
ಚಿಕ್ಕಮಗಳೂರು, ಅ.6: ದಸರಾ ರಜೆಯ ಖುಷಿಯಲ್ಲಿದ್ದ ಬಾಲಕರ ಪಾಲಿಗೆ ವಿಧಿ ಕ್ರೂರವಾಗಿ ನಡೆದುಕೊಂಡಿದೆ. ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಅಪ್ರಾಪ್ತ ಬಾಲಕರು ನೀರಿಗೆ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಭೀಕರ ಹಾಗೂ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿ ನಡೆದಿದೆ. ಸಾವಿಗೀಡಾದ ಮೂವರೂ ಬಾಲಕರು ಕೇವಲ 12 ವರ್ಷದವರಾಗಿದ್ದು, ಒಂದೇ ಗ್ರಾಮದ ಮೂವರು ಚಿಗುರು ಕಂದಮ್ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಕ್ರಂದನ ಮುಗಿಲು ಮುಟ್ಟಿದೆ. ಶಾಲಾ ದಸರಾ ರಜೆ ಇರುವುದರಿಂದ ಲಿಖಿತ್ (12), ಭುವನ್ (12) ಹಾಗೂ ತರುಣ್ (12) ಎಂಬ ಮೂವರು ಬಾಲಕರು ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಆಟವಾಡಿಕೊಂಡು, ಬಳಿಕ ಗ್ರಾಮದ ಸಮೀಪವಿರುವ ಮರ್ಲೆ ಕೆರೆಗೆ ಈಜಾಡಲು ತೆರಳಿದ್ದಾರೆ.
ಸರಿಯಾಗಿ ಈಜು ಬಾರದ ಬಾಲಕರು ಕೆರೆಯ ಆಳ ತಿಳಿಯದೆ ನೀರಿಗಿಳಿದಿದ್ದಾರೆ. ಈ ವೇಳೆ ಒಬ್ಬರು ಮುಳುಗುತ್ತಿದ್ದಂತೆ ರಕ್ಷಿಸಲು ಹೋಗಿ ಮೂವರೂ ಕೆರೆಯ ಆಳಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಬಾಲಕರು ಮನೆಗೆ ಮರಳದಿದ್ದಾಗ ಹುಡುಕಾಟ ನಡೆಸಿದ ಗ್ರಾಮಸ್ಥರಿಗೆ ಕೆರೆಯ ದಂಡೆಯ ಮೇಲೆ ಬಾಲಕರ ಉಡುಪುಗಳು ಕಂಡುಬಂದಿವೆ. ತಕ್ಷಣವೇ ಕೆರೆಗಿಳಿದ ಸ್ಥಳೀಯರು ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸಜಾ ಕೈದಿ ಬಿಡುಗಡೆಗೆ ಪತ್ನಿ ದೇಹದ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್
ಮತ್ತೊಂದೆಡೆ, ಬೀದರ್ ನಗರದ ನಾವದಗೇರಿಯಲ್ಲಿ ಬೀದಿನಾಯಿಗಳ ಆತಂಕ ತೀವ್ರಗೊಂಡಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಇಬ್ಬರು ಸಹೋದರರ ಮೇಲೆ ಬೀದಿನಾಯಿಯೊಂದು ಭೀಕರವಾಗಿ ದಾಳಿ ನಡೆಸಿದೆ. ನಿನ್ನೆ ಸಂಜೆ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ 6 ವರ್ಷದ ಶರತ್ ಹಾಗೂ 12 ವರ್ಷದ ಸಾಯಿನಾಥ್ ಅವರ ಮೇಲೆ ಏಕಾಏಕಿ ಎರಗಿದ ನಾಯಿ, ಬಾಲಕರ ಮುಖ, ಕೈ ಹಾಗೂ ಕಾಲುಗಳಿಗೆ ಮನಬಂದಂತೆ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಇಬ್ಬರೂ ಬಾಲಕರನ್ನು ತಕ್ಷಣವೇ ಬೀದರ್‌ನ ಬ್ರಿಮ್ಸ್ (BRIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಾಯಾಳು ಬಾಲಕರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Tue, 6 October 26