ಚಿತ್ರದುರ್ಗ: ಪೋಕ್ಸೊ (Pocso) ಪ್ರಕರಣದಡಿ ಬಂಧಿತರಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಯನ್ನು ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಚಿತ್ರದುರ್ಗದ ಮುರುಘಾಶ್ರೀ (Murugha Shri) ವಿರುದ್ಧ ಫೋಕ್ಸೋ ಪ್ರಕರಣದಾಖಲಾಗಿದ್ದು, ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿದ್ದರು. ಮುರಘಾಶ್ರೀ ಜಾಮೀನು ಕೋರಿ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಜಾಮೀನು ಅರ್ಜಿಯನ್ನು ತಿರಸ್ಕೃತ ಮಾಡಿ ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಆದೇಶ ಹೊರಡಿಸಿದ್ದಾರೆ. ಮುರುಘಾಶ್ರೀಗಳು ಸೆ.27ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಮುರುಘಾ ಶರಣರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಸ್ವಾಮೀಜಿ ಅವರಿಗೆ ನಿನ್ನೆ (ಸೆ. 22) ಬೆಳಿಗ್ಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಌಂಜಿಯೋಗ್ರಾಮ್ ಪರೀಕ್ಷೆ ಮಾಡಲಾಗಿತ್ತು. ಇಂದು ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹೀಗಾಗಿ ಪೊಲೀಸ್ ವಾಹನದಲ್ಲಿ ಶಿವಮೊಗ್ಗದಿಂದ ಚಿತ್ರದುರ್ಗ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಕರೋನರಿ ಅಂಜಿಯೋಗ್ರಾಮ್ಗೆ ಮುರುಘಾ ಶರಣರು 21 ನೇ ತಾರೀಖು ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದರು. ನಿನ್ನೆ ಆಂಜಿಯೋಗ್ರಾಮ್ ಮಾಡಲಾಗಿತ್ತು. ಒಂದು ದಿನ ಆರೋಗ್ಯದ ನಿಗಾ ವಹಿಸಲಾಗಿತ್ತು. ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇಲ್ಲಿವರೆಗಿನ ಚಿಕಿತ್ಸೆ ಪ್ರಕಾರ ಅವರ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ. ಅಂಜಿಯೋಗ್ರಾಮ್ ಪರೀಕ್ಷೆ ಯಶಸ್ವಿಯಾಗಿದೆ. ಸ್ವಾಮೀಜಿಗೆ ಅಂಜಿಯೋಗ್ರಾಮ್ ಅವಶ್ಯಕತೆ ಇತ್ತು. ಇಲ್ಲಿ ಬಂದಾಗ ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಸದ್ಯ ದೈಹಿಕವಾಗಿ ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಶಿವಮೊಗ್ಗದಿಂದ ಅವರನ್ನು ವಾಪಸ್ ಚಿತ್ರದುರ್ಗಕ್ಕೆ ಕಳುಹಿಸಲಾಗಿದೆ ಎಂದು ಮೆಗ್ಗಾನ ಆಸ್ಪತ್ರೆ ವೈದ್ಯಕೀಯ ಸಂಸ್ಥೆ ನಿರ್ದೇಶಕ ಡಾ ವಿರೂಪಾಕ್ಷಪ್ಪ. ವಿ ಹೇಳಿದ್ದಾರೆ.
ಹಿನ್ನೆಲೆ
ಮುರುಘಾಶ್ರೀ ಅವರಿಗೆ ಹೃದಯ ಸಮಸ್ಯೆ ಕಾಯಿಲೆ ಇರುವ ಹಿನ್ನೆಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಚಿತ್ರದುರ್ಗ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸೂಚನೆ ನೀಡಿತ್ತು. ಸೆಷನ್ಸ್ ನ್ಯಾಯಾಲಯ ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶ್ರೀಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಕಾಗಿತ್ತು. ಮುರುಘಾಶ್ರೀ ಅವರಿಗೆ ಕರೊನರಿ ಎಂಜೋಗ್ರಾಮ್ ಮಾಡಿಸಲು ಅನುಮತಿ ನೀಡಲು ಮುರುಘಾಶ್ರೀ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Fri, 23 September 22