ಇಸ್ರೇಲ್-ಇರಾನ್ ಯುದ್ಧ ಪರಿಣಾಮ: ಯಾದಗಿರಿ ಆಯ್ತು ಈಗ ರಾಯಚೂರಿನ ರೈಸ್ ಮಿಲ್ಗಳಿಗೂ ಆರ್ಥಿಕ ಸಂಕಷ್ಟ!
ಇಸ್ರೇಲ್-ಇರಾನ್ ಯುದ್ಧದ ಕಾರಣದಿಂದ ರಾಯಚೂರಿನಿಂದ ಗಲ್ಫ್ ಮತ್ತು ಇತರೆ ರಾಷ್ಟ್ರಗಳಿಗೆ ಅಕ್ಕಿ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದು ರಾಯಚೂರಿನ 95 ರೈಸ್ ಮಿಲ್‌ಗಳಿಗೆ ಆರ್ಥಿಕ ಸಂಕಷ್ಟ ತಂದಿದೆ. ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಪ್ರಕಾರ, ಮಾರುಕಟ್ಟೆ ಕುಸಿತದಿಂದ ಬತ್ತದ ದರ ಕಡಿಮೆಯಾಗಿ ರೈತರಿಗೂ ಸಮಸ್ಯೆಯಾಗುವ ಭೀತಿಯಿದೆ.
ರಾಯಚೂರು, ಮಾರ್ಚ್ 15: ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ, ಕರ್ನಾಟಕದ ಭತ್ತದ ನಾಡು ರಾಯಚೂರಿನ ರೈಸ್ ಮಿಲ್‌ಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ವಿದೇಶಗಳಿಗೆ ರಫ್ತಾಗುತ್ತಿದ್ದ ಅಪಾರ ಪ್ರಮಾಣದ ಅಕ್ಕಿ ಸಾಗಾಟ ಸಂಪೂರ್ಣ ಸ್ಥಗಿತಗೊಂಡಿದ್ದು, ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಆತಂಕ ವ್ಯಕ್ತಪಡಿಸಿದೆ. ರಾಯಚೂರಿನಿಂದ ಯುರೋಪ್, ಅರಬ್, ಆಫ್ರಿಕಾ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಸೋನಾಮಸೂರಿ ಮತ್ತು ಆರ್.ಎನ್.ಆರ್‌ನಂತಹ ಉತ್ತಮ ಗುಣಮಟ್ಟದ ಅಕ್ಕಿ ರಫ್ತಾಗುತ್ತಿತ್ತು.
ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದರಿಂದ ಲಕ್ಷಾಂತರ ಟನ್ ಅಕ್ಕಿ ಮಿಲ್‌ಗಳಲ್ಲಿ ದಾಸ್ತಾನಾಗಿದೆ. ಇದು ಮುಂದುವರಿದರೆ ಮಿಲ್‌ಗಳು ಬಂದ್ ಆಗುವ ಅಪಾಯವಿದೆ. ಸಾಲಗಳು, ನೌಕರರ ವೇತನ ಮತ್ತು ನಿರ್ವಹಣಾ ವೆಚ್ಚಗಳು ರೈಸ್ ಮಿಲ್ ಮಾಲೀಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿವೆ. ಈ ಪರಿಸ್ಥಿತಿ ಏಪ್ರಿಲ್‌ನಲ್ಲಿ ಹೊಸ ಬತ್ತದ ಫಸಲು ಬಂದಾಗ ರೈತರಿಗೂ ಆರ್ಥಿಕ ಸಂಕಷ್ಟ ತರಲಿದೆ ಎಂದು ರೈಸ್ ಮಿಲ್ಲರ್ಸ್ ಅಸೋಸಿಯೇಷನ್‌ನ ರಾಜ್ಯ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ್ ತಿಳಿಸಿದ್ದಾರೆ. ಯುದ್ಧ ಪರಿಸ್ಥಿತಿ ಮುಂದುವರಿದರೆ ರಾಜ್ಯದಾದ್ಯಂತ 2000ಕ್ಕೂ ಹೆಚ್ಚು ರೈಸ್ ಮಿಲ್‌ಗಳು ಮತ್ತು ಲಕ್ಷಾಂತರ ರೈತರು ತೀವ್ರವಾಗಿ ಬಾಧಿತರಾಗಲಿದ್ದಾರೆ.
