ಚಿಕ್ಕಮಗಳೂರಿನಲ್ಲಿ ನಕಲಿ ಲೇಡಿ PSI ಬಂಧನ: ಕೆಫೆ ನಡೆಸಿ 25ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂ., ಕಾರು ವಂಚಿಸಿದ್ದ ನಿವೇದಿತಾ ಗೌಡ

ಬೆಂಗಳೂರು ಪಿಎಸ್‌ಐ ಎಂದು ಸುಳ್ಳು ಹೇಳಿ ಚಿಕ್ಕಮಗಳೂರಿನಲ್ಲಿ ಕೋಟಿಗಟ್ಟಲೆ ಹಣ, ಚಿನ್ನಾಭರಣ, ಐಷಾರಾಮಿ ಕಾರುಗಳನ್ನು ವಂಚಿಸಿದ ನಿವೇದಿತಾ ಗೌಡಳನ್ನು ಬಂಧಿಸಲಾಗಿದೆ. 25ಕ್ಕೂ ಹೆಚ್ಚು ಸಂತ್ರಸ್ತರಿಂದ ದೂರು ದಾಖಲಾಗಿದ್ದು, ಆಕೆ ಜನರನ್ನು ನಂಬಿಸಲು ಪೊಲೀಸ್ ಉಡುಪು, ಕಟಿಂಗ್ ಬಳಸುತ್ತಿದ್ದಳು. ಆಕೆಯ ಪ್ರಿಯಕರನಿಗೆ ಹಣ ನೀಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇವಳು ವಂಚನೆ ಎಸಗಿದ್ದಳು.

ಚಿಕ್ಕಮಗಳೂರಿನಲ್ಲಿ ನಕಲಿ ಲೇಡಿ PSI ಬಂಧನ: ಕೆಫೆ ನಡೆಸಿ 25ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂ., ಕಾರು ವಂಚಿಸಿದ್ದ ನಿವೇದಿತಾ ಗೌಡ
ನಕಲಿ ಪಿಎಸ್‌ಐ ವಂಚನ
Edited By:

Updated on: Sep 30, 2026 | 11:55 AM

ಚಿಕ್ಕಮಗಳೂರು, ಸೆ.30: ತಾನು ಬೆಂಗಳೂರಿನ ಪೊಲೀಸ್ ಸಬ್ ಇನ್‌‌ಸ್ಪೆಕ್ಟರ್ (PSI) ಎಂದು ಸುಳ್ಳು ಹೇಳಿ, ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ, ಚಿನ್ನ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ಭಾರಿ ವಂಚನೆ ಎಸಗುತ್ತಿದ್ದ ಖತರ್ನಾಕ್ ನಕಲಿ ಲೇಡಿ ಪಿಎಸ್‌ಐ ಪ್ರಮುಖ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ರಾಮನಗರ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿಯಾಗಿದ್ದು, ಈಕೆಯಿಂದ ವಂಚನೆಗೊಳಗಾದ 25ಕ್ಕೂ ಹೆಚ್ಚು ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಖಾಕಿ ಡ್ರೆಸ್, ಪೊಲೀಸ್ ಕಟಿಂಗ್: ನೈಜ ಪಿಎಸ್‌ಐ ರೀತಿ ಪೋಸ್:

ಆರೋಪಿ ನಿವೇದಿತಾ ಗೌಡ ಮೂಲತಃ ರಾಮನಗರದವಳಾಗಿದ್ದು, ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಐ.ಜಿ. ರಸ್ತೆಯಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದಳು. ಸಾರ್ವಜನಿಕರಿಗೆ ಅನುಮಾನ ಬಾರದಂತೆ ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂದು ಪರಿಚಯಿಸಿಕೊಳ್ಳುತ್ತಿದ್ದಳು. ಜನರು ನಂಬಲಿ ಎನ್ನುವ ಕಾರಣಕ್ಕೆ ಪೊಲೀಸರ ರೀತಿಯೇ ಶಾರ್ಟ್ ಕಟಿಂಗ್ ಮಾಡಿಸಿಕೊಂಡು, ಖಾಕಿ ಯೂನಿಫಾರ್ಮ್ ಮಾದರಿಯ ಉಡುಪು ಧರಿಸುತ್ತಿದ್ದಳು. ಕೆಫೆಗೆ ಬರುವ ಗ್ರಾಹಕರು, ಮಹಿಳೆಯರು ಹಾಗೂ ಯುವಕರನ್ನೇ ಪ್ರಮುಖ ಟಾರ್ಗೆಟ್ ಮಾಡುತ್ತಿದ್ದ ಈಕೆ, “ತಾನು ಪ್ರಸ್ತುತ ಕರ್ತವ್ಯಕ್ಕೆ ರಜೆ ಹಾಕಿ ಚಿಕ್ಕಮಗಳೂರಿಗೆ ಬಂದಿದ್ದೇನೆ” ಎಂದು ಕಥೆ ಕಟ್ಟಿ ನಂಬಿಸುತ್ತಿದ್ದಳು.

ಇಲ್ಲಿದೆ ನೋಡಿ ವಿಡಿಯೋ:

Fake Woman PSI Arrested for Cheating People of Money & Gold
ಐಷಾರಾಮಿ ಕಾರುಗಳ ಮಾರಾಟ, ಕೋಟ್ಯಾಂತರ ರೂ. ವಂಚನೆ:

ಖಾಕಿ ಗತ್ತನ್ನು ತೋರಿಸಿ ಪರಿಚಯ ಮಾಡಿಕೊಳ್ಳುತ್ತಿದ್ದ ಈ ಖತರ್ನಾಕ್ ಲೇಡಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ನಗದು ಹಾಗೂ ಕೆಜಿಗಟ್ಟಲೆ ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದಾಳೆ. ಅಷ್ಟೇ ಅಲ್ಲದೆ, ಪರಿಚಯಸ್ಥರಿಂದ ಓಡಾಟದ ನೆಪದಲ್ಲಿ ಐಷಾರಾಮಿ ಕಾರುಗಳನ್ನು ಪಡೆದುಕೊಂಡು, ಅವುಗಳನ್ನು ಇತರರಿಗೆ ಅಕ್ರಮವಾಗಿ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದ ವೇಳೆ ಬೇರೆ ಬೇರೆ ಹೆಸರುಗಳಲ್ಲಿದ್ದ ಹಲವು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಈಕೆ ಇದೇ ರೀತಿ ವಂಚನೆ ಎಸಗಿರುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ, ಕಿಂಗ್​ಪಿನ್ ಪ್ರಶಾಂತ್ ಪಾಲುದಾರ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ

ಪ್ರಿಯಕರನಿಗೆ ಹಣ-ಚಿನ್ನ ನೀಡಿರುವುದಾಗಿ ಹೇಳಿಕೆ: ಲವರ್‌ಗೆ ಬಲೆ ಬೀಸಿದ ಪೊಲೀಸರು

ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆರೋಪಿ ನಿವೇದಿತಾ ಗೌಡಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನು ಸಾರ್ವಜನಿಕರಿಗೆ ವಂಚಿಸಿ ಸಂಪಾದಿಸಿದ್ದ ಕೋಟ್ಯಂತರ ರೂಪಾಯಿ ಹಣ ಹಾಗೂ ಬಂಗಾರವನ್ನು ತನ್ನ ಪ್ರಿಯಕರನಿಗೆ ನೀಡಿರುವುದಾಗಿ ಬಾಯಿಬಿಟ್ಟಿದ್ದಾಳೆ. ನಿವೇದಿತಾ ಪ್ರಿಯಕರ ದೇವು ಎಂಬಾತ ಚಿಕ್ಕಮಗಳೂರು ನಗರದ ನಿವಾಸಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Wed, 30 September 26

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Loading...
Unable to load recommendations.
Follow Us