ಧಾರವಾಡ: ಭಾರತ ರತ್ನ ಪಂಡಿತ ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಧಾರವಾಡದ ಪಂಡಿತ ಭೀಮಸೇನ್ ಜೋಶಿ ಜನ್ಮಶತಮಾನೋತ್ಸವ ಸಮಿತಿ, ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ವರ್ಷಪೂರ್ತಿ ಹಮ್ಮಿಕೊಂಡಿವೆ. ನಾಡಿನ ವಿವಿಧೆಡೆಗಳಲ್ಲಿ ಪ್ರತಿ ತಿಂಗಳು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿವೆ. ಈ ಅಂಗವಾಗಿ ಧಾರವಾಡದ ಪಂಡಿತ ಮಲ್ಲಿಕಾರ್ಜುನ ಮನ್ಸೂರ ಕಲಾಭವನದಲ್ಲಿ ‘ಭೀಮಪಲಾಸ್’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಹುಬ್ಬಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪಂಡಿತ ಎಂ. ವೆಂಕಟೇಶಕುಮಾರ, ಪಂಡಿತ ಗಣಪತಿ ಭಟ್ಟ ಹಾಸಣಗಿ, ಪಂಡಿತ ಕೈವಲ್ಯಕುಮಾರ ಗುರವ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
2021-2022 ಸಾಲಿನ ವರ್ಷವನ್ನು ಪಂಡಿತ ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವವಾಗಿ ದೇಶದಾದ್ಯಂತ ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ವರ್ಷಪೂರ್ತಿಯಾಗಿ ನಾಡಿನ ವಿವಿಧೆಡೆಗಳಲ್ಲಿ ಅಲ್ಲದೇ ಹೊರ ರಾಜ್ಯಗಳಲ್ಲೂ ಹೆಸರಾಂತ ಕಲಾವಿದರಿಂದ ‘ಭೀಮಪಲಾಸ’ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿವಿಧ ಘರಾಣೆಗಳ ಗುಣವಿಶೇಷಣಗಳನ್ನು ಕಿರಾನಾ ಘರಾಣೆಯಲ್ಲಿ ಸಂಸ್ಕರಿಸಿ, ತಮ್ಮಲ್ಲಿದ್ದ ಕಲಾಕೌಶಲ್ಯಗಳಿಂದ ಲಕ್ಷಾಂತರ ಸಂಗೀತ ಪ್ರಿಯರನ್ನು ನಾದಲೋಕದ ರಸಯಾತ್ರೆಗೆ ಕೊಂಡೊಯ್ದವರು ಭಾರತರತ್ನ ಪಂಡಿತ ಭೀಮಸೇನ ಜೋಶಿ. ಈ ಮಹಾನ್ ವ್ಯಕ್ತಿಗಳ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ‘ಭೀಮಪಲಾಸ್’ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತಗಾರ ಮುಂಬೈನ ಡಾ. ಭರತ ಬಲವಳ್ಳಿ ತಮ್ಮ ಗಾಯನದೊಂದಿಗೆ ಮುನ್ನುಡಿ ಬರೆಯಲಾಯಿತು.
ಸಂಗೀತಕಾಶಿ ಧಾರವಾಡದಿಂದ ಆರಂಭವಾದ ಕಾರ್ಯಕ್ರಮ:
ಧಾರವಾಡದಿಂದ ಆರಂಭಗೊಂಡಿರುವ ಈ ಕಾರ್ಯಕ್ರಮ ಉತ್ತರ ಕನ್ನಡದ ಕುಮಟಾದತ್ತ ಪ್ರಯಾಣ ಬೆಳೆಸಲಿದ್ದು, ಕುಮಟಾದಲ್ಲಿ ಫೆ. 13 ರಂದು ಪಂ. ವಿಜಯ ಕೋಪರಕರ ಹಾಗೂ ರಮ್ಯಾ-ರೇಷ್ಮಾ ಭಟ್ ಸಹೋದರಿಯರು, ಮಾರ್ಚ್ 6 ರಂದು ಬೆಳಗಾವಿಯಲ್ಲಿ ಮುಗ್ಧಾ ವೈಶಂಪಾಯನ, ಎಪ್ರಿಲ್ ತಿಂಗಳ 10 ರಂದು ಮೈಸೂರಿನಲ್ಲಿ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರ ಗಾಯನ ಹರಿದು ಬರಲಿದೆ.
ಇನ್ನು ಮೇ 23ರಂದು ಗದುಗಿನಲ್ಲಿ ಪಂ. ಜಯತೀರ್ಥ ಮೇವುಂಡಿ ಮತ್ತು ಷಡ್ಜ್ ಗೋಡಖಿಂಡಿ ಕೊಳಲು, ಜೂನ್ 27 ರಂದು ವಿದುಷಿ ಪೂರ್ಣಿಮಾ ಭಟ್ಟ ಕುಲಕರ್ಣಿ ಅವರ ಗಾಯನ ಬಾಗಲಕೋಟೆಯಲ್ಲಿ, ಜುಲೈ 25ಕ್ಕೆ ಪಂ. ಕೈವಲ್ಯಕುಮಾರ ಗುರವ ಅವರ ಗಾಯನ ವಿಜಯಪುರದಲ್ಲಿ, ಆಗಸ್ಟ್ 29ರಂದು ಪಂ. ವೆಂಕಟೇಶಕುಮಾರ ಅವರ ಗಾಯನ ಶಿವಮೊಗ್ಗದಲ್ಲಿ ನಡೆಯಲಿದೆ.
ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಕಲಾವಿದರಿಂದ ಕುಂದಗೋಳದಲ್ಲಿ, ಅಕ್ಟೋಬರ್ 17ರಂದು ಪಂ. ಗಣಪತಿ ಭಟ್ಟ ಹಾಸಣಗಿ ಕುಂದಾಪುರದಲ್ಲಿ, ನವೆಂಬರ್ 21ರಂದು ಸಾವನಿ ಶೇಂಡೆಯವರು ಉಡುಪಿಯಲ್ಲಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ. ಇದಲ್ಲದೆ ಅಗತ್ಯವಿರುವ ಹಣಕಾಸಿನ ಆಧಾರದ ಮೇಲೆ ಡಿಸೆಂಬರ್, 2022ರ ಜನವರಿ ಹಾಗೂ ಫೆಬ್ರುವರಿಯಲ್ಲಿ 3 ರಿಂದ 5 ದಿನಗಳ ಬೃಹತ್ ಸಂಗೀತೋತ್ಸವವನ್ನು ಧಾರವಾಡ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೇ ಪುಣೆ, ಮುಂಬೈ, ಹೈದರಾಬಾದ್, ಗೋವಾಗಳಲ್ಲಿಯೂ ಕೂಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದಲ್ಲದೇ ತಿಂಗಳೊಂದರಂತೆ ವರ್ಷಪೂರ್ತಿ ಧಾರವಾಡದಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಭಾರತ ರತ್ನ ಪಂ. ಭೀಮಸೇನ ಜೋಶಿ ಗಾನ ಗಾರುಡಿಗ:
ಪಂಡಿತ ಭೀಮಸೇನ ಗುರುರಾಜ ಜೋಶಿ ಫೆಬ್ರವರಿ 4, 1922 ರಂದು ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಜನಿಸಿದರು. ಭೀಮಸೇನ ಜೋಶಿ ಪೂರ್ವಜರು, ಮೂಲತಃ ಗದಗ ಜಿಲ್ಲೆಯ ’ಹೊಂಬಳ’ ಗ್ರಾಮದವರು. ಇವರ ತಂದೆ ಗುರುರಾಜ ಜೋಶಿ ಸಂಸ್ಕೃತದಲ್ಲಿ ಪಂಡಿತರು. ಗದುಗಿನ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕರಾಗಿ, ಬಾಗಿಲುಕೋಟೆಯ ಬಸವೇಶ್ವರ ಹೈಸ್ಕೂಲ್ನಲ್ಲಿ ಮುಖ್ಯೋಪಾಧ್ಯಾರರಾಗಿ ಸೇವೆ ಸಲ್ಲಿಸಿದ್ದರು. ಗುರುರಾಜ ಜೋಶಿ ಅವರ ಇಬ್ಬರು ಪತ್ನಿಯರಲ್ಲಿ ಮೊದಲನೆಯವರಾದ ರಮಾಬಾಯಿಯವರಿಗೆ 7 ಜನ ಮಕ್ಕಳು. ಎರಡನೆಯ ಪತ್ನಿ, ಗೋದುಬಾಯಿ ಅವರಿಗೆ 9 ಜನ ಮಕ್ಕಳು. ಗೋದುಬಾಯಿಯವರ ಹಿರಿಯ ಮಗ ಭೀಮಸೇನ ಜೋಶಿ.
ಜೋಶಿ ಅವರ ಸಂಗೀತದ ಹಾದಿ ಮತ್ತು ವೈಯಕ್ತಿಕ ಬದುಕು:
ಚಿಕ್ಕಂದಿನಲ್ಲಿ ಸೈಕಲ್ ಸವಾರಿ ಇವರ ನೆಚ್ಚಿನ ಹವ್ಯಾಸವಾಗಿತ್ತು. ಏನಾದರೂ ತರಲು ಮಾರುಕಟ್ಟೆಗೆ ಕಳಿಸಿದರೆ, ಗಂಟೆಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಅತೀವ ಒಲವು ಹೊಂದಿದ್ದ ಜೋಶಿ ಹನ್ನೊಂದನೆಯ ವಯಸ್ಸಿನಲ್ಲಿಯೇ ಮನೆ ಬಿಟ್ಟು ಮುಂಬೈಗೆ ಹೋದರು. ಮುಂಬೈ ತಲುಪಿದ ಜೋಶಿ ಅವರ ಬಳಿ ಹಣವೇ ಇರಲಿಲ್ಲ. ಆಗ ಭೀಮಸೇನ ಜೋಶಿ ಕೂಲಿ ಮಾಡಿ, ಪುಟ್ಪಾತ್ನಲ್ಲಿ ಮಲಗಿ ದಿನ ಕಳೆದರು. ಆದರೆ ಅದು ಬಹಳ ದಿನ ನಡೆಯಲಿಲ್ಲ. ಅನಿವಾರ್ಯವಾಗಿ ಅವರು ಮರಳಿಗೆ ಹುಟ್ಟೂರಿಗೆ ಬಂದರು.
ಸಂಗೀತ ಕಲಿಯಲೇಬೇಕೆಂಬ ಅದಮ್ಯ ಆಸೆ ಮತ್ತು ಹಠ ಅವರನ್ನು ಎರಡನೇ ಬಾರಿಗೆ ಮನೆ ಬಿಡುವಂತೆ ಮಾಡಿತು. ಈ ಬಾರಿ ಅವರು ಆಯ್ಕೆ ಮಾಡಿಕೊಂಡಿದ್ದು ಗ್ವಾಲಿಯರ್. ಅಲ್ಲಿ ಗಾಯಕ ವಿನಾಯಕ್ ರಾವ್ ಪಟವರ್ಧನ್ ಇವರ ನಿರ್ದೇಶನದಂತೆ ಸವಾಯಿ ಗಂಧರ್ವರಲ್ಲಿ ಸಂಗೀತ ಸಾಧನೆ ಮಾಡಿದರು. ಬಳಿಕ ಮರಳಿ ಧಾರವಾಡಕ್ಕೆ ಹಿಂದುರಿಗಿ, ಕುಂದಗೋಳದ ಪ್ರಸಿದ್ಧ ಗಾಯಕ ಸವಾಯಿ ಗಂಧರ್ವರ ಅಪ್ಪಟ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ ಕಿರಾಣಾ ಘರಾನಾದಲ್ಲಿ ಪರಿಣತರಾದರು.
ಈ ಮಧ್ಯೆ ಭೀಮಸೇನ ಜೋಶಿ 1944 ರಲ್ಲಿ ಸುನಂದಾರನ್ನು ಮದುವೆಯಾದರು. ಭೀಮಸೇನ-ಸುನಂದಾ ದಂಪತಿಗೆ ರಾಘವೇಂದ್ರ, ಉಷಾ, ಸುಮಂಗಲ ಮತ್ತು ಆನಂದ ಎನ್ನುವ ಮಕ್ಕಳಾದರು. ಸುನಂದಾರ ನಿಧನದ ಬಳಿಕ ವತ್ಸಲಾರೊಂದಿಗೆ ಎರಡನೇ ವಿವಾಹವಾಯಿತು. ಜಯಂತ, ಶುಭದಾ ಹಾಗೂ ಶ್ರೀನಿವಾಸ ಎನ್ನುವ ಮಕ್ಕಳು ಜನಿಸಿದರು. ಇವರಲ್ಲಿ ಕೊನೆಯ ಮಗ ತಂದೆಯ ಪರಮ ಶಿಷ್ಯರಾಗಿ, ಇದೀಗ ಪ್ರಬುದ್ಧ ಗಾಯಕರಾಗಿದ್ದಾರೆ.
ಗದಗ ಅಂದರೆ ಜೋಶಿ ಅವರಿಗೆ ಪಂಚಪ್ರಾಣ:
ತಮ್ಮ ಹುಟ್ಟು ಜಿಲ್ಲೆ ಗದಗ ಅಂದರೆ ಭೀಮಸೇನ ಜೋಶಿ ಅವರಿಗೆ ಬಲು ಪ್ರೀತಿ. ಅವರಿಗೆ ಅಲ್ಲಿ ದೊರೆಯುವ ಖಡಕ್ ರೊಟ್ಟಿ ಮತ್ತು ಝುಣಕ ಎಂದರೆ ಪಂಚಪ್ರಾಣ. ತಮ್ಮ ಜಿಲ್ಲೆಯ ಜನತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿ, ಜನರ ಮನ ಗೆದ್ದಿದ್ದಾರೆ. 1983 ರಲ್ಲಿ ವೆಂಕಟೇಶ ಚಿತ್ರಮಂದಿರ ಹತ್ತಿಕಾಳ್ ಕೂಟದಲ್ಲಿ, 1985-86 ರಲ್ಲಿ ಕಾಟನ್ ಮಾರ್ಕೆಟ್, 1992 ರಲ್ಲಿ ಅಭಿನಯರಂಗ ವಿದ್ಯಾದಾನ ಸಮಿತಿ ಹೈಸ್ಕೂಲ್ ಅವರಣ, ಕರ್ನಾಟಕ ಚಿತ್ರಮಂದಿರದಲ್ಲಿ ಕಾರ್ಯಕ್ರಮ ನೀಡಿ, ಅದರಿಂದ ಸಂಗ್ರಹವಾದ ಹಣವನ್ನು ನಗರದ ವಿವಿಧ ಶಾಲೆಗಳ ಕೊಠಡಿ ನಿರ್ಮಾಣ ಕಾರ್ಯಗಳಿಗೆ ದೇಣಿಗೆ ನೀಡಿದ್ದರು.
ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಹೆಸರು ಸಂಪಾದಿಸಿದ ಜೋಶಿ:
ಕೊಲ್ಕತ್ತಾಕ್ಕೆ ಭೀಮಸೇನ ಜೋಶಿ ವರ್ಷದಲ್ಲಿ ಕನಿಷ್ಟ 20 ಬಾರಿಯಾದರೂ ಸಂಗೀತ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು. ಆ ಕಾಲದಲ್ಲಿ ಕೊಲ್ಕತ್ತಾದಲ್ಲಿ ಕಾರ್ಯಕ್ರಮ ನೀಡುವುದು ಪ್ರತಿಷ್ಠೆಯ ವಿಷಯವಾಗಿತ್ತು. ಭೀಮಸೇನ ಜೋಶಿ ಅವರಿಗೆ ಅಲ್ಲಿಂದ ತಪ್ಪದೇ ಆಮಂತ್ರಣ ಬರುತ್ತಿದ್ದವು. ಇನ್ನು ಕೊಲ್ಕಾತ್ತಾದಲ್ಲಿ ವರ್ಷಪೂರ್ತಿ ನಡೆಯುತ್ತಿದ್ದ ಆಲ್ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್, ತಾನ್ಸೇನ್ ಮ್ಯೂಸಿಕ್ ಕಾನ್ಪರೆನ್ಸ್, ಡೋವರ್ ಲೇನ್ ಮ್ಯೂಸಿಕ್ ಕಾನ್ಪರೆನ್ಸ್ ಗಳಲ್ಲಿ ಅನೇಕ ಬಾರಿ ಭಾಗವಹಿಸಿ, ಸಂಗೀತ ಪ್ರತಿಯ ಮನವನ್ನು ತಣಿಸಿದ್ದಲ್ಲದೇ ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದ್ದರು.
ಇನ್ನು ಜೋಶಿ ಹಿಂದುಸ್ತಾನಿ ಸಂಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಪ್ರಸಿದ್ಧರು. ಕನ್ನಡ ಭಾಷೆಯಲ್ಲಿ ಅನೇಕ ದಾಸರ ಪದಗಳನ್ನು ಹಾಡುವ ಮೂಲಕ ಮನೆ ಮಾತಾಗಿದ್ದಾರೆ. ಇನ್ನು ಭೀಮಸೇನ ಜೋಶಿಯವರ ಸಂಗೀತದ ಧ್ವನಿಸುರಳಿಗಳು ಮತ್ತು ಧ್ವನಿಮುದ್ರಿಕೆಗಳು, ಪ್ರತಿಯೊಬ್ಬರ ಮನೆ-ಮನವನ್ನು ತಲುಪಿವೆ. ಸಂಗೀತದಲ್ಲಿ ಕಲಾಶ್ರೀ ರಾಗವನ್ನು ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮಗಳನ್ನು ಹಾಡಿ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನ ಮಾಡಿದ್ದಾರೆ.
ಜೋಶಿ ಅವರಿಗೆ ಸಂದ ಗೌರವಗಳು:
ಪುಣೆಯಲ್ಲಿ ವಾಸಿಸುತ್ತಿದ್ದ ಭೀಮಸೇನ ಜೋಷಿ, ತಮ್ಮ ಗುರುಗಳ ನೆನಪಿನಲ್ಲಿ 1952 ರಿಂದ ಪ್ರತಿ ವರ್ಷವೂ ಸವಾಯಿ ಗಂಧರ್ವ ಸಂಗೀತ ಮಹೋತ್ಸವವನ್ನು ನಡೆಸುತ್ತಾ ಬ೦ದಿದ್ದರು. ಹುಬ್ಬಳ್ಳಿಯ ಹಾನಗಲ್ ಮ್ಯೂಸಿಕ್ ಸಂಸ್ಥೆಯು ಪುಣೆಯಲ್ಲಿ 2007 ಅಕ್ಟೋಬರ್ 12, ರಂದು ಪಂ. ಭೀಮಸೇನ ಜೋಶಿಯವರಿಗೆ ಡಾ. ಗಂಗೂಬಾಯಿ ಹಾನಗಲ್ ಅವರಿಂದ “ಸಂಗೀತ ಕಲಾನಿಧಿ” ಎನ್ನುವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು. ಇನ್ನು ಕೇಂದ್ರ ಸರಕಾರ ಜೋಶಿ ಅವರಿಗೆ 1972 ರಲ್ಲಿ ಪ್ರದ್ಮಶ್ರೀ, 1985 ರಲ್ಲಿ ಪದ್ಮಭೂಷಣ, 1999 ರಲ್ಲಿ ಪದ್ಮವಿಭೂಷಣ ಹಾಗೂ 2008 ರಲ್ಲಿ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಪಂ. ಭೀಮಸೇನ ಜೋಶಿಯವರ ಪ್ರಮುಖ ಶಿಷ್ಯರು:
ಪಂ. ಭೀಮಸೇನ ಜೋಶಿ ಅವರ ಶಿಷ್ಯತ್ವ ಪಡೆದವರಲ್ಲಿ ಮಾಧವ ಗುಡಿ, ಶ್ರೀಕಾಂತ್ ದೇಶಪಾಂಡೆ, ವಿನಾಯಕ ತೊರವಿ, ಉಪೇಂದ್ರ ಭಟ್, ಶ್ರೀನಿವಾಸ ಜೋಶಿ, ಸ೦ಜೀವ ಜಹಗೀರದಾರ, ರಾಜೇಂದ್ರ ಕಂದಲ್ಗಾವ್ಕರ್, ಆನಂದ ಭಾಟೆ, ವಿನಾಯಕ್ ಪ್ರಭು, ರಾಮಕೃಷ್ಣ ಪಟವರ್ಧನ್, ಶ್ರೀಪತಿ ಪಾಡಿಗಾರ, ಪಳಯಾರ ವರಾಜ್, ರಶೀದ ಖಾನ್, ಅಶುತೋಷ ಮುಖರ್ಜಿ ಮುಂತಾದವರು ಪ್ರಮುಖರು.
ಇಂತಹ ಪ್ರಸಿದ್ಧ ಸಂಗೀತಗಾರ ಪಂ. ಭೀಮಸೇನ ಜೋಶಿ ಅವರು ತಮ್ಮ 89 ರ ಇಳಿವಯಸ್ಸಿನಲ್ಲಿ 2011 ಜನವರಿ 24 ರಂದು ಪೂನಾದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಇಂತಹ ಸಂಗೀತ ದಿಗ್ಗಜನ ನೆನಪಿಗೋಸ್ಕರ ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ವರ್ಷಪೂರ್ತಿ ಆಯೋಜಿಸಿದ್ದು, ಸಂತಸದ ಸಂಗತಿಯೇ ಸರಿ.
ಕೇವಲ ಕ್ವಾಲಿಟಿ ಮಾತ್ರ ಒಂದು ಹಾಡನ್ನು ಜನಪ್ರಿಯಗೊಳಿಸಬಲ್ಲದು: ದಲೇರ್ ಮೆಹಂದಿ