ಚಿಕ್ಕಮಗಳೂರು: ಅದೊಂದು ಕುಗ್ರಾಮದ ಸರ್ಕಾರಿ ಶಾಲೆ. ಕಿತ್ತು ಹೋದ ಗೋಡೆಯ ಗಾರೆ, ಅಲ್ಲಲ್ಲಿ ಕಿತ್ತು ಹೋದ ಶಾಲೆಯ ಮೇಲ್ಛಾವಣಿ, ಬಣ್ಣಗಳೇ ಕಾಣದ ಗೋಡೆಗಳು. ಕೆಲ ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಸುಂಕಸಾಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಿದ್ದು ಹೀಗೆ. ಏಕೋಪಾಧ್ಯಾಯ ಶಾಲೆಯ ಶಿಕ್ಷಕ ಕಾಂತರಾಜ್ ಹೆಚ್.ಸಿ ಅವರ ಸತತ ಪರಿಶ್ರಮ ಹಾಗೂ ದೂರದೃಷ್ಟಿಯಿಂದ ಶಾಲೆಯ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ.
ಶಿಥಿಲಾವಸ್ಥೆ ತಲುಪಿದ್ದ ಶಾಲೆಗ ಮರುವಿನ್ಯಾಸ:
ಸ್ಪ್ರೈ ಪೇಂಟ್‍ನಿಂದ ಶಾಲೆಯ ಗೋಡೆಗಳು ವರ್ಣರಂಜಿತವಾಗಿದ್ದು ಈ ಮುಂಚೆ ಬೆಂಚು ನೆಲದ ಮೇಲೆ ಕುಳಿತು ಕಲಿಯುತ್ತಿದ್ದ ಮಕ್ಕಳು ಈಗ ರೌಂಡ್ ಟೇಬಲಿನಲ್ಲಿ ಕುಳಿತು ಅಕ್ಷರ ಕಲಿಯಲು ಅಣಿಯಾಗಿದ್ದಾರೆ. ಶಾಲೆಯ ಶಿಕ್ಷಕ ಕಾಂತರಾಜ್ ಶಿಥಿಲಾವಸ್ಥೆ ತಲುಪಿದ್ದ ಶಾಲೆಗ ಮರುವಿನ್ಯಾಸ ಮಾಡಲು ನಿರ್ಧಾರ ಕೈಗೊಂಡಿದ್ದು ಜಿಲ್ಲಾ ಪಂಚಾಯತಿಯಿಂದ ಶಾಲಾ ದುರಸ್ಥಿಗೆ ನೀಡಿದ 50 ಸಾವಿರದ ಜೊತೆಗೆ ತಮ್ಮ ಕೈಯಿಂದ ಸುಮಾರು 40 ಸಾವಿರ ಹಣ ಹಾಕಿ ಶಾಲೆಗೆ ಕಾಯಕಲ್ಪ ಕಲಿಸಲು ಮುಂದಾದರು.
ಲಾಕ್ಡೌನ್ ರಜೆಯ ದಿನಗಳು ಸದ್ಬಳಕೆ:
ಅಸ್ತವ್ಯಸ್ತವಾಗಿದ್ದ ತರಗತಿಗಳ ಕೊಠಡಿಗಳ ವ್ಯವಸ್ಥಿತಗೊಳಿಸಿದ್ದು ಕೊರೊನಾದ ಲಾಕ್ಡೌನ್ನ ರಜೆಯ ದಿನಗಳನ್ನ ಸದ್ಬಳಕೆ ಮಾಡಿಕೊಂಡು ಶಾಲೆಗೆ ಬಂದು ಗೋಡೆಗಳಿಗೆ ಬಣ್ಣ ಬಳಿದು ಚಂದಗಾಣಿಸಿದ್ದಾರೆ. ಶಿಕ್ಷಕ ಕಾಂತರಾಜ್ ಅವರ ಕಾರ್ಯಕ್ಕೆ ಶಾಲೆಯ ಎಸ್‍ಡಿಎಂಸಿ ಸಮಿತಿ ಹಾಗೂ ಪೋಷಕ ವರ್ಗ ಸಾಥ್ ನೀಡಿದ್ದಾರೆ. ಶಾಲೆಯ ಕಂಬಗಳಿಗೆ ಮಕ್ಕಳ ಸೃಜನಶೀಲತೆಯನ್ನು ಪೋಷಿಸುವ ಪೂರಕ ಚಿತ್ರಗಳನ್ನು ಬಿಡಿಸಿ ಶಿಕ್ಷಕ ಕಾಂತರಾಜ್ ಲಾಕ್ಡೌನ್ ಸಮಯವನ್ನ ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ.
ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ:
ಪ್ರಸ್ತುತ ಶಾಲೆಯಲ್ಲಿ 12 ವಿದ್ಯಾರ್ಥಿಗಳಿದ್ದು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಸುತ್ತಮುತ್ತಲ ಗ್ರಾಮಗಳಿಗೆ ಹೋಗಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ಜೊತೆಗೆ ವಿವಿಧ ಭೋದನಾ ವಿಧಾನಗಳನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಮಕ್ಕಳಿಗೆ ಕಲಿಸುವ ಕೌಶಲ್ಯಗಳ ಬಗ್ಗೆ ಶಿಕ್ಷಕ ಕಾಂತರಾಜ್ ಆಸಕ್ತರಾಗಿದ್ದಾರೆ.
ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ:
ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದರೆ ಮಕ್ಕಳು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗುತ್ತಾರೆ. ಶಾಲೆಯ ಕಂಬಗಳ ಮೇಲೆ ಚಿತ್ರಗಳನ್ನು ಬಿಡಿಸಲು ಉದ್ದೇಶಿಸಲಾಗಿದೆ. ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಇನ್ನೋರ್ವ ಶಿಕ್ಷಕರನ್ನು ಶಾಲೆಗೆ ನೇಮಿಸಿ ಮತ್ತಷ್ಟು ಸೌಕರ್ಯಗಳನ್ನು ಕಲ್ಪಿಸಿದರೆ ಶಾಲೆಯ ಅಭಿವೃದ್ಧಯ ಜೊತೆಗೆ ಮಕ್ಕಳ ದಾಖಲಾತಿಯ ಪ್ರಮಾಣವೂ ಹೆಚ್ಚುತ್ತದೆ ಅನ್ನೋದು ಶಿಕ್ಷಕ ಕಾಂತರಾಜ್ ಹೆಚ್.ಸಿ ಅವರ ಅಭಿಪ್ರಾಯ.
ಒಟ್ಟಿನಲ್ಲಿ, ಶಿಕ್ಷಕ ಕಾಂತರಾಜ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು ಸರ್ಕಾರಿ ಶಾಲೆಯ ಬಗ್ಗೆ ಕೀಳರಿಮೆಯಿಂದ ನೋಡುವವರು ಕೂಡ ಹುಬ್ಬೇರಿಸುವಂತೆ ಮಾಡಿರುವ ಶಿಕ್ಷಕನ ಕಾರ್ಯವನ್ನ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.