ಬೀದರ್: ಅದು ಸರ್ಕಾರಿ ಆಸ್ಪತ್ರೆ. ಜನ ಅಲ್ಲಿದ್ದವರನ್ನ ದೇವರು ಅಂತಾ ನಂಬಿ ಚಿಕಿತ್ಸೆಗೆ ಹೋಗ್ತಾರೆ. ಆದ್ರೆ ಅವರು ಮಾಡ್ತಿದ್ದ ಕಳ್ಳ ಕೆಲಸ ಎಂತವರನ್ನೂ ಬೆಚ್ಚಿಬೀಳಿಸುತ್ತೆ. ಹೀಗೆ ಮಾಡಬಾರದ್ದನ್ನ ಮಾಡಿದ ಖದೀಮರು ಪೊಲೀಸರ ಅತಿಥಿಗಳಾಗಿದ್ದಾರೆ.
ಚಿಕಿತ್ಸೆಗೆ ಬಂದ ಮಹಿಳೆ ಆಭರಣ ನಾಪತ್ತೆ..!
ಅಂದಹಾಗೆ ಗಡಿ ಜಿಲ್ಲೆ ಬೀದರ್ನ ಬ್ರಿಮ್ಸ್ ಸರ್ಕಾರಿ ಆಸ್ಪತ್ರೆ ಈಗಾಗಲೇ ನಾನಾ ಸಮಸ್ಯೆಗಳಿಂದ ನರಳುತ್ತಿದೆ. ಈ ಮಧ್ಯೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದ್ದು, ಆಸ್ಪತ್ರೆ ಸಿಬ್ಬಂದಿಯ ಕಳ್ಳಾಟವೂ ಬಯಲಾಗಿದೆ. ಚಿಕಿತ್ಸೆಗೆ ಅಂತಾ ಬರುವವರ ವಸ್ತುಗಳ ಮೇಲೆ ಆಸ್ಪತ್ರೆ ಸಿಬ್ಬಂದಿ ಕಣ್ಣು ಬಿದ್ದಿದೆ. ಇದು ಬಯಲಾಗಿದ್ದು, ಸಕ್ಕರೆ ಕಾರ್ಖಾನೆಯಲ್ಲಿ ಗಾಯಗೊಂಡ ಮಹಿಳೆಯೊಬ್ರು ಆಸ್ಪತ್ರೆ ಸೇರಿದಾಗ. ಡಿಸೆಂಬರ್ 26 ರಂದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿರುವ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯಲ್ಲಿ ಪಂಚಶೀಲಾ ಎಂಬ ಮಹಿಳೆ ತಲೆಗೆ ಪೆಟ್ಟು ಮಾಡಿಕೊಂಡಿದ್ದರು.
ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಾಗ, ಸಿಟಿ ಸ್ಕ್ಯಾನ್ಗೆ ಸೂಚಿಸಲಾಗಿತ್ತು. ಈ ವೇಳೆ ಮಹಿಳೆ ತನ್ನ ಮೈಮೇಲಿದ್ದ ಒಡವೆಯನ್ನ ಬಿಚ್ಚಿಟ್ಟಿದ್ದು. ಅದನ್ನ ವಾರ್ಡ್ ಬಾಯ್ಗಳು ಕದ್ದಿದ್ದರಂತೆ. ಮಹಿಳೆ ಪ್ರಶ್ನಿಸಿದಾಗ ಆಭರಣ ಇರಲೇ ಇಲ್ಲ ಅಂತಾ ಸುಳ್ಳು ಹೇಳಿದ್ದಾರೆ. ಪಂಚಶೀಲಾ ಈ ವಿಷಯವನ್ನ ಪತಿಗೆ ತಿಳಿಸಿದಾಗ ಕಿರಾತಕರ ಕೃತ್ಯ ಬಯಲಾಗಿದ್ದು, ಬೀದರ್ ನ್ಯೂಟೌನ್ ಠಾಣೆ ಪೊಲೀಸರು ಆರೋಪಿಗಳಾದ ಸೂರ್ಯಕಾಂತ್ ಹಾಗೂ ರಮೇಶ್ ಮಾಣಿಕ್ನನ್ನ ಕಂಬಿ ಹಿಂದೆ ತಳ್ಳಿದ್ದಾರೆ.
ಈ ರೀತಿ ಪ್ರಕರಣಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ಆಸ್ಪತ್ರೆಯಲ್ಲಿ ನಡೆದಿದ್ದರೂ ಬೆಳಕಿಗೆ ಬಂದಿಲ್ಲ. ಆದರೆ ಈ ಪ್ರಕರಣ ಬೆಳಕಿಗೆ ಬಂದಿದೆ ಅನ್ನೋದು ಸ್ಥಳೀಯರ ಆರೋಪ.
ಅಂದಹಾಗೆ ಬ್ರಿಮ್ಸ್ ಆಸ್ಪತ್ರೆಗೆ ನಮ್ಮ ರಾಜ್ಯದ ಜನ ಮಾತ್ರ ಬರೋದಿಲ್ಲ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರದ ಗಡಿಯಲ್ಲಿ ವಾಸವಿರುವ ಬಡವರಿಗೂ ಈ ಆಸ್ಪತ್ರೆ ಸಂಜೀವಿನಿ. ಆದ್ರೆ, ಆಸ್ಪತ್ರೆ ಸಿಬ್ಬಂದಿ ಅಂತಹವರನ್ನೇ ಟಾರ್ಗೆಟ್ ಮಾಡ್ತಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.