ಬೆಂಗಳೂರು: ವಾರಾಂತ್ಯದ ಕರ್ಫ್ಯೂ ವೇಳೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡಿ ಪರಿಷ್ಕೃತ ಮಾರ್ಗಸೂಚಿಯನ್ನು ಕರ್ನಾಟಕ ರಾಜ್ಯ ಬಿಡುಗಡೆಗೊಳಿಸಿದೆ. ಈ ಮೂಲಕ ರಾಜ್ಯ ಸರ್ಕಾರ ತಾನು ರೂಪಿಸಿದ್ದ ಇನ್ನೊಂದು ನಿಯಮವನ್ನು ಸ್ವತಃ ಸಡಿಲಿಸಿದಂತಾಗಿದೆ. ವಾರಾಂತ್ಯದ ಕರ್ಫ್ಯೂವಿನ ದಿನಗಳಲ್ಲಿ ಸ್ಥಳದಲ್ಲೇ ಕಾರ್ಮಿಕರು ಲಭ್ಯವಿದ್ದರೆ ನಿರ್ಮಾಣ ಕಾಮಗಾರಿ ನಡೆಸಬಹುದಾಗಿದೆ. ಆದರೆ ಹೊರಗಿನಿಂದ ಕಾರ್ಮಿಕರನ್ನು ಕರೆತರಬಾರದು ಎಂದು ನೂತನ ಮಾರ್ಗಸೂಚಿ ತಿಳಿಸಿದೆ.
ಕೇವಲ ತುರ್ತು ಸಂದರ್ಭ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಹೊರತುಪಡಿಸಿ ಬೇರೆ ಯಾವ ಕಾರಣಕ್ಕೂ ಜನ ಮನೆಬಿಟ್ಟು ಆಚೆ ಬಾರದಂತೆ ಸರ್ಕಾರ ಆಗ್ರಹಿಸಿದೆ. ಸರ್ಕಾರ ವಿಧಿಸಿರುವ ವಾರಾಂತ್ಯದ ಲಾಕ್ಡೌನ್ ಇಂದಿನಿಂದ ಅಂದರೆ ಶುಕ್ರವಾರದಿಂದ ಜಾರಿಗೆ ಬಂದಿದ್ದು, ಉಳಿದ ದಿನಗಳಲ್ಲಿ ರಾತ್ರಿ ಕರ್ಪ್ಯೂಗೆ ಸಂಬಂಧಿಸಿದ ಎಲ್ಲ ನಿಯಮಗಳು ಅನ್ವಯವಾಗುತ್ತವೆ.
ಹಾಗಾದರೆ, ಈ ವೀಕೆಂಡ್ ಕರ್ಪ್ಯೂ ಯಾರಿಗೆಲ್ಲ ಅನ್ವಯವಾಗುತ್ತದೆ, ಯಾರು ಮನೆಬಿಟ್ಟು ಆಚೆ ಬರಬಹುದು ಎಂಬ ಮಾಹಿತಿ ಇಲ್ಲಿದೆ.
ಅಗತ್ಯ ಸೇವೆಗಳ ಇಲಾಖೆಗಳಲ್ಲಿರುವ ಸರ್ಕಾರಿ ನೌಕರರು ಕೆಲಸಕ್ಕೆ ಹೋಗಬಹುದೇ?
ಹೌದು, ಖಂಡಿತವಾಗಿ ಅವರು ಹೋಗಬಹುದು. ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಉದ್ಯೋಗಿಗಳು, 24×7 ಕೆಲಸ ಮಾಡುವ ಕಾರ್ಖಾನೆ ಮತ್ತು ಸಂಸ್ಥೆಗಳ ನೌಕರರು ವಾರಾಂತ್ಯದ ಕರ್ಫ್ಯೂನಲ್ಲೂ ಕೆಲಸಕ್ಕೆ ಹೋಗಬಹುದಾಗಿದೆ. ಅದರೆ ಕೆಲಸಕ್ಕೆ ಹೋಗುವಾಗ ಅವರು ತಾವು ಕೆಲಸ ಮಾಡುವ ಸಂಸ್ಥೆಯ ಗುರುತಿನ ಕಾರ್ಡ್ ಅನ್ನು ತಮ್ಮೊಂದಿಗೆ ಇಟ್ಟುಕೊಂಡಿರಬೇಕು.
ವಾರಾಂತ್ಯದ ಲಾಕ್ಡೌನ್ನಲ್ಲಿ ಯಾರೆಲ್ಲ ಮನೆಯಿಂದ ಆಚೆ ಬರಬಹುದು?
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಯ ಪ್ರಕಾರ ಕೇವಲ ಟೆಲಿಕಾಮ್/ಇಂಟರ್ನೆಟ್ ಸೇವೆ ಒದಗಿಸುವ ಉದ್ಯೋಗಿಗಳು ಮಾತ್ರ ತಮ್ಮ ಗುರುತಿನ ಚೀಟಿಯೊಂದಿಗೆ ಆಚೆ ಬರಬಹುದು. ಐಟಿ/ ಐಟಿಇಎಸ್ ಸಂಸ್ಥೆಗಳ ಅಗತ್ಯ ಸೇವೆಗಳ ವಿಭಾಗಗಳಲ್ಲಿ ಕೆಲಸ ಮಾಡುವವರು ಕಚೇರಿಗಳಿಗೆ ಹೋಗಿ ಕೆಲಸ ಮಾಡಬಹುದು ಆದರೆ ಉಳಿದವರು ತಮ್ಮ ಮನೆಗಳಿಂದಲೇ ಕೆಲಸ (ವರ್ಕ್ ಫ್ರಂ ಹೋಮ್) ಮಾಡಬೇಕು. ಹಾಗೆಯೇ, ಲಸಿಕೆ ಹಾಕಿಸಿಕೊಳ್ಳಲು ಅರ್ಹರಿರುವ ಜನ ತಮ್ಮ ಗುರುತಿನ ಚೀಟಿಗಳೊಂದಿಗೆ ಮನೆಯಿಂದ ಆಚೆ ಬಂದು ಲಸಿಕಾ ಕೇಂದ್ರಗಳಿಗೆ ಹೋಗಬಹುದು.
ಅಸ್ವಸ್ಥರು ಆಸ್ಪತ್ರೆಗಳಿಗೆ ಹೋಗಬಹುದೇ?
ಹೌದು. ಅಸ್ವಸ್ಥರು ಮತ್ತು ಪ್ರಯಾಣಿಸಲೇಬೇಕಾದ ಅನಿವಾರ್ಯತೆ ಇರುವವರು ವಾರಾಂತ್ಯದ ಲಾಕ್ಡೌನ್ನಲ್ಲಿ ಆಚೆ ಬರಬಹುದೆಂದು ಸರ್ಕಾರ ಸ್ಪಷ್ಟಪಡಿಸಿದೆ. ಹಾಗೆಯೇ, ವೈದ್ಯಕೀಯ ನೆರವಿನ ಅಗತ್ಯವಿರುವವರು ಸಹ ಮನೆಯಿಂದ ಆಚೆ ಬರಬಹುದು.
ಕಿರಾಣಾ ಅಂಗಡಿಗಳು ತೆರೆದಿರುತ್ತವೆಯೇ, ಹಾಲಿನ ಸರಬರಾಜು ಹೇಗೆ?
ಸರ್ಕಾರ ಜಾರಿಗೊಳಿಸಿರುವ ನಿಯಮಾವಳಿಗಳ ಪ್ರಕಾರ, ನಿಮ್ಮ ನೆರೆಹೊರೆಯ ಅಂಗಡಿಗಳು, ಹಾಲಿನ ಪಾರ್ಲರ್ಗಳು ಶನಿವಾರ ಮತ್ತು ರವಿವಾರಗಳಂದು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ತೆರೆದಿರುತ್ತವೆ. ಆದರೆ, ಅಗತ್ಯ ವಸ್ತುಗಳ ಆನ್ಲೈನ್ ಸೇವೆ ಲಾಕ್ಡೌನ್ದುದ್ದಕ್ಕೂ ಜಾರಿಯಲ್ಲಿರುತ್ತದೆ.
ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್ ಓಡಾಟ ಇರಲ್ಲ
ಟಿವಿ9 ಜೊತೆ ಮಾತಾಡಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಶಿಖಾ ಅವರು, ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್ಗಳ ಸಂಚಾರ ಇರೋದಿಲ್ಲ ಅಂತ ತಿಳಿಸಿದ್ದಾರೆ.
ಮೆಟ್ರೋ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ
ವಾರಾಂತ್ಯ ಕರ್ಪ್ಯೂ ಹಿನ್ನಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೆಟ್ರೋ ಸಂಚಾರ ರದ್ದು ಮಾಡಲಾಗಿದೆ. ಆದರೆ, ಸೋಮವಾರದಿಂದ ಶುಕ್ರವಾರದವರೆಗೆ ಮೆಟ್ರೋ ಸೇವೆ ಎಂದಿನಂತೆ ಬೆಳಗ್ಗೆ 7 ಗಂಟೆಗ ಆರಂಭವಾಗಲಿದೆ ಎಂದು ಬಿಎಮ್ಆರ್ಸಿಎಲ್ ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಇದನ್ನೂ ಓದಿ: Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
(building construction works permitted on weekend curfew days in Karnataka state revised guidelines released)