿ ನೀಡಿದಂತಾಗಿದೆ. ಮೇಲಾಧಿಕಾರಿಗಳು ಎಚ್ಚೆತ್ತುಗೊಂಡು ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ