
ಮಂಗಳೂರು, ಸೆ.30: ಕರಾವಳಿ ಕರ್ನಾಟಕ ಮತ್ತು ರಾಜ್ಯ ರಾಜಧಾನಿ ಬೆಂಗಳೂರು ನಡುವಿನ ರೈಲು ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಸಚಿವಾಲಯದಿಂದ ಭರ್ಜರಿ ಸಿಹಿ ಸುದ್ದಿ ನೀಡಿದೆ. ಪ್ರಸ್ತುತ ಚಲಿಸುತ್ತಿರುವ ಮಡಗಾಂವ್ (ಗೋವಾ) – ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಜಂಕ್ಷನ್ ಮಾರ್ಗವಾಗಿ ಮಡಗಾಂವ್‌ಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅಧಿಕೃತವಾಗಿ ತಿಳಿಸಿದ್ದಾರೆ. ಈ ಕುರಿತು ಮಂಗಳೂರಿನ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ ರೈಲ್ವೆ ಸಚಿವರು, ಹೊಸ ಸೇವೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ಪ್ರಸ್ತುತ ಮಂಗಳೂರು ಸೆಂಟ್ರಲ್ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 20646/20645 ವಂದೇ ಭಾರತ್ ರೈಲು ಸೇವೆಯನ್ನು ಯಶವಂತಪುರಕ್ಕೆ (ಬೆಂಗಳೂರು) ಲಂಬಿಸಲಾಗುತ್ತಿದೆ. ಈ ನವೀಕೃತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 26655/26656 (ಯಶವಂತಪುರ – ಮಡಗಾಂವ್ – ಯಶವಂತಪುರ) ಹೆಸರಿನಲ್ಲಿ ಹೊಸ ವೇಳಾಪಟ್ಟಿಯೊಂದಿಗೆ ಸಂಚರಿಸಲಿದೆ. ಯಶವಂತಪುರದಿಂದ ಹೊರಟು ಮಂಗಳೂರು ಜಂಕ್ಷನ್ ಮಾರ್ಗವಾಗಿ ಗೋವಾದ ಮಡಗಾಂವ್ ತಲುಪಲಿದೆ.
ಡಿಸೆಂಬರ್ 31, 2023 ರಿಂದ ಮಂಗಳೂರು ಸೆಂಟ್ರಲ್ – ಮಡಗಾಂವ್ ನಡುವೆ ಆರಂಭವಾಗಿದ್ದ ವಂದೇ ಭಾರತ್ ರೈಲು ಕೇವಲ 5 ಗಂಟೆ 30 ನಿಮಿಷಗಳಲ್ಲಿ ಪ್ರಯಾಣ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಈ ಸೇವೆಯನ್ನು ಬೆಂಗಳೂರಿಗೆ ವಿಸ್ತರಿಸಿರುವುದರಿಂದ ಘಟ್ಟದ ಸಾಲಿನ ಮೂಲಕ ರಾಜಧಾನಿಗೆ ಪ್ರಯಾಣಿಸುವ ಉದ್ಯಮಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಅತ್ಯಂತ ವೇಗದ ಮತ್ತು ಆರಾಮದಾಯಕ ಪ್ರಯಾಣದ ಸೌಲಭ್ಯ ಲಭ್ಯವಾಗಲಿದೆ.
ಇದನ್ನೂ ಓದಿ: ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ರೈಲು: ಕಡಿಮೆ ದರದಲ್ಲಿ 8 ಗಂಟೆಯ ಪ್ರಯಾಣ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಯಶವಂತಪುರದಿಂದ ಹೊರಡುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್, ಹಾಸನ-ಘಟ್ಟದ ಸಾಲು ಹಾಗೂ ಕರಾವಳಿಯ ಪ್ರಮುಖ ಪ್ರವಾಸಿ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಜೋಡಿಸಲಿದೆ.
ಯಶವಂತಪುರ (ಬೆಂಗಳೂರು) (ಆರಂಭಿಕ ನಿಲ್ದಾಣ)
ಶ್ರವಣಬೆಳಗೊಳ
ಹಾಸನ
ಸಕಲೇಶಪುರ
ಸುಬ್ರಹ್ಮಣ್ಯ ರೋಡ್
ಕಬಕ ಪುತ್ತೂರು
ಮಂಗಳೂರು ಜಂಕ್ಷನ್
ಉಡುಪಿ
ಕುಂದಾಪುರ
ಬೈಂದೂರು
ಮುರುಡೇಶ್ವರ
ಗೋಕರ್ಣ ರೋಡ್
ಕಾರವಾರ
ಮಡಗಾಂವ್ (ಗೋವಾ) (ಅಂತಿಮ ನಿಲ್ದಾಣ)
ಕರಾವಳಿ ಕರ್ನಾಟಕ, ಮಲೆನಾಡು ಹಾಗೂ ಗೋವಾ ಪ್ರದೇಶಗಳಿಗೆ ಒಂದೇ ಹೈ-ಸ್ಪೀಡ್ ರೈಲು ಸಂಪರ್ಕ ಕಲ್ಪಿಸುತ್ತಿರುವುದರಿಂದ ಪ್ರವಾಸೋದ್ಯಮ ಮತ್ತು ವ್ಯಾಪಾರ ವಹಿವಾಟಿಗೆ ಭಾರಿ ವೇಗ ಸಿಗಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ