ಬಾಗಲಕೋಟೆ: ಸುತ್ತ ಹತ್ತು ಹಳ್ಳಿ ಬಡ ಜನರಿಗೆ ಆಸರೆಯಾಗಿದೆ ಹುನಗುಂದ ತಾಲೂಕಿನ ಅಮೀನಗಢ ಪ್ರಾಥಮಿಕ ಆರೋಗ್ಯ ಕೇಂದ್ರ. ಪ್ರತಿನಿತ್ಯ ಸಾವಿರಾರು ಬಡ ಜನರು ಚಿಕಿತ್ಸೆಗೆ ಅಂತ ಇಲ್ಲಿಗೆ ಬರುತ್ತಾರೆ. ಗರ್ಭಿಣಿಯರು, ಬಾಣಂತಿಯರು ಈ ಆರೋಗ್ಯ ಕೇಂದ್ರಕ್ಕೆ ಬಂದು ದಾಖಲಾಗುತ್ತಾರೆ. ಆದರೆ ಕರೆಂಟ್ ಹೋದರೆ ಸಾಕು, ಕತ್ತಲಾದರೆ ಸಾಕು ಇಲ್ಲಿಗೆ ಬರುವ ರೋಗಿಗಳು ಕಂಗಾಲಾಗುತ್ತಾರೆ .ಇದಕ್ಕೆ ಕಾರಣ ಕರೆಂಟ್ ಹೋದರೆ ಇಲ್ಲಿ ಯಾವುದೇ ಬೆಳಕಿನ ಸೌಲಭ್ಯವಿಲ್ಲ. ತಿಂಗಳಾನುಗಟ್ಟಲೆಯಿಂದ ಇದೇ ಸ್ಥಿತಿ ಇದ್ದು ಆರೋಗ್ಯ ಇಲಾಖೆಯ ದುರವಸ್ಥೆಗೆ ಸಾಕ್ಷಿಯಾಗಿದೆ.
ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಛೀಮಾರಿ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ರೋಗಿಗಳು, ಗರ್ಭಿಣಿಯರು, ಬಾಣಂತಿಯರು ಕತ್ತಲಾದರೆ ಸಾಕು ಜನರು ಕಂಗಾಲಾಗುವಂತಹ ಪರಿಸ್ಥಿತಿ ಎದುರಾಗಿದ್ದು, ಇಲ್ಲಿನ ರೋಗಿಗಳ ಪಾಡು ಯಾರಿಗೂ ಬೇಡ ಅಂತಾರೆ. ಯಾಕೆಂದರೆ ಬೆಳಕು ಮೂಡಿಸಲು ಒಂದೇ ಒಂದು ಯುಪಿಎಸ್ ಇಲ್ಲ. ಜನರೇಟರ್ ಅಂತೂ ದೂರದ ಮಾತು. ಆಸ್ಪತ್ರೆಯಲ್ಲಿ ಇದ್ದ ಯುಪಿಎಸ್ ಕಳೆದ ನಾಲ್ಕು ತಿಂಗಳಿಂದ ದುರಸ್ಥಿಯಲ್ಲಿದ್ದು, ಅದನ್ನು ರಿಪೇರಿ ಮಾಡಿಸುವ ಒಂದು ಸಣ್ಣ ಕೆಲಸ ಕೂಡ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಆಗಿಲ್ಲ. ಇದು ಆರೋಗ್ಯ ಇಲಾಖೆ ಎಷ್ಟು ನಿರ್ಲಕ್ಷ್ಯ ಹೊಂದಿದೆ ಎಂಬುದರ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.
ಅಮೀನಗಢ ಒಂದು ಪಟ್ಟಣ ಪಂಚಾಯಿತಿ ಹೊಂದಿದ್ದು, ಒಟ್ಟು 20 ಸಾವಿರ ಜನಸಂಖ್ಯೆ ಹೊಂದಿದೆ. ಜೊತೆಗೆ ಈ ಆಸ್ಪತ್ರೆಯ ವ್ಯಾಪ್ತಿಯಲ್ಲಿ ನಾಲ್ಕು ಹಳ್ಳಿಗಳು ಬರುತ್ತವೆ. ಅದರ ಜೊತೆಗೆ ಇತರೆ ಹಳ್ಳಿಗಳು ಸೇರಿ ಒಟ್ಟು ಹತ್ತು ಹಳ್ಳಿಗಳ ಬಡ ಜನರು, ಗರ್ಭಿಣಿಯರು, ಬಾಣಂತಿಯರು ಇದೇ ಆಸ್ಪತ್ರೆಯನ್ನು ಅವಲಂಭಿಸಿದ್ದಾರೆ. ಆದರೆ ಇಂತಹ ಪ್ರಮುಖ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಹೋದರೆ ಕ್ಯಾಂಡಲ್, ಮೊಬೈಲ್ ಟಾರ್ಚ್ ಬಳಸುವ ಪರಿಸ್ಥಿತಿ ಬಂದಿರುವುದು ದುರಂತ. ಇನ್ನು ಇಲ್ಲಿ ಮೂರು ಜನ ವೈದ್ಯರಿರಬೇಕು. ಆದರೆ ಕೇವಲ ಒಬ್ಬರು ಮಾತ್ರ ವೈದ್ಯರಿದ್ದು, ಅವರು ಆಯುಷ್ ವೈದ್ಯರಿದ್ದಾರೆ. ಆರು ಜನ ಸ್ಟಾಪ್ ನರ್ಸ್ ಇರಬೇಕಾದ ಆಸ್ಪತ್ರೆಯಲ್ಲಿ ಮೂರು ಜನರಿದ್ದು, ವೈದ್ಯರು, ನರ್ಸ್ ಸೇರಿದಂತೆ ಸಿಬ್ಬಂದಿ ಕೊರತೆ ಕೂಡ ಇದೆ.
ಯುಪಿಎಸ್ ಸೌಲಭ್ಯ ಬಗ್ಗೆ ಇಲ್ಲಿನ ವೈದ್ಯರನ್ನು ಕೇಳಿದರೆ ಎರಡು ದಿನದ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಗ ಯುಪಿಎಸ್ ಬಗ್ಗೆ ಅವರಿಗೆ ತಿಳಿಸಲಾಗಿದೆ. ಕಳೆದ ಒಂದು ವಾರದಿಂದ ಕೊರೊನಾ ಲಸಿಕಾ ಕಾರ್ಯದಲ್ಲಿ ಓವರ್ ಲೋಡ್ ಆಗಿ ಯುಪಿಎಸ್ ಕೆಟ್ಟಿದೆ. ಎರಡು ದಿನದಲ್ಲಿ ಸರಿಮಾಡುವುದಾಗಿ ಮೇಲಾಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಎರಡು ದಿನದಲ್ಲಿ ಎಲ್ಲ ಸರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರ ಆರೋಗ್ಯ ಇಲಾಖೆ ಕೊರೊನಾ, ಜನರ ಆರೋಗ್ಯ ರಕ್ಷಣೆ ಅಂತ ಕೋಟಿ ಕೋಟಿ ಖರ್ಚು ಮಾಡುತ್ತದೆ. ಆದರೆ ಆಸ್ಪತ್ರೆಯಲ್ಲಿ ಒಂದು ಯುಪಿಎಸ್ ದುರಸ್ಥಿ ಮಾಡದೇ ರೋಗಿಗಳು ಕಂಗಾಲಾಗುವಂತೆಮಾಡಿದ್ದು ದುರಂತ.
ಇದನ್ನೂ ಓದಿ
Corona Cases and Lockdown News LIVE: ಹಾಸನ ಜಿಲ್ಲೆಯಲ್ಲಿ ಮತ್ತೆ ಹೆಚ್ಚುತ್ತಿರುವ ಕೊವಿಡ್ ಸೋಂಕು
ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್ ಬಿಟ್ಟ ಸಿದ್ದರಾಮಯ್ಯ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡ್ತಾರೆ -ನಳಿನ್ ಕುಮಾರ್ ಕಟೀಲ್