ಬೀದರ್: ಹಕ್ಕಿಗಳ ಆಹಾರಕ್ಕಾಗಿಯೇ ಒಂದು ಪಾಲು ಜಮೀನು ಮೀಸಲು; ಸಾವಯುವ ಕೃಷಿಕನ ಸುಂದರ ಬದುಕು!

| Updated By: ganapathi bhat

Updated on: Jan 24, 2022 | 6:00 PM

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮರಕಲ್ ಗ್ರಾಮದ ನಿವಾಸಿ ಹಣಮಂತಪ್ಪ ಚಿಟ್ಟನಳ್ಳಿ ಸಾವಯವ ಕೃಷಿಕ ತನ್ನ ಒಂದು ಎಕರೆಯಷ್ಟು ಜಮೀನಿನಲ್ಲಿ ವಿವಿಧ ಬಗೆಯ ಧಾನ್ಯಗಳನ್ನ ಬೆಳೆಸಿ ಅವುಗಳನ್ನ ಹಕ್ಕಿಗಳ ಆಹಾರಕ್ಕೆ ಮೀಸಲಿಟ್ಟಿದ್ದಾರೆ.

ಬೀದರ್: ಹಕ್ಕಿಗಳ ಆಹಾರಕ್ಕಾಗಿಯೇ ಒಂದು ಪಾಲು ಜಮೀನು ಮೀಸಲು; ಸಾವಯುವ ಕೃಷಿಕನ ಸುಂದರ ಬದುಕು!
ಹಣಮಂತಪ್ಪ ಚಿಟ್ಟನಳ್ಳಿ
Follow us on

ಬೀದರ್: ಹಕ್ಕಿಗಳನ್ನು ಕಂಡರೆ ಈ ರೈತನಿಗೆ ಎಲ್ಲಿಲ್ಲದ ಪ್ರೀತಿ. ಹಕ್ಕಿಗಳ ಆಹಾರಕ್ಕಾಗಿಯೇ ತನ್ನ ಒಂದು ಎಕರೆಯಷ್ಟು ಜಮೀನು ಮೀಸಲಿಟ್ಟಿದ್ದಾನೆ. ಆಯಾ ಋತುಮಾನಕ್ಕೆ ತಕ್ಕಂತೆ ಬೆಳೆಗಳನ್ನು ಅಲ್ಲಿ ಬೆಳೆಸಿ ಹಕ್ಕಿಗಳಿಗೆ ಬಿಡುತ್ತಾರೆ. ಹಕ್ಕಿಗಳು ಇವರ ಹೊಲದಲ್ಲಿನ ಬೆಳೆಸಿದ ಜೋಳ, ಸಜ್ಜೆ, ನವಣಿ, ರಾಗಿ ಕಾಳುಗಳನ್ನ ತಿಂದು ಖುಷಿಯಿಂದ ಹಾರಾಡುತ್ತವೆ. ಸಾವಯವ ಕೃಷಿಕ, ಪಕ್ಷಿ ದಾಸೋಹಿ, ಹಕ್ಕಿಗಳು ‌ತಿ‌ನ್ನಲೆಂದೆ ತಮ್ಮ ಹೊಲದಲ್ಲಿ ದವಸ ಧಾನ್ಯ ಬೆಳೆಸುವವರು. ನಿವೃತ್ತ ಖಾಸಗಿ ಕಂಪನಿ ಉದ್ಯೋಗಿಯ ಪಕ್ಷಿ ಪ್ರೀತಿ ಬಗ್ಗೆ ತಿಳಿದರೆ ನೀವು ಅಚ್ಚರಿ ಪಡುತ್ತೀರಿ.

ದೇವಸ್ಥಾನ, ಮಠ, ದರ್ಗಾದಲ್ಲಿ ಅನ್ನ ದಾಸೋಹ ಮಾಡಿದ್ದು ನೀವು ನೋಡಿರುತ್ತೀರಿ. ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ರೈತ ಹಕ್ಕಿಗಳ ಆಹಾರಕ್ಕಾಗಿಯೇ ಜೋಳ, ರಾಗಿ, ನವಣೆ, ಸಜ್ಜೆ ಬೆಳೆಸಿ ಹಕ್ಕಿಗಳಿಗೆ ಬಿಡೋದರ ಮೂಲಕ ಪಕ್ಷಿ ದಾಸೋಹಿಯಾಗಿದ್ದಾರೆ. ಹೌದು, ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮರಕಲ್ ಗ್ರಾಮದ ನಿವಾಸಿ ಹಣಮಂತಪ್ಪ ಚಿಟ್ಟನಳ್ಳಿ ಸಾವಯವ ಕೃಷಿಕ ತನ್ನ ಒಂದು ಎಕರೆಯಷ್ಟು ಜಮೀನಿನಲ್ಲಿ ವಿವಿಧ ಬಗೆಯ ಧಾನ್ಯಗಳನ್ನ ಬೆಳೆಸಿ ಅವುಗಳನ್ನ ಹಕ್ಕಿಗಳ ಆಹಾರಕ್ಕೆ ಮೀಸಲಿಟ್ಟಿದ್ದಾರೆ.

ಋತುಮಾನಕ್ಕೆ ತಕ್ಕಂತೆ ಬರುವ ಬೆಳೆಗಳನ್ನ ಹಕ್ಕಿಗಳಿಗಾಗಿಯೇ ಮೀಸಲಿಟ್ಟಿರುವ ಜಮೀನಿನಲ್ಲಿ ಕಾಳು ಕೊಡುವ ಬೆಳೆಯನ್ನ ಬೆಳೆಸುತ್ತಿದ್ದಾರೆ. ಪ್ರತಿವರ್ಷ ಮಿಶ್ರ ಬೆಳೆ ಬೆಳೆಸಿ ಪಕ್ಷಿಗಳು ಆಕರ್ಷಿಸುವಂತೆ ಮಾಡುತ್ತಾರೆ. ಹೊಲದಲ್ಲಿ ಸಜ್ಜೆ, ನವಣಿ, ಜೋಳ, ರಾಗಿ ಹೀಗೆ ಪಕ್ಷೀಗಳಿಗೆ ಇಷ್ಟವಾದ ಕಾಳುಗಳನ್ನ ಬೆಳೆಸುತ್ತಾರೆ. ಇದನ್ನ ತಿನ್ನಲು ಸಾವಿರಾರು ಪಕ್ಷಿಗಳು ಇಲ್ಲಿಗೆ ಬಂದು ತಮಗೆ ಇಷ್ಟವಾದ ಕಾಳುಗಳನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಪಕ್ಷಿಗಳು ನನ್ನ ಹೊಲಕ್ಕೆ ಬಂದು ಕಾಳುಗಳನ್ನ ತಿಂದು ಹೋದರೆ ನನಗೆ ಎಲ್ಲಿಲ್ಲದ ಖಷಿಯಾಗುತ್ತದೆ. ಭಕ್ತರು ತಮ್ಮ ಮನೆ ದೇವರಿಗೆ ಅನ್ನದಾಸೋಹ ಮಾಡಿ ಖುಷಿ ಪಟ್ಟರೆ ನಾನು ಹಕ್ಕಿಗಳಿಗೆ ದಾಸೋಹ ಕೊಟ್ಟು ಖುಷಿ ಪಡುತ್ತೇನೆ ಎನ್ನುತ್ತಾರೆ ರೈತ.

ಸಾವಯುವ ಕೃಷಿಕರ ಜಮೀನಿನಲ್ಲಿ ಹಕ್ಕಿಗಳಿಗೆ ಧಾನ್ಯ, ಹಣ್ಣಿನ ಗಿಡಗಳು

ಖಾಸಗಿ ಸಂಸ್ಥೆಯ ನಿವೃತ್ತ ಉದ್ಯೋಗಿಯಾಗಿರುವ ಹಣಮಂತಪ್ಪ ಚಿಟ್ಟನಳ್ಳಿ ಹತ್ತಾರು ವರ್ಷದಿಂದ ತಮ್ಮ 6 ಎಕರೆಯಷ್ಟು ಜಮೀನಿನಲ್ಲಿ ಸಾವಯವ ಕೃಷಿಯನ್ನೇ ಮಾಡಿಕೊಂಡಿದ್ದಾರೆ. ಸಾವಯವ ಕೃಷಿ ಮಾಡಿಕೊಂಡಿರುವುದರಿಂದ ನನಗೆ ಯಾವುದೆ ನಷ್ಟವಾಗಿಲ್ಲ. ಕೃಷಿಯಲ್ಲಿ ಹೆಚ್ಚಿನ ಲಾಭವನ್ನ ಕೂಡಾ ಮಾಡುತ್ತಿದ್ದೇನೆ. ನಾವು ನಮ್ಮ ಕುಟುಂಬವು ಕೂಡಾ ಕೃಷಿಯಿಂದ ನೆಮ್ಮದಿಯಾಗಿದ್ದೇವೆ. ಹೀಗಾಗಿ ಹಕ್ಕಿಗಳ ಆಹಾರಕ್ಕೆ ನನ್ನ ಒಂದು ಎಕರೆಯಷ್ಟು ಜಾಗೆಯನ್ನ ಮೀಸಲಿಟ್ಟಿದ್ದೇನೆ. ಆ ಒಂದು ಎಕರೆಯಷ್ಟು ಜಾಗೆಯಲ್ಲಿ 150 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನ ನೆಡಲಾಗಿದೆ. ಅದರ ನಡುವೆಯೇ ಹಕ್ಕಿಗಳ ಆಹಾರಕ್ಕೆ ವಿವಿಧ ಧಾನ್ಯಗಳನ್ನ ಬೆಳೆಸಿ ಹಕ್ಕಿಗಳಿಗೆ ಬಿಡುತ್ತಿದ್ದೇನೆ. ಇನ್ನೂ ಇದೆ ಒಂದು ಎಕರೆಯಷ್ಟು ಜಾಗದಲ್ಲಿ 15 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನ ನೆಡಲಾಗಿದ್ದು ಇನ್ನೊಂದು ವರ್ಷದಲ್ಲಿ ಇಲ್ಲಿನ ಗಿಡದಲ್ಲಿ ಹಣ್ಣುಗಳು ಆ ಋತುಮಾನಕ್ಕೆ ತಕ್ಕಂತೆ ಬಿಡುತ್ತವೆ ಎಂದು ವಿವರಿಸುತ್ತಾರೆ.

ಆ ಹಣ್ಣುಗಳು ಕೂಡಾ ಹಕ್ಕಿಯ ಆಹಾರಕ್ಕೆ ಬಿಡುತ್ತೇನೆ. ಆ ಹಣ್ಣುಗಳನ್ನ ನಾವು ಬಳಸೋದಿಲ್ಲ. ಹಕ್ಕಿಗಳಿಗೂ ರೈತರಿಗೆ ಅವಿನಾಭಾವ ಸಂಬಂಧವಿದೆ. ರೈತನಿಗೆ ಹಕ್ಕಿಗಳು ಸಾಕಷ್ಟು ಸಹಾಯವನ್ನ ಮಾಡುತ್ತವೆ. ಅದು ಹೇಗೆ ಎಂದರೆ ಹೊಲದಲ್ಲಿನ ಲಕ್ಷಾಂತರ ಕೀಟಗಳನ್ನ ಹಕ್ಕಿಗಳು ತಿನ್ನುತ್ತವೆ. ಇದರಿಂದ ರೈತರ ಬೆಳೆಗಳು ಕೀಟಗಳಿಂದ ರಕ್ಷಣೆ ಮಾಡುವ ಕೆಲಸವನ್ನ ಹಕ್ಕಿಗಳು ಮಾಡುತ್ತವೆ. ಹೀಗಾಗಿ ಹಕ್ಕಿಗಳಿಗೆ ನಾವು ಆಹಾರ ಕೊಟ್ಟು ಅದರ ಋಣ ತೀರಿಸುತ್ತಿದ್ದೇನೆ ಎಂಬುದು ಪಕ್ಷಿಪ್ರೇಮಿ ರೈತರ ಹೇಳಿಕೆ.

ತಮ್ಮ ಹೊಲದಲ್ಲಿ ಬೆಳೆಸಿದ ಬೆಳೆಗಳನ್ನ ಹಕ್ಕಿಗಳು ತಿನ್ನುತ್ತವೆಂದು ಹಕ್ಕಿಗಳನ್ನ ಓಡಿಸಲು ನಾನಾ ಕಸರತ್ತು ಮಾಡುವ ರೈತರ ಮುಂದೆ ಈ ರೈತ ಭಿನ್ನವಾಗಿ ಕಾಣುತ್ತಿದ್ದಾರೆ. ಕಡಿಮೆ ಜಮೀನು ಹೊಂದಿದ್ದರೂ ಅದರಲ್ಲಿಯೇ ಒಂದು ಎಕರೆಯಷ್ಟು ಜಮೀನನ್ನ ಹಕ್ಕಿಗಳಿಗಾಗಿ ಮೀಸಲಿಡುವ ಮೂಲಕ ಪಕ್ಷಿ ಪ್ರೀತಿ ಮೆರೆಯುತ್ತಿದ್ದಾರೆ.

ವಿಶೇಷ ವರದಿ: ಸುರೇಶ್ ನಾಯಕ್, ಟಿವಿ9 ಬೀದರ್

ಇದನ್ನೂ ಓದಿ: ಬೀದರ್ ತೋಟಗಾರಿಕಾ ಕಾಲೇಜಿನಲ್ಲಿ ಕೃಷಿ ಪ್ರಾಯೋಗಿಕ ಕಲಿಕೆ; ರೈತರಂತೆ ಬೆಳೆ ಬೆಳೆದು ಹಣ ಸಂಪಾದಿಸಿದ ವಿದ್ಯಾರ್ಥಿಗಳು

ಇದನ್ನೂ ಓದಿ: ಬೀದರ್​ನ ಗೋಶಾಲೆಗಳಲ್ಲಿ ಗೋವುಗಳಿಗಿಲ್ಲ ರಕ್ಷಣೆ; ಮೇವು ಹಾಕ್ತಿಲ್ಲ, ಆರೈಕೆ ಮಾಡ್ತಿಲ್ಲ ನರಳಿ ನರಳಿ ಸಾಯುತ್ತಿವೆ ಎಂದು ಆರೋಪ