
ಚಿತ್ರದುರ್ಗ, ಅ.6: ಸ್ನೇಹಿತೆಯ ಹುಟ್ಟುಹಬ್ಬದ ಪಾರ್ಟಿಗೆ ಹೋಗೋಣ ಎಂದು ನಂಬಿಸಿ ಕರೆದೊಯ್ದು, ಸ್ವಂತ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ನರರಾಕ್ಷಸ ತಂದೆಗೆ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2025ರಲ್ಲಿ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಹೆತ್ತ ತಂದೆಯೇ ಮಗಳಿಗೆ “ನಿನ್ನ ಫ್ರೆಂಡ್ ಬರ್ತ್‌ಡೇ ಇದೆ, ಹೋಗೋಣ ಬಾ” ಎಂದು ನಂಬಿಸಿ ಕರೆದೊಯ್ದು ಈ ಕ್ರೂರ ಕೃತ್ಯ ಎಸಗಿದ್ದ.
ಘಟನೆ ಸಂಬಂಧ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮಹಿಳಾ ಪೊಲೀಸ್ ಠಾಣೆಯ ಸಿಪಿಐ ನಯೂಮ್ ಅವರು ಸುದೀರ್ಘ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಜಗದೀಶ್ ಅವರು ಸಂತ್ರಸ್ತೆಯ ಪರವಾಗಿ ಪ್ರಬಲ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗಂಗಾಧರ್ ಚನ್ನಬಸಪ್ಪ ಹಡಪದ್ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಲಾರಿಗೆ ಕಾರು ಭೀಕರ ಡಿಕ್ಕಿ: ಕೊಪ್ಪಳ ಮೂಲದ ಮೂವರು ಯುವಕರು ಸಾವು, ಇಬ್ಬರಿಗೆ ಗಂಭೀರ ಗಾಯ
ಮೈಸೂರಿನ ಗಾಂಧಿನಗರದ ಎಫ್‌ಟಿಎಸ್ ವೃತ್ತದ ಬಳಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಸಣ್ಣ ಕಾರಣಕ್ಕೆ ಕಿರಿಕ್ ತೆಗೆದ ಇಬ್ಬರು ಯುವಕರು, ಮೈಸೂರು ಮಹಾನಗರ ಪಾಲಿಕೆಯ ‘ಅಭಯ’ ವಾಹನದ ಚಾಲಕನಿಗೆ ಚಾಕುವಿನಿಂದ ಭೀಕರವಾಗಿ ಇರಿದು ಪರಾರಿಯಾಗಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ನಿನ್ನೆ ರಾತ್ರಿ ಸುಮಾರು ೧೧:೩೦ರ ವೇಳೆಗೆ ಎಫ್‌ಟಿಎಸ್ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ನಗರಪಾಲಿಕೆ ವಾಹನ ಚಾಲಕ ರಘು ಬಳಿ ಬಂದ ಮಾದೇಶ ಹಾಗೂ ಆಕಾಶ್ ಎಂಬ ಯುವಕರು, “ನಮ್ಮ ಟೀಮ್‌ಗೆ ಸಪೋರ್ಟ್ ಮಾಡುವುದನ್ನು ಬಿಟ್ಟು ಬೇರೆ ಟೀಮ್‌ಗೆ ಯಾಕೆ ಸಪೋರ್ಟ್ ಮಾಡುತ್ತೀಯಾ?” ಎಂದು ಜಗಳ ತೆಗೆದಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ಮಾದೇಶ್ ಮತ್ತು ಆಕಾಶ್ ಏಕಾಏಕಿ ಚಾಕುವಿನಿಂದ ರಘು ಅವರ ಮುಖ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ರಘು ಅವರನ್ನು ತಕ್ಷಣವೇ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದು, ಗಾಯ ಆಳವಾಗಿದ್ದರಿಂದ ವೈದ್ಯರು 30 ಹೊಲಿಗೆಗಳನ್ನು ಹಾಕಿದ್ದಾರೆ. ಘಟನೆ ಸಂಬಂಧ ಎನ್.ಆರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಮಾದೇಶ್ ಮತ್ತು ಆಕಾಶ್‌ನನ್ನು ಬಂಧಿಸಿದ್ದಾರೆ.
ವರದಿ: ಬಸವರಾಜ ಮುದನೂರ್, ರಾಮ್ ಮೈಸೂರು
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:09 pm, Tue, 6 October 26