ಮಂಗಳೂರು: ಚರಂಡಿ ಕಾಮಗಾರಿ ವೇಳೆ ಕಾಂಪೌಂಡ್​ ಕುಸಿದು ಓರ್ವ ವ್ಯಕ್ತಿ ಸಾವು; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 30, 2023 | 7:52 PM

ಸಾವು ಹೇಗೆ ಬರುತ್ತದೆ ಎಂದು ಹೇಳಲು ಅಸಾಧ್ಯ. ಹೌದು, ಅದರಂತೆ ಮಂಗಳೂರಿನ ಸುರತ್ಕಲ್​ ಬಳಿಯ ಕೃಷ್ಣಾಪುರದ ಕೆಇಬಿ ಬಳಿ ತಮ್ಮ ಪಾಡಿಗೆ ತಾವು ಚರಂಡಿ ಕಾಮಗಾರಿ ಮಾಡುತ್ತಿದ್ದ ವೇಳೆ, ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್​ ಕುಸಿದು ಬಿದ್ದಿದೆ. ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೇ, ಮತ್ತೋರ್ವನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ದಕ್ಷಿಣ ಕನ್ನಡ, ಆ.30: ಚರಂಡಿ ಕಾಮಗಾರಿ ವೇಳೆ ಕಾಂಪೌಂಡ್​ ಕುಸಿದು ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಮಂಗಳೂರಿನ ಸುರತ್ಕಲ್​ (Surathkal) ಬಳಿಯ ಕೃಷ್ಣಾಪುರದ ಕೆಇಬಿ ಬಳಿ ನಡೆದಿದೆ. ಬಜ್ಪೆ ಕರಂಬಾರು ಗ್ರಾಮದ ನಿವಾಸಿ ಹನೀಫ್(51) ಮೃತ ವ್ಯಕ್ತಿ. ಮತ್ತೋರ್ವ ಕಾರ್ಮಿಕ ಮಣಿ ಎಂಬುವವರಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಷರೀಫ್ ಎಂಬುವವರು ನಡೆಸುತ್ತಿದ್ದ ಚರಂಡಿ ಕಾಮಗಾರಿ ಇದಾಗಿದ್ದು, ಈ ವೇಳೆ ಏಕಾಏಕಿ ಮನೆ ಕಾಂಪೌಂಡ್(Compound) ಕುಸಿದು, ಚರಂಡಿ ಕೆಲಸ ಮಾಡುತ್ತಿದ್ದವರ ಮೇಲೆ ಕುಸಿದಿದೆ. ಈ ಕುರಿತು ಸುರತ್ಕಲ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

​ ತೆಂಗಿನಕಾಯಿ ಸುಲಿಯುವ ವೇಳೆ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಧಾರವಾಡ: ಕಲಘಟಗಿ ತಾಲೂಕಿನ ಬೊಗೆನಾಗರಕೊಪ್ಪದಲ್ಲಿ ತೆಂಗಿನಕಾಯಿ ಸುಲಿಯುವ ವೇಳೆ ವಿದ್ಯುತ್ ತಂತಿ ತಗುಲಿ 24 ವರ್ಷದ ಯುವಕ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಮಾಂತೇಶ್ ಈಳಿಗೇರ(24) ಮೃತ ವ್ಯಕ್ತಿ. ಮಂಜುನಾಥ ಚಟ್ನಿ ಎಂಬುವರ ಜಮೀನಿನಲ್ಲಿ ಮಂಜುನಾಥ್ ದಿನಗೂಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಕಲಘಟಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಕರೇಕಟ್ಟೆ ಗ್ರಾಮದಲ್ಲಿ ಜನ ನೋಡುತ್ತಿದ್ದಂತೆ ರಸ್ತೆಯಲ್ಲಿ ಮಲಗಿದ್ದ ಶ್ವಾನಗಳ ಮೇಲೆ ಕಾರ್ ಹಾಯಿಸಿಕೊಂಡು ಹೋದ ದುಷ್ಟ, ಒಂದು ಸಾವು

ಸಾರಿಗೆ ಸಂಸ್ಥೆ ಬಸ್‌ಗೆ ಲಾರಿ ಡಿಕ್ಕಿ; ಪ್ರಯಾಣಿಕರಿಗೆ ಗಾಯ

ಧಾರವಾಡ: ಸಾರಿಗೆ ಸಂಸ್ಥೆ ಬಸ್‌ಗೆ ಲಾರಿ ಡಿಕ್ಕಿಯಾಗಿ ಬಸ್ ಚಾಲಕ ಮತ್ತು ನಾಲ್ವರು ಮಹಿಳಾ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಬಳಿ ನಡೆದಿದೆ. ಧಾರವಾಡದಿಂದ ಹೆಬ್ಬಳ್ಳಿ ಗ್ರಾಮಕ್ಕೆ ಬಸ್ ಹೊರಟಿದ್ದ ವೇಳೆ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಿಕ್ಕಿ ರಭಸಕ್ಕೆ ಲಾರಿ ಮತ್ತು ಬಸ್ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನು ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ರಾಣಿಕ್ರಾಸ್ ಬಳಿ ಚಲಿಸುತ್ತಿದ್ದ ಬೈಕ್​ಗೆ ಸೈಡ್​ ಇಂದ ಬಂದ ಟಿಪ್ಪರ್ ಡಿಕ್ಕಿಯಾಗಿ ಅದರ ಚಕ್ರಕ್ಕೆ ಸಿಲುಕಿ ವೃದ್ದೆ ದುರ್ಮರಣಕ್ಕೀಡಾಗಿದ್ದಾಳೆ. ತಾಲೂಕಿನ ಸಿಂಗಹಳ್ಳಿ ಗ್ರಾಮದ ನಾರಾಯಾಣಮ್ಮ (65 ) ಮೃತ ವೃದ್ದೆ. ಸಿಗ್ನಲ್ ಬಳಿ ವೇಗವಾಗಿ ಟಿಪ್ಪರ್ ಚಲಿಸಿದ ಕಾರಣ‌ ಈ ಅವಘಡ ನಡೆದಿದೆ. ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಕೆಂಪೇಗೌಡ ಏರ್ಪೋಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ