ಚಿಕ್ಕಮಗಳೂರು: ಅರಣ್ಯ ಪ್ರದೇಶಕ್ಕೆ ಬೆಂಕಿ (Forest Fire) ಹತ್ತಿಕೊಂಡ ಘಟನೆ ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ನಡೆದಿದೆ. ಕಾಡ್ಗಿಚ್ಚಿನ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಬೈಕ್ಗಳನ್ನು ರಸ್ತೆ ಪಕ್ಕ ನಿಲ್ಲಿಸಿ ಬೆಂಕಿ (Bikes set on fire) ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಬೆಂಕಿ ಬಿದ್ದ ವ್ಯಾಪ್ತಿಯಲ್ಲಿ ಗಾಳಿ ಜೋರಾಗಿ ಬೀಸಿದ ಪರಿಣಾಮ ಬೆಂಕಿ ಮತ್ತಷ್ಟು ಹೆಚ್ಚಾಗಿದೆ. ಪರಿಣಾಮ ಗಾಳಿಯಲ್ಲಿ ಬಂದ ಬೆಂಕಿಯ ಕಿಡಿ ಅರಣ್ಯ ಇಲಾಖೆ ಸಿಬ್ಬಂದಿಯ ಬೈಕ್ಗಳಿಗೆ ತಗುಲಿದೆ. ಅದರಂತೆ ಮೂರು ಬೈಕ್ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯದ ಕಸ್ಕೆಮನೆಯಲ್ಲಿರುವ ಬಸವನಕೋಟೆ ಮೀಸಲು ಅರಣ್ಯಕ್ಕೆ ಬೆಂಕಿ (Fire breaks out in Basavanakote reserve forest) ಹಚ್ಚಿ ಹತ್ತಾರು ಎಕರೆ ಅರಣ್ಯ ನಾಶಕ್ಕೆ ಕಾರಣವಾಗಿದ್ದ ಓರ್ವ ಆರೋಪಿಯನ್ನು ಬಾಳೆಹೊನ್ನೂರು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಉಳಿದ ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೂ ತನಿಖೆ ಮುಂದುವರಿಸಿದ್ದಾರೆ. ರಘು ಬಂಧಿತ ಆರೋಪಿಯಾಗಿದ್ದು, ಕುಮಾರ್ ಹಾಗೂ ವೆಂಕಟೇಶ್ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಚಾರ್ಮಾಡಿಘಾಟ್ನ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ಅಪಾರ ಪ್ರಮಾಣದ ವನ್ಯಸಂಪತ್ತು ಬೆಂಕಿಗಾಹುತಿ
ಕಳೆದ ಭಾನುವಾರ ರಾತ್ರಿ ಆರೋಪಿಗಳು ಮೀಸಲು ಅರಣ್ಯಕ್ಕೆ ಬೆಂಕಿ ಹಚ್ಚಿದ್ದರು. ಪರಿಣಾಮ ಬೆಂಕಿ ಅರಣ್ಯ ತುಂಬ ಆವರಿಸಿ ಅಕ್ಕಪಕ್ಕದ ತೋಟಗಳಿಗೂ ಹಬ್ಬಿ ಹೊತ್ತಿ ಉರಿದಿತ್ತು. ಭಾರೀ ಅಗ್ನಿ ನಂದಿಸಲು ಅರಣ್ಯ ಇಲಖೆ ಸಿಬ್ಬಂದಿ ತಡರಾತ್ರಿವರೆಗೂ ಕಾರ್ಯಚರಣೆ ನಡೆಸಿದ್ದರು. ಘಟನೆಯಲ್ಲಿ ಹತ್ತಾರು ಎಕರೆ ಅರಣ್ಯ ಪ್ರದೇಶ ಹಾಗೂ ತೋಡ ಬೆಂಕಿಗೆ ಆಹುತಿಯಾಗಿತ್ತು. ಸದ್ಯ ಓರ್ವ ಆರೋಪಿಯನ್ನು ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಇತ್ತ ರಾಜ್ಯದಲ್ಲಿ ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಕೆಲದಿನಗಳಲ್ಲಿ ನೂರಾರಾ ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಅದೇ ರೀತಿಯಾಗಿ ಮೈಸೂರಿನ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಚಾಮರಾಜನಗರದ ಬಂಡಿಪುರ ಅರಣ್ಯದಲ್ಲಿ ಕಾಡ್ಗಿಚ್ಚಿನಿಂದ ಬೆಂಕಿ ಹೊತ್ತುಕೊಂಡು ಹತ್ತಾರು ಎಕರೆ ಗುಡ್ಡಕ್ಕೆ ವ್ಯಾಪಿಸಿತ್ತು. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳು ಹರಸಾಹಸಪಟ್ಟಿದ್ದರು.
ರಾಯಚೂರಿನ ಐಡಿಎಸ್ಎಂಡಿ ಲೇಔಟ್ ಬಳಿಯ ಬೆಟ್ಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಇತ್ತೀಚೆಗೆ ನಡೆದಿತ್ತು. ಆಕಸ್ಮಿಕ ಬೆಂಕಿಯಿಂದ ಅಪಾರ ಪ್ರಮಾಣದ ವನ್ಯಸಂಪತ್ತು ಭಸ್ಮವಾಗುತ್ತಿರುವುದನ್ನು ನೋಡಿದ ಮೂವರು ಯುವಕರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು. ಅಲ್ಲದೆ, ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದು ನೂರಾರು ಎಕರೆ ಅರಣ್ಯ ಸಂಪತ್ತು ಭಸ್ಮವಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಗೆ ಹೊಂದಿಕೊಂಡಿರುವ ಆಲೇಖಾನ್ ಹೊರಟ್ಟಿ ಗುಡ್ಡದಲ್ಲಿ ನಡೆದಿತ್ತು.
ಕೆಲವೆಡೆ ಕಿಡಿಗೇಡಿಗಳು ಅರಣ್ಯ ನಾಶಕ್ಕೆ ಮುಂದಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯದ ಕಸ್ಕೆಮನೆಯಲ್ಲಿರುವ ಬಸವನಕೋಟೆ ಮೀಸಲು ಅರಣ್ಯಕ್ಕೆ ಬೆಂಕಿ ಹಚ್ಚಲಾಗಿತ್ತು. ಇದಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಲಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಮರ ಗಿಡ ಸೇರಿ ಅರಣ್ಯ ಸಂಪತ್ತು ನಾಶವಾಗಿತ್ತು.
ರಾಮನಗರ: ಶಾರ್ಟ್ ಸರ್ಕ್ಯೂಟ್ (Short Circuit) ಉಂಟಾಗಿ 10ಕ್ಕೂ ಹೆಚ್ಚು ಗುಡಿಸಲುಗಳು ಹೊತ್ತಿ ಉರಿದು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಕೂಟಗಲ್ ಗ್ರಾಮದ ಬಳಿಯ ಇರುಳಿಗ ಕಾಲೋನಿಯಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಇನ್ನಷ್ಟು ಬೆಂಕಿ ವ್ಯಾಪಿಸದಂತೆ ತಡೆದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅವಘಡದಲ್ಲಿ ಎರಡು ಮೇಕೆಗಳು ಸಹ ಸಜೀವ ದಹನಗೊಂಡಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:46 pm, Tue, 7 March 23