ಮಂಗಳೂರು: ಗೂಡ್ಸ್ ರೈಲಿಗೆ ಸಿಲುಕಿ ಸುಮಾರು 20 ಎಮ್ಮೆಗಳು ಮೃತಪಟ್ಟಿರುವ ಘಟನೆ ಬೈಕಂಪಾಡಿಯ ಅಂಗರಗುಂಡಿಯಲ್ಲಿ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಭಾನುವಾರ ತಡರಾತ್ರಿಗೂಡ್ಸ್ ರೈಲಿಗೆ ಸಿಲುಕಿ ಎಮ್ಮೆಗಳು ಸಾವನ್ನಪ್ಪಿವೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ. ಗೂಡ್ಸ್ ರೈಲು ಕಂಕನಾಡಿಯಿಂದ ಎಂಸಿಎಫ್ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರೈಲಿನಿಂದ ತಪ್ಪಿಸಿಕೊಳ್ಳಲು ಹೋಗಿ ಕೆಲವು ಎಮ್ಮೆಗಳು 25 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿವೆ ಎಂದು ಹೇಳಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಉಳಿದ ಎಮ್ಮೆಗಳನ್ನು ರಕ್ಷಿಸಿದ್ದಾರೆ.
ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆಯಲ್ಲಿ ನಡೆದಿದೆ. ಕೊಡಾಜೆಯಲ್ಲಿ ರಸ್ತೆ ಬದಿ ನಿಂತಿದ್ದ ಆಲ್ಟೋ ಕಾರಿಗೆ ಹಿಂಬದಿಯಿಂದ ಬಂದ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಆಲ್ಟೋ ಕಾರಿನೊಳಗಿದ್ದ ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ.
ಇದನ್ನೂ ಓದಿ: ಹಾಸನ: ಸಕಲೇಶಪುರದ ಗುಳಗಳಲೆಯಲ್ಲಿ ಕಾಡಾನೆ ದಾಳಿ, ಇಬ್ಬರಿಗೆ ಗಾಯ
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳದ ಕಣ್ಣೂರಿನ ಅರಣ್ಯ ಪ್ರದೇಶದಲ್ಲಿ ಐದು ಮಂದಿಯ ಮಾವೋವಾದಿಗಳ ಗುಂಪು ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಗುಂಪನ್ನು ಮಾವೋವಾದಿ ಮೊಯ್ದೀನ್ ನೇತೃತ್ವ ವಹಿಸಿದ್ದಾರೆ ಎಂದು ನಂಬಲಾಗಿದೆ. ಈ ಗುಂಪಿನಲ್ಲಿ ಮಹಿಳಾ ಸದಸ್ಯೆಯೂ ಸೇರಿದ್ದಾರೆ ಎನ್ನಲಾಗಿದೆ.
ತನಿಖೆ ಆರಂಭಿಸಿರುವ ಕೇರಳ ಪೊಲೀಸರಿಗೆ, ಈ ಗುಂಪು ಇರಟ್ಟಿಯ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಮನೆಯೊಂದಕ್ಕೆ ಬಂದು ಆಹಾರ ಕೇಳಿದೆ ಮತ್ತು ಅವರ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಿದೆ ಎಂದು ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Mon, 15 May 23