ಬೆಂಗಳೂರು: ಕೊರೊನಾ ವೈರಸ್ ರಾಜ್ಯದಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಸೋಂಕಿನಿಂದ ಗುಣಮುಖರಾಗುತ್ತಿರುವವರಿಗಿಂತ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ತುಂಬಾನೇ ಕಮ್ಮಿ ಇದೆ. ಅಲ್ಲದೆ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸೋಂಕಿತ ಮಹಿಳೆಯರು ಮೃತಪಟ್ಟಿದ್ದಾರೆ.
ಇನ್ನು ಗಡಿನಾಡು ಬಳ್ಳಾರಿ ಜಿಲ್ಲೆಯಲ್ಲೂ ಇವತ್ತೊಂದೇ ದಿನ ಕೊರೊನಾಗೆ ಮೂವರು ಬಲಿಯಾಗಿದ್ದಾರೆ. ಹೀಗಾಗಿ ಕೊರೊನಾಗೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾಹಿತಿ ನೀಡಿದ್ದಾರೆ.
ಕಲಬುರಗಿಯಲ್ಲಿ ಕೊರೊನಾ ಸೋಂಕಿಗೆ ಮತ್ತಿಬ್ಬರು ಬಲಿ?
ಜಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಸೋಂಕಿಗೆ ಬಲಿಯಾದ ಶಂಕೆ ಇದೆ. ಇಂದು ಹೆಲ್ತ್ ಬುಲಿಟಿನ್ ನಲ್ಲಿ ಅಧಿಕೃತ ಮಾಹಿತಿ ನೀಡೋ ಸಾದ್ಯತೆ ಇದೆ. ಇಲ್ಲಿವರಗೆ ಜಿಲ್ಲೆಯಲ್ಲಿ 18 ಜನರು ಕೊರೊನಾ ದಿಂದ ಮೃತಪಟ್ಟಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಕೊಪ್ಪಳದ ಕೊವಿಡ್ ಆಸ್ಪತ್ರೆಯಲ್ಲಿ 49 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲೂ ಕೊರೊನಾಗೆ ಚನ್ನರಾಯಪಟ್ಟಣ ತಾಲೂಕಿನ 65 ವರ್ಷದ ವೃದ್ಧ ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ ಐವರು ಬಲಿಯಾಗಿದ್ದಾರೆ.
ಉಡುಪಿಯಲ್ಲಿ ಜ್ವರ, ಉಸಿರಾಟದ ತೊಂದರೆಯಿಂದ 10 ತಿಂಗಳ ಹಸುಗೂಸು ಕೊನೆ ಉಸಿರೆಳೆದಿದೆ. ವಿಜಯಪುರ ಜಿಲ್ಲೆಯ ಮೂಲದ ದಂಪತಿಗೆ ಹಾಗೂ ಮಗು ಏಪ್ರಿಲ್ ತಿಂಗಳಲ್ಲಿ ಊರಿಗೆ ಹೋಗಿ 10 ದಿನಗಳ ಹಿಂದಷ್ಟೇ ಉಡುಪಿಗೆ ವಾಪಸ್ ಆಗಿದ್ದರು. ಜೂನ್ 28ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ತಾಲೂಕು ಆಸ್ಪತ್ರೆಗೆ ಕರೆತರುವಾಗ ಮಗು ಮೃತಪಟ್ಟಿದೆ. ಮಗುವಿನ ಗಂಟಲ ದ್ರವ ಪರೀಕ್ಷಾ ವರದಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಯ್ತಿದ್ದಾರೆ.