ಮತ್ತೆ ಮತ್ತೆ ಭಯ ಹುಟ್ಟಿಸುತ್ತಿದೆ ಹೆಮ್ಮಾರಿ ಕೊರೊನಾ! ಕೆಲ ಗಡಿ ಭಾಗದಲ್ಲಿ ನಿರ್ಲಕ್ಷ್ಯ
2020 ಮಾರ್ಚ್‌ಗೆ ಇಡೀ ವಿಶ್ವವೇ ಮಹಾಮಾರಿ ಕೊರೊನಾ ಅನ್ನೋ ಸಾಂಕ್ರಮಿಕ ರೋಗದಿಂದ ನಲುಗಿಹೋಗಿತ್ತು. ಸದ್ಯ ಮಾರ್ಚ್ 2021ಕ್ಕೆ ಬಣ್ಣ ಬದಲಿಸಿ ಬಂದಿರೋ ಹೆಮ್ಮಾರಿ ಕರುನಾಡಲ್ಲಿ ಎರಡನೇ ಅಲೆಯ ಭೀತಿ ತರಿಸಿದೆ. ಅದರ ಎಫೆಕ್ಟ್ ಯಾವ ಮಟ್ಟಕ್ಕಿದೆ ಗೊತ್ತಾ.
ದೇಶದಲ್ಲಿ ಒಂದು ವರ್ಷದ ಬಳಿಕ ಹೆಮ್ಮಾರಿ ಕೊರೊನಾ ಆರ್ಭಟ ಜೋರಾಗಿದೆ. ಎರಡನೇ ಅಲೆ ಆರ್ಭಟ ಹೆಚ್ಚಾಗಿದೆ. ಕಳೆದ 7 ದಿನಗಳಲ್ಲಿ ಸರಾಸರಿ ದೈನಂದಿನ ಪ್ರಕರಣಗಳು ಸಂಖ್ಯೆ ಶೇ.39 ರಷ್ಟು ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 188 ಜನರು ಮೃತಪಟ್ಟಿದ್ದಾರೆ. ಭಾರತದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕಿತರು ಮಹಾರಾಷ್ಟ್ರದಲ್ಲಿ ಪತ್ತೆಯಾಗ್ತಿದ್ದಾರೆ. ಮಾರ್ಚ್ 20ರ ಒಂದೇ ದಿನ ಮಹಾರಾಷ್ಟ್ರದಲ್ಲಿ 27,126 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರ ಒಂದರಲ್ಲೇ ಮಾರ್ಚ್ 20 ಒಂದೇ ದಿನ 92 ಸೋಂಕಿತರು ಬಲಿಯಾಗಿದ್ದಾರೆ.
ಕರುನಾಡಿಗೆ ಶುರುವಾಗಿದೆ ಎರಡನೇ ಅಲೆಯ ಕಂಟಕ ಇನ್ನು ಎರಡನೇ ಅಲೆಯ ಭೀತಿ ಎದುರಿಸುತ್ತಿರೋ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಈಗಾಗಲೇ ಪಕ್ಕದ ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮಾ.20ರಂದು 25 ಜನರಿಗೆ ಕೊವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ 4 ದಿನಗಳಲ್ಲಿ 78 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 28,978 ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 28,352 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 158 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 468 ಜನ ಬಲಿಯಾಗಿದ್ದಾರೆ.
ಬೀದರ್ ಜಿಲ್ಲೆಯಲ್ಲೂ ಕೊರೊನಾ 2ನೇ ಅಲೆಯ ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ 7 ದಿನದಲ್ಲಿ 312 ಜನರಿಗೆ ಕೊವಿಡ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ 2 ಶಾಲೆ, ಬೀದರ್‌ನ ಬಿಸಿಎಂ ಹಾಸ್ಟೆಲ್, ಬೀದರ್ ನಗರಸಭೆ, ಕೋರ್ಟ್ ಸಂಕೀರ್ಣ ಸೀಲ್‌ಡೌನ್ ಮಾಡಲಾಗಿದೆ. ಬ್ರಿಮ್ಸ್ ಕೊವಿಡ್ ಆಸ್ಪತ್ರೆಯಲ್ಲಿ 251 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 7 ಜನರ ಸ್ಥಿತಿ ಗಂಭೀರವಾಗಿದ್ದು ಐಸಿಯು ವಾರ್ಡ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಹತ್ತು ದಿನದಲ್ಲಿ ಮಹಾರಾಷ್ಟ್ರದಿಂದ 3 ಸಾವಿರಕ್ಕೂ ಹೆಚ್ಚು ಜನ ಬಂದಿದ್ದಾರೆ. ಗಡಿ ಜಿಲ್ಲೆ ಬೀದರ್ನಲ್ಲಿ ಹೆಸರಿಗೆ ಮಾತ್ರ ಮಹಾರಾಷ್ಟ್ರ ಗಡಿ ಭಾಗದಲ್ಲಿ ಮೂರು ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆದು ತಪಾಸಣೆ ಮಾಡುತ್ತಿದ್ದಾರೆ. ಆದರೆ ತೆಲಂಗಾಣ ಗಡಿ ಭಾಗದಲ್ಲಿ ಮಾತ್ರ ಚೆಕ್ ಪೋಸ್ಟ್ ತೆರೆದಿಲ್ಲ ಹೀಗಾಗಿ ಜನರು ಯಾವುದೆ ಭಯವಿಲ್ಲದೇ ಬೀದರ್ ಪ್ರವೇಶ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 11 ಕೊರೊನಾ ಕೇಸ್ಗಳು ಪತ್ತೆಯಾಗಿವೆ. ಮಾರ್ಚ್ 20ರಂದು ಒಂದೇ ದಿನಕ್ಕೆ ಜಿಲ್ಲೆಯಲ್ಲಿ ಐದು ಜನರಿಗೆ ಮಾಹಾಮಾರಿ ವಕ್ಕರಿಸಿದೆ.
ಕೊರೊನಾ ಪ್ರಕರಣ ಹೆಚ್ಚಿದ್ದರೂ ನಿರ್ಲಕ್ಷ್ಯ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ್ದರೂ ಕೆಲ ಕಡೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದರೂ ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಮುಕ್ತ ಅವಕಾಶ ಸಿಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗಡಿಗಳಲ್ಲಿ ತಪಾಸಣೆ ಮಾಡದೆ ರಾಜ್ಯಕ್ಕೆ ಜನರ ಪ್ರವೇಶಕ್ಕೆ ಅವಕಾಶ ಸಿಕ್ಕಿದೆ. ಕೊವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದಿದ್ರೂ ರಾಜ್ಯ ಪ್ರವೇಶ ಮಾಡಬಹುದು. ಸಿಬ್ಬಂದಿ ಕೇವಲ ಆರ್‌ಟಿಪಿಸಿಆರ್ ಟೆಸ್ಟ್ ಮಾಡುತ್ತಿದ್ದಾರೆ. ಉಳಿದಂತೆ ಯಾವುದೇ ರೀತಿಯ ಕ್ರಮಕೈಗೊಳ್ಳಲಾಗುತ್ತಿಲ್ಲ.
ಇದನ್ನೂ ಓದಿ: ಮಣ್ಣಿನ ಮಡಿಕೆಗೆ ಹೆಚ್ಚಿದ ಬೇಡಿಕೆ; ಕೊರೊನಾ ನಂತರ ಮತ್ತೆ ತಲೆ ಎತ್ತಿದೆ ಕುಂಬಾರರ ವ್ಯಾಪಾರ