ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 21: ಗುಣಮಟ್ಟದ ದಾಳಿಂಬೆ (Pomegranate) ಹಣ್ಣಿಗೆ ಒಂದು ಕೆಜಿಗೆ 200 ರೂಪಾಯಿ ಬೆಲೆ ಇದೆ. ಇದ್ರಿಂದ ಕಳ್ಳರ (Thieves) ಕಣ್ಣು ರೈತರು ಬೆಳೆದಿದ್ದ ದಾಳಿಂಬೆ ತೋಟಗಳ ಮೇಲೆ ಬಿದ್ದಿತ್ತು. ರಾತ್ರೋರಾತ್ರಿ ಪ್ರತಿದಿನ ಒಂದಿಲ್ಲೊಂದು ಕಡೆ ದಾಳಿಂಬೆ ಕದ್ದು, ರೈತರ ನಿದ್ದೆಗೆಡಿಸಿದ್ದರು. ಕೊನೆಗೂ ಪೊಲೀಸರು ದಾಳಿಂಬೆ ಕಳ್ಳರನ್ನು ಬಂಧಿಸಿದ್ದಾರೆ. ಬರೀ ಮೋಜು, ಮಸ್ತಿಗಾಗಿ ದಾಳಿಂಬೆ ಕದಿಯುತ್ತಿದ್ದ ಪ್ರಕರಣ ಬಯಲಾಗಿದೆ.
ಬಂಧಿತ ಆರೋಪಿಗಳ ವಿವರ ಇಲ್ಲಿದೆ. ಒಬ್ಬ ಆರೋಪಿಯ ಹೆಸರು ಶ್ರೀಕಾಂತ್ ಅಲಿಯಾಸ್ ಕೆಂಪ. ಈಗ ತಾನೇ 19 ವರ್ಷ. ಚಿಕ್ಕಬಳ್ಳಾಪುರ ತಾಲ್ಲೂಕಿನ ಕುರ‍್ಲಹಳ್ಳಿ ಗ್ರಾಮದ ನಿವಾಸಿ. ಮತ್ತೊಬ್ಬನ ಹೆಸರು ರಾಜು ಕೆ.ಬಿ. ಅಲಿಯಾಸ್ ಚಿಕ್ಕಭೈರಪ್ಪ ಅಲಿಯಾಸ್ ಭೈರ. 23 ವರ್ಷ ವಯಸ್ಸು. ಚಿಕ್ಕಬಳ್ಳಾಪುರ ತಾಲ್ಲೂಕಿನ ಕರ‍್ಲಹಳ್ಳಿ ಗ್ರಾಮದ ನಿವಾಸಿ. ದುಡಿದು ತಿನ್ನುವ ವಯಸ್ಸಿನಲ್ಲಿ ಮೋಜು-ಮಸ್ತಿ ಹಿಂದೆ ಬಿದ್ದಿದ್ದರು. ದುಡಿದು ತಿನ್ನುವುದರ ಬದಲು ರೈತರು ಬೆಳೆದಿದ್ದ ದಾಳಿಂಬೆ ತೋಟಕ್ಕೆ ನುಗ್ಗಿ, ದಾಳಿಂಬೆ ಕಳ್ಳತನ ಮಾಡುತ್ತಿದ್ದರು. ಆದರೆ ಈಗ ಇವರ ನಸೀಬು ಕೆಟ್ಟಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾಗಿ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ್ ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಕ್ರಾಸ್, ಚದಲಪುರ, ಅಜ್ಜವರ, ಸಾದೇನಹಳ್ಳಿ, ನಾಯನಹಳ್ಳಿ, ಪಟ್ರೇನಹಳ್ಳಿ ಸೇರಿದಂತೆ ವಿವಿದೆಡೆ 10ಕ್ಕೂ ಹೆಚ್ಚು ತೋಟಗಳಲ್ಲಿ ದಾಳಿಂಬೆ ಕಳ್ಳತನ ಮಾಡಲಾಗಿತ್ತು.
ರೈತರ ತೋಟದಿಂದ ಕದ್ದಿದ್ದ ದಾಳಿಂಬೆಯನ್ನು ಚಿಕ್ಕಬಳ್ಳಾಪುರದ ಹಣ್ಣಿನ ವ್ಯಾಪಾರಿಗಳಾದ ನಂಜುಂಡಪ್ಪ ಹಾಗೂ ಸೈಯದ್ ಮನ್ಸೂರ್ ಖರೀದಿ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು. ಇದರಿಂದ ಅವರನ್ನೂ ಸಹಾ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಬರಗಾಲಕ್ಕೆ ಕಂಗಲಾದ ಚಿಕ್ಕಬಳ್ಳಾಪುರ; ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ
ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧ ದಾಳಿಂಬೆ ತೋಟಗಳಲ್ಲಿ ಕಳ್ಳರು, ಕಳ್ಳತನ ಮಾಡಿ ರೈತರ ನೆಮ್ಮದಿ ಹಾಳು ಮಾಡಿದ್ದರ ಬಗ್ಗೆ ಟಿವಿ 9 ಡಿಜಿಟಲ್ ನಿರಂತರ ವರದಿ ಪ್ರಸಾರ ಮಾಡಿತ್ತು. ಇದರಿಂದ ಅಲರ್ಟ್ ಆಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರ ಮೇಲೆ ಒತ್ತಡ ಹೇರಿ ಆರೋಪಿಗಳ ಬಂಧನಕ್ಕೆ ಸೂಚಿಸಿದರು. ಪೊಲೀಸರ ಕಾರ್ಯವೈಖರಿಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ